ಯಾದಗಿರಿ: ಇಲ್ಲಿಯ ಅಂಬೇಡ್ಕರ್ ನಗರದ 17 ಮತ್ತು 18 ನೇ ವಾರ್ಡಿನಲ್ಲಿ ಕಳೆದ 30 ವರ್ಷಗಳಿಂದ ನೀರಿನ ಸಮಸ್ಯೆ ಇದ್ದು, ಕೂಡಲೇ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವಾರ್ಡುಗಳಲ್ಲಿ ಸುಮಾರು 2000 ಜನರಿದ್ದು, ಸುಮಾರು 30 ವರ್ಷಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ನಿತ್ಯ ಕೊಡ ಹೊತ್ತುಕೊಂಡು ಮಹಿಳೆಯರು, ವೃದ್ಧರು ಸುಮಾರು 1 ಕಿ.ಮೀ. ದೂರದಿಂದ ನೀರು ತುರುತ್ತಾರೆ ಎಂದು ತಿಳಿಸಿದರು.
ನಗರಸಭೆಯವರು ಬೆಳಗಿನ ಜಾವ 2.45ಕ್ಕೆ ನೀರು ಬಿಡುತ್ತಾರೆ. ನೀರು ಸರಿಯಾಗಿ ಸರಬರಾಜು ಆಗುವುದಿಲ್ಲ. ವಯಸ್ಸಾದವರು ಎಷ್ಟೋ ಬಾರಿ ತಲೆಯ ಮೇಲೆ ಕೊಡ ಹೊತ್ತುಕೊಂಡು ಬರುವಾಗ ಕಾಲು ಜಾರಿ ಬಿದ್ದ ಉದಾಹರಣೆಗಳು ಸಾಕಷ್ಟಿವೆ ಎಂದು ತಿಳಿಸಿದರು.
ಸರ್ಕಾರ ಕುಡಿಯವ ನೀರಿಗಾಗಿ ಬಜೆಟ್ ಇಟ್ಟಿದ್ದರೂ, ಈ ಭಾಗಕ್ಕೆ ನೀರು ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಓಣಿಗೆ ಬಂದು ಪರಿಶೀಲನೆ ಮಾಡಿ ಗುಡ್ಡದ ಮೇಲೆ ಗವೇಶ್ವರ ಮಠದ ಮೇಲೆ ಒಂದು ಟ್ಯಾಂಕ್ ಮಾಡಿ ಅಲ್ಲಿಂದ ಸುಮಾರು 2,000 ಜನರಿಗೆ ಓಣಿಯಲ್ಲಿ ಪೈಪ್‌ಲೈನ್ ಮಾಡಿ ಜನರಿಗೆ ಶಾಶ್ವತವಾಗಿ ನೀರಿನ ಸಮಸ್ಯೆ ಬಗೆಹರಿಸ ಬೇಕು ಎಂದು ಆಗ್ರಹಿಸಿದರು.
ಬೇಸಿಗೆಯಲ್ಲಿ ತಾತ್ಕಾಲಿಕವಾಗಿ ದಿನಾಲು ಎರಡು ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಬೇಕು. ಬಡಾವಣೆಗೆ ಖುದ್ದು ಭೇಟಿ ನೀಡಿ, ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಇಲ್ಲದಿದ್ದರೇ ಅಂಬೇಡ್ಕರ್ ನಗರದ ನಿವಾಸಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಯಾದಗಿರಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದ ಉಪಾಧ್ಯಕ್ಷ ಭೀಮಪ್ಪ ಕಾಗಿ, ನಗರಸಭೆ ಸದಸ್ಯ ಅಯ್ಯಣ್ಣ ಸುಂಗಲಕರ್, ಮರೆಪ್ಪ ಚಟ್ಟೆರಕರ್, ಪ್ರಭು ಬೊಮ್ಮನ, ಗೋಪಾಲ ತಳಿಗೇರಿ, ಸೈದಪ್ಪ ಸುಂಗಲಕರ್, ಶಿವರಾಜ ಅನವರ, ಶರಣು ನಾಟೇಕರ, ಮಲ್ಲು ಕೂಡ್ಲಿಗಿ, ಮಲ್ಲಿಕಾರ್ಜುನ ಪೂಜಾರಿ, ಮಲ್ಲಿ ಕಾರ್ಜುನ ಬಿಜಾಸಪೂರ, ಗುಂಡಪ್ಪ ಬೂಶೆಟ್ಟಿ, ಗುರು ಈಟೆ, ಮಲ್ಲು ಆಶನಾಳ, ಗುರು ಸುಂಗಲ, ಮಲ್ಲು ಈಟೆ ಮುಂತಾದವರು ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.