ADVERTISEMENT

ಯೋಜನೆ ಲಾಭ ಪಡೆಯಲು ಸಲಹೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 8:17 IST
Last Updated 13 ಸೆಪ್ಟೆಂಬರ್ 2013, 8:17 IST

ಯಾದಗಿರಿ: ಗ್ರಾಮೀಣ ಪ್ರದೇಶದ ರೈತರ ಅನುಕೂಲಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರ ಲಾಭ ಪಡೆದು ಆರ್ಥಿಕವಾಗಿ ಪ್ರಗತಿ ಸಾಧಿಸುವಂತೆ ಕೃಷಿ ಇಲಾಖೆ ಸಹಾಯ ನಿರ್ದೇಶಕ ಬಿ. ಸುರೇಶ ಸಲಹೆ ನೀಡಿದರು.

ಗುರುವಾರ ಹತ್ತಿಕುಣಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಕೆ. ಹೊಸಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಭೂ ಚೇತನ ಯೋಜನೆಯಡಿ ರೈತರಿಗಾಗಿ ಹಮ್ಮಿಕೊಂಡಿದ್ದ ಕ್ಷೇತ್ರೋತ್ಸವ ಉದ್ಘಾಟಿಸಿ ಅವರು ಮಾತ­ನಾಡಿದರು.

ರೈತರಿಗೆ ಇಲಾಖೆಯ ಯೋಜನೆ­ಗಳನ್ನು ಪ್ರಾಮಾಣಿಕವಾಗಿ ತಲುಪಿಸಲು ಸಿಬ್ಬಂದಿಗಳ ಸಹಕಾರದಿಂದ ಪ್ರಯತ್ನ ಮಾಡಲಾಗುತ್ತಿದೆ. ರೈತರು ಸಜ್ಜೆ ಬೆಳೆಯನ್ನು ಬೆಳೆಯುವುದರಿಂದ ಭೂಮಿಯ ಫಲವತ್ತತೆ ಹೆಚ್ಚಿಸಿ, ಅಧಿಕ ಇಳುವರಿ ಪಡೆಯಲು ಸಹಾಯಕವಾಗುತ್ತದೆ ಎಂದರು.

ತೊಗರಿ ಬೆಳೆಗೆ ಬರುವ ರೋಗಗಳನ್ನು ನಿಯಂತ್ರಿಸುವ ಕುರಿತು ಮಾಹಿತಿ ನೀಡಿ, ಔಷಧಿಗಳ ಪ್ರಮಾಣ ಬಳಕೆ ವಿವರಿಸಿದ ಅವರು, ಝಿಂಕ್ ಸಲ್ಫೇಟ್, ಬೋರಾನ್, ಜೀಪ್ಸಮ್, ಬಳಕೆ ಮಾಡುವಂತೆ ತಿಳಿಸಿದರು.

ಈ ಭಾಗದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಪಂಪ್‌ಸೆಟ್ ಹೊಂದಿರುವುದರಿಂದ ತರಕಾರಿ ಬೆಳೆಯಲು ಹೆಚ್ಚಿನ ಗಮನ ನೀಡಬೇಕು.  ಶೇಂಗಾ ಬಿತ್ತನೆ ಸಮಯ ಹತ್ತಿರವಾಗುತ್ತಿದ್ದು, ಶೇಂಗಾ ಬೀಜ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೃಷಿ ಅಧಿಕಾರಿ ವಿಶ್ವನಾಥ ಮಾತನಾಡಿ, ಆಹಾರ ಉತ್ಪನ್ನ ಹೆಚ್ಚಿಸಲು ಕ್ಷೇತ್ರೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಕೃಷಿ ಅಧಿಕಾರಿಗಳಾದ ಮಲ್ಲಿನಾಥ ಪಟ್ಟೇದಾರ, ಸಚಿನ್, ಗ್ರಾಮದ ರೈತರಾದ ಬಿಂದುರಡ್ಡಿ ಪಟವಾರಿ, ಮಲ್ಲಪ್ಪ ಪೂಜಾರಿ, ನಾಗಪ್ಪ, ಶಿವಕುಮಾರ ಪರಡಿ, ಹಣಮಂತ ಚಿಂತಗುಂಟಾ ಮುಂತಾದವರು ಇದ್ದರು. ಗಿರಿನಾಥರಡ್ಡಿ ಅಧ್ಯಕ್ಷತೆ ವಹಿಸಿದ್ದರು.

ಇಲಾಖೆ ಅನುಗಾರ ಗುರುಲಿಂಗಮ್ಮ ಸ್ವಾಗತಿಸಿದರು. ನಾಗರಡ್ಡಿ ಮುನ್ನೂರ ನಿರೂಪಿಸಿದರು. ಗಂಗಾಧರ ವಂದಿಸಿದರು. ಈ ಸಂದರ್ಭದಲ್ಲಿ ರೈತರ ಹಲವಾರು ಸಮಸ್ಯೆಗಳಿಗೆ ಅಧಿಕಾರಿಗಳು ಪರಿಹಾರ ಸೂಚಿಸಿದರು. ನೂರಾರು ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.