ADVERTISEMENT

ರೈತರ ಜಮೀನಿಗೆ ಹೆಚ್ಚಿನ ಬೆಲೆ ನೀಡಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 10:50 IST
Last Updated 20 ಮಾರ್ಚ್ 2012, 10:50 IST

ಯಾದಗಿರಿ:  ಕಡೇಚೂರು ಮತ್ತು ಸುತ್ತಲಿನ ಗ್ರಾಮಗಳಲ್ಲಿ ಕೈಗಾರಿಕೆ ಸ್ಥಾಪನೆಗಾಗಿ ಸ್ವಾಧೀನ ಪಡೆಸಿಕೊಳ್ಳುತ್ತಿರುವ ಜಮೀನಿನ ದರ ಹೆಚ್ಚಳ ಮಾಡಬೇಕು ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಭೀಮನಗೌಡ ಕ್ಯಾತನಾಳ ಒತ್ತಾಯಿಸಿದರು.

ತಾಲ್ಲೂಕಿನ ಮುಂಡರಗಿ ಗ್ರಾಮದಲ್ಲಿ ಭಾನುವಾರ ನಡೆದ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಈಗಾಗಲೇ ಜಿಲ್ಲೆಯಲ್ಲಿ ಕೈಗಾರಿಕೆಗಾಗಿ ಸುಮಾರು 3,500 ಎಕರೆ ಭೂಮಿಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಳ್ಳುತ್ತಿದ್ದು, ಭೂಮಿ ನೀಡುವ ರೈತರಿಗೆ ಹೆಚ್ಚಿನ ದರ ನಿಗದಿ ಪಡಿಸಬೇಕು. ಒಂದು ಎಕರೆಗೆ ಕೇವಲ ರೂ. 6 ಲಕ್ಷ ನಿಗದಿ ಮಾಡಿದ್ದು, ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ.

ಒಂದು ಎಕರೆಗೆ ಕನಿಷ್ಠ ರೂ. 12 ರಿಂದ 14 ಲಕ್ಷ ನೀಡಬೇಕು ಎಂದು ಆಗ್ರಹಿಸಿದರು. ಕಟ್ಟಡ ಕಾಮಗಾರಿಗಳಿಗೆ ಅವಶ್ಯಕತೆ ಇರುವ ಮರಳನ್ನು ಪಡೆಯಲು ಸ್ಥಳೀಯರಿಗೆ ಜಿಲ್ಲಾಡಳಿತ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಮುಂಡರಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ರೈತ ಮೋರ್ಚಾ ಜಿಲ್ಲಾ ಘಟಕದ ಉಪಾಧ್ಯಕ್ಷ ಸೋಮನಗೌಡ ಬೆಳಗೇರಾ ಮಾತನಾಡಿ, ಗಡಿ ಭಾಗದ ಚೆಲ್ಹೇರಿ, ನಂದೇಪಲ್ಲಿ ಮತ್ತು ಈಡ್ಲೂರು ಗ್ರಾಮಗಳಲ್ಲಿ ಜಿಲ್ಲಾಡಳಿತ ಮರಳುಗಾರಿಕೆಗೆ ಪರವಾನಗಿ ನೀಡಿದ್ದು ವಿಷಾದದ ಸಂಗತಿ.

ಇದರಿಂದ ಆ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿಯಲಿದ್ದು, ಮುಂಬರುವ ದಿನಗಳಲ್ಲಿ ನೀರೇ ಸಿಗದಂತಹ ಪರಿಸ್ಥಿತಿ ಎದುರಾಗಲಿದೆ. ಅಲ್ಲದೇ ಈ ಮರಳನ್ನು ಪಕ್ಕದ ರಾಜ್ಯಗಳಿಗೆ ಸಾಗಾಣಿಕೆ ಮಾಡಲಾಗುತ್ತಿದೆ. ಆದರೆ ಸ್ಥಳೀಯರಿಗೆ ಅವಶ್ಯಕತೆ ಇರುವ ಮರಳನ್ನು ತಂದರೆ ಅಧಿಕಾರಿಗಳು ರೂ. 5 ರಿಂದ 10 ಸಾವಿರ ದಂಡ ವಿಧಿಸುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಕೂಡಲೇ ಇಂತಹ ಅವೈಜ್ಞಾನಿಕ ಕ್ರಮಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ವಿಭಾಗೀಯ ಸಂಘಟನಾ ಕಾರ್ಯದರ್ಶಿ ಯಲ್ಲಯ್ಯ ನಾಯಕ, ಪ್ರಧಾನ ಕಾರ್ಯದರ್ಶಿ ಶ್ರೀಧರ ಘಂಟಿ, ಮಲ್ಲಿಕಾರ್ಜುನ ಅಂಗಡಿ, ತ್ರಿಶೂಲ್ ಹವಾಲ್ದಾರ, ಲಗಮಣ್ಣ ಮುಂಡ್ರಗಿ, ತಿಪ್ಪಣ್ಣ ರಾಠೋಡ, ಫಕೀರಪ್ಪ ಮುಂತಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.