ADVERTISEMENT

ವಡಗೇರಾದಲ್ಲೊಬ್ಬ ಅಪರೂಪದ ಅತಿಥಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2013, 11:29 IST
Last Updated 19 ಏಪ್ರಿಲ್ 2013, 11:29 IST
ಯಾದಗಿರಿ ಸಮೀಪದ ವಡಗೇರಾದ ಮುಖ್ಯ ದ್ವಾರದ ಹತ್ತಿರ ಮಾವಿನ ಹಣ್ಣನ್ನು ತಿನ್ನುತ್ತಿರುವ ಕೋತಿ
ಯಾದಗಿರಿ ಸಮೀಪದ ವಡಗೇರಾದ ಮುಖ್ಯ ದ್ವಾರದ ಹತ್ತಿರ ಮಾವಿನ ಹಣ್ಣನ್ನು ತಿನ್ನುತ್ತಿರುವ ಕೋತಿ   

ಯಾದಗಿರಿ: ಕಳೆದ ಕೆಲವು ದಿನಗಳ ಹಿಂದೆ ಸಮೀಪದ ವಡಗೇರಾ ಗ್ರಾಮಕ್ಕೆ ಒಬ್ಬ ಅತಿಥಿ ಬಂದಿದ್ದಾನೆ. ಪ್ರತಿಯೊಬ್ಬ  ವ್ಯಾಪಾರಿಯ ಅಂಗಡಿಯ ಮುಂದೆ ಹೋಗುತ್ತಾನೆ. ತನಗೆ ಬೇಕಾದದ್ದನ್ನು ತೆಗೆದುಕೊಂಡು ಹೋಗುತ್ತಾನೆ. ಇತನಿಗೆ ಯಾರು ಏನನ್ನೂ ಹೇಳುವುದಿಲ್ಲ.

ಇತನು ಎಲ್ಲರೊಂದಿಗೆ ಅತಿ ಸಲುಗೆಯಿಂದ ವರ್ತಿಸುತ್ತಾನೆ. ಸಿಟ್ಟಿಗೆ ಬರುವುದಿಲ್ಲ. ಯಾವುದೇ ವಾಹನ ಬಂದರೂ ಅದರ ಮೇಲೆ ಏರಿ ಕುಳಿತುಕೊಳ್ಳುತ್ತಾನೆ. ಎಲ್ಲರ ಪ್ರೀತಿಗೆ ಪಾತ್ರನಾಗಿದ್ದಾನೆ. ಸ್ವಲ್ಪ ಹೊತ್ತು ಕಾಣದಿದ್ದರೆ ಇತನನ್ನು ಹುಡುಕಿಕೊಂಡು ಹೋಗಿ ಬಾಲಕರು ಹಣ್ಣನ್ನು ಕೊಡುತ್ತಾರೆ. ಇತನು ಬೇರಾರೂ ಅಲ್ಲ, ಒಂದು ಮಂಗ.

ವಡಗೇರಾದ ಹನುಮಾನ ಗುಡಿಯ ಪಕ್ಕ ಇಲ್ಲವೇ ಅಂಚೆ ಕಚೇರಿಯ ಪಕ್ಕದಲ್ಲಿ ಸದಾ ಇರುತ್ತದೆ. ತನಗೆ ಹಸಿವಾದರೆ ಹಣ್ಣಿನ ಅಂಗಡಿಯ ಮುಂದೆ ಹೋಗಿ ತನಗೆ ಬೇಕಾದ ಒಂದೇ ಒಂದು ಹಣ್ಣನ್ನು ತೆಗೆದುಕೊಳ್ಳುತ್ತದೆ. ಅಲ್ಲಿಂದ ಅನತಿ ದೂರದಲ್ಲಿ ಕುಳಿತುಕೊಂಡು ತಿನ್ನುತ್ತದೆ.

ಬುಧವಾರ ರಸ್ತೆಯ ಪಕ್ಕ ಮಾವಿನ ಹಣ್ಣನ್ನು ಮಾರುವ ಮಹಿಳೆ ಹತ್ತಿರ ಹೋಗಿ ನಿಂತುಕೊಂಡಿತು. ಹಣ್ಣು ಮಾರುವವಳು ಅದನ್ನು ಓಡಿಸಲು ಎಷ್ಟೇ ಪ್ರಯತ್ನ ಪಟ್ಟರೂ, ಅಲ್ಲಿಂದ ಕದಲಿಲ್ಲ.

ಆಗ ಪಕ್ಕದಲ್ಲಿದ್ದ ಹಣ್ಣು ಮಾರವವರು ಅದಕ್ಕೆ ಒಂದು ಹಣ್ಣು ಕೊಡು ಹೋಗುತ್ತದೆ ಎಂದು ಹೇಳಿದಾಗ, ಆ ಮಹಿಳೆ ತನ್ನ ಪಕ್ಕದಲ್ಲಿನ ಮಾವಿನ ಹಣ್ಣನ್ನು ಮಾರುತ್ತಿದ್ದ ಇನ್ನೊಬ್ಬ ಮಹಿಳೆಯ ಬುಟ್ಟಿಯಲ್ಲಿದ್ದ ಹಣ್ಣನ್ನು ಕೊಡಲು ಹೋದರೆ ತೆಗೆದುಕೊಳ್ಳಲಿಲ್ಲ. ಆಗ ಮಹಿಳೆ ತನ್ನ ಬುಟ್ಟಿಯಿಂದ ಮಾವಿನ ಹಣ್ಣನ್ನು ಕೊಟ್ಟಾಗ ಅದನ್ನು ತೆಗೆದುಕೊಂಡಿತು. ಸಂಪೂರ್ಣ ಹಣ್ಣನ್ನು ತಿಂದ ನಂತರ ತನ್ನ ಎರಡು ಕೈಗಳನ್ನು ನಾಲಿಗೆಯಿಂದ ನೆಕ್ಕಿ ಸ್ವಚ್ಛ ಮಾಡಿಕೊಂಡಿತು.

ಇನ್ನು ಸಾರಿಗೆ ಬಸ್ ಬಂದರೆ ಅದರ ಮೇಲೆ ಏರಿ ಕುಳಿತು ಕೊಳ್ಳುತ್ತದೆ. ಬಸ್ ಬಿಡುವ ಸಮಯದಲ್ಲಿ ಇಳಿಯುತ್ತದೆ. ವಾಹನ ಚಾಲಕರು ಸಹ ಇದಕ್ಕೆ ಏನು ಹೇಳುವುದಿಲ್ಲ. ಪ್ರತಿಯೊಬ್ಬರ ಮನಸ್ಸು ಗೆದ್ದಿರುವ ಈ ಮಂಗನನ್ನು ನೋಡಿ ಸಂತೋಷ ಪಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.