ಯಾದಗಿರಿ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮರೆಮ್ಮ ಶಾಣ್ಯಾನೋರ್ ಸ್ವಗ್ರಾಮವಾದ ದೋರನಳ್ಳಿಯಲ್ಲಿ ಶುಕ್ರವಾರ ರಾತ್ರಿ ವಾಂತಿ-ಭೇದಿ ಉಲ್ಬಣಿಸಿ 20 ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಶನಿವಾರ ಬೆಳಿಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಎ. ಜಿಲಾನಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಲ್ಲಿಕಾರ್ಜುನ ಮುಕ್ಕಾ ಸೇರಿದಂತೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದರು.
ದೋರನಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯವನ್ನು ವಿಚಾರಿಸಿದರು. ಅಧಿಕಾರಿಗಳ ಭೇಟಿ ನೀಡಿದ ಸುದ್ಧಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಳ್ಳೆರಾಯ ಗುಡಿಯಿಂದ ಸರಬರಾಜು ಆಗುತ್ತಿದ್ದ ನೀರನ್ನು ಮತ್ತೆ ಪೂರೈಕೆ ಮಾಡಲಾಗುತ್ತಿದೆ. ಈಚೆಗೆ ಮೋಟಾರ್ ಸುಟ್ಟಿರುವುದರಿಂದ ಈಗ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ ಎಂದರು.
ಸಂಗನಬಾವಿ ಬಳಿ ಕಲುಷಿತ ನೀರು ನಿಂತಿದ್ದರಿಂದ ಬಾವಿಯ ನೀರು ಸೇವಿಸಿ ವಾಂತಿ-ಭೇದಿ ಉಲ್ಬಣಿಸಿದೆ. ಗ್ರಾಮದಲ್ಲಿ ನೀರು ಸರಬರಾಜು ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇಂತಹ ದೊಡ್ಡ ಗ್ರಾಮಕ್ಕೆ ಏಕೈಕ ಕಿರು ನೀರು ಸರಬರಾಜು ಘಟಕವಿದ್ದು, ಕೊಳವೆಬಾವಿ, ತೆರೆದ ಬಾವಿಯ ನೀರನ್ನು ಗ್ರಾಮಸ್ಥರು ಕುಡಿಯಬೇಕು. ಮೋಟಾರ್ ಸುಟ್ಟು ತಿಂಗಳಾದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ದುರಸ್ತಿಗೆ ಮುಂದಾಗಿಲ್ಲ ಎಂದು ದೂರಿದರು.
ಗ್ರಾಮದ ಚರಂಡಿಗಳಲ್ಲಿ ಹೂಳು ತುಂಬಿ ಸೊಳ್ಳೆಗಳ ಕಾಟ ಹೆಚ್ಚಳವಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ ಸಿಇಒ ಜಿಲಾನಿ, ಗ್ರಾಮ ಸ್ವಚ್ಛತೆ, ಬಾವಿ ಬಳಿ ಶುಚಿ, ಹೊಸ ಕೊಳವೆಬಾವಿ, ನೀರು ಸರಬರಾಜಿಗೆ ಮತ್ತೊಂದು ಮೋಟಾರ್ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ರೂ. 50 ಸಾವಿರ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.
ಗ್ರಾಮದಲ್ಲಿ ಸಮರ್ಪಕ ಕುಡಿಯುವ ನೀರು ವ್ಯವಸ್ಥೆ, ಬ್ಲೀಚಿಂಗ್ ಪೌಡರ್, ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಲು ಸ್ಥಳದಲ್ಲಿದ್ದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು. 3 ದಿನಗಳಲ್ಲಿ ಚರಂಡಿ ಹೂಳು ತೆಗೆಯಲು ಕ್ರಮ ಕೈಗೊಳ್ಳುವುದಾಗಿ ಜಿಲಾನಿ ಭರವಸೆ ನೀಡಿದರು.
ಗ್ರಾಮದಲ್ಲಿ ವಾಂತಿ-ಭೇದಿ ಸಂಪೂರ್ಣ ಹತೋಟಿಯಲ್ಲಿದೆ. ವೈದ್ಯರು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಲ್ಲಿಕಾರ್ಜುನ ಮುಕ್ಕಾ ತಿಳಿಸಿದರು.
ನಂತರ ಗ್ರಾಮದಲ್ಲಿ ಓಡಾಡಿದ ಸಿಇಒ ಜಿಲಾನಿ, ಚರಂಡಿಗಳ ಅವ್ಯವಸ್ಥೆಯ ಕಂಡು ಕೆಂಡಮಂಡಲರಾದರು. ಗ್ರಾಮಗಳ ಮುಖ್ಯರಸ್ತೆ, ಕೃಷ್ಣಾ ಗ್ರಾಮೀಣ ಬ್ಯಾಂಕ್ ಮುಂಭಾಗ, ಹಿರೇಅಗಸಿ ಇತರೆಡೆ ಹೂಳು ತುಂಬಿದ ಚರಂಡಿಗಳನ್ನು ಗ್ರಾಮಸ್ಥರು ಅಧಿಕಾರಿಗಳಿಗೆ ತೋರಿಸಿದರು.
ಪಂಚಾಯತ್ ರಾಜ್ ಎಂಜಿನಿಯರಿಂಗ್‌ನ ಕಾರ್ಯಪಾಲಕ ಎಂಜಿನಿಯರ್ ಕಂಧಾರೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನರಸಿಂಗರಾವ್ ಮುತಾಲಿಕ್, ಭೀಮರಾಯ, ಡಾ.ವೆಂಕಟೇಶ, ಡಾ.ಗೌತಮ, ತಾಲ್ಲೂಕು ಪಂಚಾತಿ ಸಹಾಯಕ ಅಧಿಕಾರಿ ಈರಣ್ಣ, ಸುಭಾಷ, ರಾಘವೇಂದ್ರ, ರಂಗಪ್ಪ , ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.