ADVERTISEMENT

ವಿದ್ಯುತ್ ಸಮಸ್ಯೆ: ವಿದ್ಯಾರ್ಥಿಗಳ ಓದಿಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 10:02 IST
Last Updated 8 ಏಪ್ರಿಲ್ 2013, 10:02 IST

ಯಾದಗಿರಿ: ತಾಲ್ಲೂಕಿನ ಬದ್ದೇಪಲ್ಲಿ ಗ್ರಾಮದಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಓದಿಗೆ ತೀವ್ರ ತೊಂದರೆಯಾಗುತ್ತಿದ್ದು, ದೀಪದ ಮಂದ ಬೆಳಕಿನಲ್ಲಿ ಅಭ್ಯಾಸ ಮಾಡುವುದು ಅನಿವಾರ್ಯವಾಗಿದೆ ಎಂದು ಕರವೇ ಗ್ರಾಮ ಘಟಕದ ಅಧ್ಯಕ್ಷ ಕರಿಬಸಯ್ಯ ಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.

ಆಂಧ್ರಪ್ರದೇಶದ ಗಡಿಭಾಗದಲ್ಲಿರುವ ಈ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಪ್ರೌಢಶಾಲೆಯನ್ನು ಎಸ್ಸೆಸ್ಸೆಲ್ಸಿವರೆಗೆ ವಿಸ್ತರಿಸಿದ್ದು, ಈ ಗ್ರಾಮದ ಸುಮಾರು 25 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಈ ವಿದ್ಯಾರ್ಥಿಗಳ ನಿರೀಕ್ಷಿತ ಫಲಿತಾಂಶದ ಮೇಲೆ ಕರಿನೆರಳು ಬೀಳುವಂತಾಗಿದೆ. ಈ ಹಿಂದೆ ವಿದ್ಯುತ್ ಪರಿವರ್ತಕಗಳು ಸುಟ್ಟ 15 ದಿನ ಗ್ರಾಮದಲ್ಲಿ ಕತ್ತಲೆ ಆವರಿಸಿತ್ತು. ವಿದ್ಯುತ್ ಪರಿವರ್ತಕಗಳ ಸಮಸ್ಯೆ ನಿವಾರಣೆ ಆಗುತ್ತಿದ್ದಂತೆಯೇ ಲೋಡ್ ಶೆಡ್ಡಿಂಗ್‌ನ ಭೂತ ಕಾಡುತ್ತಿದೆ ಎಂದು ಹೇಳಿದ್ದಾರೆ.

ವಿಶೇಷವಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಓದಿಗೆ ಅನುಕೂಲವಾಗುವ ದೃಷ್ಟಿಯಿಂದ ಗ್ರಾಮ ಪಂಚಾಯಿತಿ ವತಿಯಿಂದ ಸೋಲಾರ್ ದೀಪಗಳನ್ನು ನೀಡಲಾಗುತ್ತಿತ್ತು. ಆದರೆ ಕಳೆದ ವರ್ಷದದಿಂದ ಸೋಲಾರ್ ದೀಪಗಳನ್ನೂ ನೀಡುತ್ತಿಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಇತ್ತ ವಿದ್ಯುತ್, ಅತ್ತ ಸೋಲಾರ ದೀಪ ಇಲ್ಲದೇ ದೀಪದ ಮಂದ ಬೆಳಕಿನಲ್ಲಿ ವಿದ್ಯಾರ್ಥಿಗಳು ಓದು ಮುಂದುವರೆಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸಮಸ್ಯೆ ಕೇವಲ ಬದ್ದೇಪಲ್ಲಿ ಗ್ರಾಮದಲ್ಲಿ ಮಾತ್ರವಲ್ಲದೇ ತಾಲ್ಲೂಕಿನ ಬಹುತೇಕ ಗ್ರಾಮಗಳದ್ದಾಗಿದೆ. ಕೆಲವೊಂದು ಗ್ರಾಮಗಳಲ್ಲಿ ರಾತ್ರಿ 8 ಅಥವಾ 9 ಗಂಟೆಯವರೆಗೂ ವಿದ್ಯುತ್ ಬರುವುದೇ ಇಲ್ಲ. ಇದರಿಂದಾಗಿಯೇ ಶೈಕ್ಷಣಿಕವಾಗಿ ಜಿಲ್ಲೆ ಹಿಂದುಳಿದಿದೆ. ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶದಲ್ಲಿ ಜಿಲ್ಲೆಯ ಹಿನ್ನಡೆಗೆ ಕಾರಣವಾದ ಪ್ರಮುಖ ಅಂಶಗಳಲ್ಲಿ ವಿದ್ಯುತ್ ಸಮಸ್ಯೆಯು ಒಂದಾಗಿದೆ ಎಂದು ಹೇಳಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಯುವವರೆಗಾದರೂ ದಿನದ 24 ಗಂಟೆ ವಿದ್ಯುತ್ ಸಂಪರ್ಕ ನೀಡಬೇಕು ಎಂದು             ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.