ADVERTISEMENT

ಶಹಾಪುರ: ಅತಿವೃಷ್ಟಿಗೆ ನಲುಗಿದ ಜನ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 9:27 IST
Last Updated 23 ಸೆಪ್ಟೆಂಬರ್ 2013, 9:27 IST

ಶಹಾಪುರ: ತಾಲ್ಲೂಕಿನಲ್ಲಿ ಐದು ವರ್ಷಗಳ ನಂತರ ಅತಿವೃಷ್ಟಿ ಕಾಡಿದೆ.  15 ದಿನಗಳಿಂದ ಸುರಿದ ಮಳೆಗೆ ಹಳ್ಳಿಯ ಜನತೆ ನಲುಗಿ ಹೋಗಿದ್ದಾರೆ.

ತಾಲ್ಲೂಕಿನಲ್ಲಿ ಪ್ರಾಥಮಿಕ ಅಂದಾಜಿನ ಪ್ರಕಾರ 624 ಮನೆಗಳು ಕುಸಿದು ಬಿದ್ದಿವೆ. ಕುಸಿದು ಬಿದ್ದ ಮನೆಯನ್ನು ನಿರ್ಮಿಸಲು ಅಸಾಧ್ಯ. ದೇವರ ಮೇಲೆ ಭಾರ ಹಾಕಿ ಅಳಿದುಳಿದ ಜಾಗದಲ್ಲಿಯೇ ಬದುಕು ಸಾಗಿಸುವುದು ನಮ್ಮ ಕರ್ಮ ಎನ್ನುತ್ತಾರೆ ನಂದಳ್ಳಿ(ಜೆ) ಗ್ರಾಮದ ದೇವಮ್ಮ ಕಾವಲಿ.

ಬಿದ್ದ ಮನೆಯ ಮುಂದೆ ಭಾವಚಿತ್ರವನ್ನು ಇಳಿಸಿಕೊಂಡು ಅರ್ಜಿ ಬರೆಯಿಸಿ ಬಿದ್ದ ಮನೆಗೆ ಸಿಗುವ ಪರಿಹಾರದ  ಪುಡಿಗಾಸಿಗೆ  ನೂರಾರು ರೂಪಾಯಿ ವೆಚ್ಚ ಮಾಡಬೇಕು. ಗ್ರಾಮದಲ್ಲಿ ದಲ್ಲಾಳಿಗಳ ಹಾವಳಿಯೂ ಹೆಚ್ಚಾಗಿದೆ. ಪರಿಹಾರವನ್ನು ಕೋಡಿಸ­ಲಾಗುವುದು ಇಂತಿಷ್ಟು ಹಣ ನೀಡಿ ಎಂಬ ಸುಲಿಗೆ ಕೂಡಾ ನಡೆದಿದೆ ಎನ್ನುತ್ತಾರೆ  ಮಹಿಳೆಯರು.

ಇದು ಮನೆ ಕುಸಿದು ಬಿದ್ದವರ ಕತೆಯಾದರೆ, ಇನ್ನೂ ಬೆಳೆಹಾನಿಗೆ ಸಂಕಷ್ಟ ಅನುಭವಿಸುವ ರೈತರ ಪಾಡು   ಹೇಳ ತೀರದು. ಒಂದಿಷ್ಟು ಬಡತವನ್ನು ಮೆಟ್ಟಿನಿಲ್ಲಿಸುವಂತಹ ಬೆಳೆ ಹತ್ತಿ­. ತಾಲ್ಲೂಕಿನ ಹೆಚ್ಚಿನ ಭಾಗದಲ್ಲಿ ರೈತರು ಹತ್ತಿ ನಾಟಿ ಮಾಡಿದ್ದರು. ಅಕಾಲಿಕ ಸುರಿದ ನಿರಂ­ತರ ಮಳೆಯಿಂದ ಬೆಳೆಯು ಕೊಳೆತು ಹೋಗಿದೆ. ಹೊಲದ ದಂಡೆಯ ಭಾಗದಲ್ಲಿ ಇಂದಿಗೂ ನೀರು ನಿಂತಿವೆ.  ಸಾವಿರಾರು ರೂಪಾಯಿ ವೆಚ್ಚ ಮಾಡಿದ್ದು ಆಗಿದೆ. ಬೆಳೆ ಕೈಗೆ ಬರುವ ಆಶೆ ಕಮರಿದೆ ಎನ್ನುತ್ತಾರೆ ನಿಂಗಣ್ಣ ನಾಯ್ಕೋಡಿ.

ಪರಿಹಾರ ಧನಕ್ಕೆ ಅರ್ಜಿ ಸಲ್ಲಿಸಲು ಪಹಣಿಯ ಜೊತೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಿಂದ ಬಿತ್ತನೆ ಮಾಡಿದ ಬೆಳೆಯ ಪ್ರಮಾಣ ಪತ್ರ ಹೀಗೆ ಹಲವಾರು ದಾಖಲೆಗಳನ್ನು  ಸಂಗ್ರಹಿಸಿ ಮನವಿ ಸಲ್ಲಿಸುವುದು ದೊಡ್ಡ ಸಮಸ್ಯೆ.

ಮಳೆ  ನಿಂತ ಮೇಲೆ ಬರುವ ಸಂಕಷ್ಟಗಳಿಗೆ ಅಧಿಕಾರಿಗಳು ತುಸು ಮಾನವೀಯತೆಯಿಂದ  ಸೂರು ಕಳೆದು­ಕೊಂಡವರಿಗೆ ಹಾಗೂ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸರಿಯಾಗಿ ಸ್ಪಂದಿಸಬೇಕೆಂದು ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಭೂಮಿ ಉಳಿಸಿ ಹೋರಾಟ ಸಮಿತಿ ಸಂಚಾಲಕ ಅಶೋಕ ಮಲ್ಲಾಬಾದಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.