ADVERTISEMENT

ಶಹಾಪುರ: ಅನೈತಿಕ ಚಟುವಟಿಕೆಯ ತಾಣವಾದ ಗುರುಭವನ ಕಟ್ಟಡ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 6:50 IST
Last Updated 19 ಮಾರ್ಚ್ 2012, 6:50 IST

ಶಹಾಪುರ: ಶಿಕ್ಷಕರ ಸಮುದಾಯಕ್ಕಾಗಿ ಎರಡು ದಶಕದ ಹಿಂದೆ ಕೋಟ್ಯಂತರ ಮೌಲ್ಯದ ಜಾಗವನ್ನು ಗುರುಭವನ ಕಟ್ಟಡ ನಿರ್ಮಾಣಕ್ಕೆ ನೀಡಲಾಗಿತ್ತು. ಹತ್ತುವರ್ಷವಾದರು  ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ.
ಸದ್ಯ ಕಟ್ಟಡವು ಪಡ್ಡೆ ಹುಡುಗರ  ತಾಣ ಮತ್ತು ಅನೈತಿಕ ಚಟುವಟಿಕೆಯ ಆಸರೆ ಸ್ಥಳವಾಗಿ ಮಾರ್ಪಟ್ಟಿದೆ.

ಉನ್ನತ ಧ್ಯೇಯವನ್ನು ಇಟ್ಟು ಶಿಕ್ಷಕ ಸಮುದಾಯಕ್ಕೆ ಅನುಕೂಲವಾಗುವ ಹಿತದೃಷ್ಟಿಯಿಂದ ಗುರುಭವನದ ಕಟ್ಟಡ ತಲೆ ಎತ್ತಿತ್ತು. ಆರ್ಥಿಕ ಮುಗ್ಗಟ್ಟಿನ ನಡುವೆ ಕಾಮಗಾರಿ ಕುಂಟುತ್ತಾ ಸಾಗಿ ಮುಕ್ತಾಯ ಹಂತಕ್ಕೆ ಬಂದಿತು. ನಂತರ ಶಿಕ್ಷಕ ಸಮುದಾಯದ ನಡುವೆ ಹೊಂದಾಣಿಕೆಯ ಕೊರತೆ ಹಾಗೂ ಶಿಕ್ಷಕರ ಸಂಘದ ಚುನಾವಣೆಯ ಮನಸ್ತಾಪದಿಂದ ಒಡೆದ ಮನಸ್ಸುಗಳಿಂದ ಕಟ್ಟಡದ ಕೆಲಸ ನೆನೆಗುದಿಗೆ ಬಿದ್ದಿತು. ಸಂಸದರು ಹಾಗೂ ಶಾಸಕರು ತಮ್ಮ ಅನುದಾನದಲ್ಲಿ ನೆರವಿನ ಭಾಗ್ಯ ನೀಡಲಾಗುವುದೆಂದು ನೀಡಿದ ವಚನ ಮರೆತು ಬಿಟ್ಟಿದ್ದಾರೆ ಎನ್ನುತ್ತಾರೆ ಶಿಕ್ಷಕರೊಬ್ಬರು.

ಗುರುಭವನದ ಕಟ್ಟಡ ಆದರ್ಶಪಾಲನೆ ಕೇಂದ್ರವಾಗಬೇಕಾಗಿತ್ತು. ಸದ್ಯ ಬಯಲು ಪ್ರದೇಶದ ಭವನದ ಸುತ್ತಮುತ್ತಲು ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಪಡ್ಡೆ ಹುಡುಗರು ಇಸ್ಪಿಟ್, ಗಾಂಜಾ, ಮಟಕಾ ಬರೆದುಕೊಳ್ಳುವ ಅಡ್ಡೆಯಾಗಿ ಮಾರ್ಪಟ್ಟಿದೆ. ಸಂಜೆ ಕತ್ತಲಾಗುತ್ತಿದ್ದಂತೆ ಮತ್ತೆ ಅನೈತಿಕ ಚುಟುವಟಿಕೆಯ ತಾಣವಾಗಿ ರೂಪಾಂತರವಾಗುತ್ತಿದೆ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬರುತ್ತಲಿದೆ.

ಇವೆಲ್ಲವುಗಳಿಗಿಂತ ಮಿಗಿಲಾಗಿ ಗುರುಭವನಕ್ಕೆ ಹೊಂದಿಕೊಂಡಂತೆ ಸರ್ಕಾರಿ ಸಂಯುಕ್ತ ಪದವಿ ಪೂರ್ವ (ಬಾಲಕಿಯರ) ಕಾಲೇಜು ಇದ್ದು ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿನಿಯರು ಸೇರಿ 1,500ಕ್ಕೂ ಹೆಚ್ಚು ಸಂಖ್ಯೆಯಿದೆ. ಕೋಣೆಗಳಲ್ಲಿ ಪಾಠ ಹೇಳುವಾಗ ಕಿಟಕಿಯನ್ನು ಹಾಕಿಕೊಂಡು ಬೋಧನೆ ಮಾಡುವ ದುಸ್ಥಿತಿ ಬಂದಿದೆ.
 
ಕಿಟಿಕಿ ತೆರೆದರೆ ಕೆಟ್ಟ ವಾಸನೆ ಹಾಗೂ ಪಡ್ಡೆ ಹುಡುಗರು  ವಿದ್ಯಾರ್ಥಿನಿಯರನ್ನು ಚುಡಾಯಿಸಲು ಆಶ್ಲೀಲ ಹಾಡುಗಳನ್ನು ಮೊಬೈಲ್ ಮೂಲಕ ಹಚ್ಚಿ ತೊಂದರೆ ನೀಡುತ್ತಾ  ಖುಷಿ ಪಡುವುದು ಸಾಮಾನ್ಯವಾಗಿದೆ.

ಇಷ್ಟೊಂದು ಕಲುಷಿತ ವಾತಾವರಣ ನಿರ್ಮಾಣಕ್ಕೆ ಮೂಲ ಬಿಂದು ಗುರುಭವನವೇ ಆಗಿದೆ. ಅಷ್ಟೆ ಅಲ್ಲದೆ ಅಲ್ಲಿನ ಸುತ್ತಮುತ್ತಲಿನ ಪ್ರದೇಶದ ಅಂಗಡಿಯವರು ತ್ಯಾಜ್ಯವಸ್ತುಗಳನ್ನು ಎಸೆಯುತ್ತಾರೆ. ಹಂದಿ, ನಾಯಿ ಆಶ್ರಯಕ್ಕೂ ವಾಸಸ್ಥಳವಾಗಿದೆ. ವಿದ್ಯಾರ್ಥಿನಿಯರು ಅಳುಕುತ್ತಲೇ ಕಾಲೇಜಿಗೆ ಬರಬೇಕು. ಸಾಕಷ್ಟು ಬಾರಿ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗೆ ಮನವಿ, ದೂರು, ಪ್ರತಿಭಟನೆ ನಡೆಸಿದರು ಯಾರು ಕಿವಿಗೊಡುತ್ತಿಲ್ಲವೆಂದು ವಿದ್ಯಾರ್ಥಿನಿಯೊಬ್ಬರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಚೆಗೆ ಸಿಪಿಎಸ್ ಶಾಲಾ ಮೈದಾನ ಒತ್ತುವರಿ ಬಗ್ಗೆ ಪರಿಶೀಲನೆ ಮಾಡಲು ಆಗಮಿಸಿದ್ದ ಪ್ರಬಾರ ಸಹಾಯಕ ಅಯುಕ್ತರಾದ ಡಾ.ಬಿ.ಶರಣಪ್ಪ ಸತ್ಯಂಪೇಟೆಯವರಿಗೆ ಸಾರ್ವಜನಿಕರು ಖುದ್ದಾಗಿ ಭೇಟಿಯಾಗಿ ಗುರುಭವನದ ಜಾಗವನ್ನು ಸರ್ಕಾರ ಮರಳಿ  ಪಡೆದುಕೊಳ್ಳಲಿ. ಶಾಲಾ ವಿದ್ಯಾರ್ಥಿನಿಯರಿಗೆ ಹಿಂಸೆಯಿಂದ ಮುಕ್ತಿ ನೀಡಿ ಎಂದು ಮನವಿ ಮಾಡಿದರು.

ತಕ್ಷಣ ಸ್ಪಂದಿಸಿದ ಸಹಾಯಕ ಆಯುಕ್ತರು  ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗೆ ಪತ್ರ ಬರೆದು ವಿವರಣೆ ಕೇಳಲಾಗುವುದು. ನಂತರ ಸರ್ಕಾರ ಮುಂದಿನ ಕ್ರಮ ತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡಿದರು.

ಗುರುಭವನದ ಕಟ್ಟಡವನ್ನು ವಾಪಸ್ಸು ತೆಗೆದುಕೊಳ್ಳಿ ಇಲ್ಲವೆ ತಕ್ಷಣ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಉತ್ತಮ ಪರಿಸರ ನಿರ್ಮಿಸಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ತಾಲ್ಲೂಕು ಎಸ್‌ಎಫ್‌ಐ ಸಂಘಟನೆಯ ಸಂಚಾಲಕ ಶರಣು ಬೊಳಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.