ADVERTISEMENT

ಶಹಾಪುರ: ಸಂಚಾರಕ್ಕೆ ತೊಡಕು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 8:45 IST
Last Updated 17 ಮಾರ್ಚ್ 2012, 8:45 IST
ಶಹಾಪುರ: ಸಂಚಾರಕ್ಕೆ ತೊಡಕು
ಶಹಾಪುರ: ಸಂಚಾರಕ್ಕೆ ತೊಡಕು   

ಶಹಾಪುರ: ರೈತರ ವ್ಯಾಪಾರ ವಹಿವಾಟು ನಡೆಸುವ ಅನುಕೂಲಕ್ಕಾಗಿ ಎಪಿಎಂಸಿಯ ಅಂದಾಜು 70 ಎಕರೆ ಭೂಮಿಯಿದೆ. ಸಿಬ್ಬಂದಿಯ ನಿರ್ಲಕ್ಷ್ಯದ ಸಾಕ್ಷಿಯಾಗಿ ಕಚೇರಿಯ ಮುಂದುಗಡೆ ರಸ್ತೆಗೆ ಹೊಂದಿಕೊಂಡ ಪ್ರದೇಶದಲ್ಲಿ ಕುರಿ, ಮೇಕೆಗಳ ಮಾರಾಟದ ಸಂತೆ ನಡೆಯುತ್ತಿದೆ. ಅದು ಶಹಾಪುರ-ಯಾದಗಿರಿ ರಾಜ್ಯ ಹೆದ್ದಾರಿಯ ನಡುರಸ್ತೆಯ ಮೇಲೆ. ಇದರಿಂದ ವಾಹನ ಸಂಚಾರಕ್ಕೆ ತುಂಬಾ ಅಡಚಣೆಯಾಗಿದೆ.

ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ಹಾಗೂ ನೆರೆಯ ತಾಲ್ಲೂಕಿನಿಂದ ಪ್ರತಿ ಶುಕ್ರವಾರ ವಾರದ ಸಂತೆಯ ದಿನ ಕುರಿ, ಆಡು, ಟಗರು, ಹೋತಮರಿಗಳನ್ನು ಇಲ್ಲಿಗೆ ತರಲಾಗುತ್ತಿದೆ. ಮಾರಾಟದ ಪ್ರಮುಖ ಕೇಂದ್ರಸ್ಥಾನ ಮತ್ತು ಉತ್ತಮ ವಹಿವಾಟು ನಡೆಯುವ ಸಂತೆಯೂ ಇದಾಗಿದೆ. ಖರೀದಿಗಾಗಿ ದಲ್ಲಾಳಿಗಳು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

ಪಟ್ಟಣದ ಎಪಿಎಂಸಿಗೆ ಸುತ್ತಲೂ ಕಂಪೌಂಡ್ ಇದೆ. ಮಾರಾಟ ಮಾಡಲು ಸಾಕಷ್ಟು ಸ್ಥಳದ ಅನುಕೂಲವಿದೆ. ರೈತರು ಮುಕ್ತವಾಗಿ ಪ್ರಾಂಗಣದ ಮುಂದುಗಡೆ ಮೇಕೆಗಳನ್ನು ತಂದು ವ್ಯಾಪಾರ ಮಾಡಬಹುದು.
ಯಾವುದೇ ಶಿಸ್ತುಬದ್ದವಿಲ್ಲದೆ ಬೇಕಾ ಬಿಟ್ಟಿಯಾಗಿ ಹೆದ್ದಾರಿಯ ಮೇಲೆ ಮೇಕೆಗಳನ್ನು ನಿಲ್ಲಿಸಿ ಖರೀದಿ ಹಾಗೂ ಮಾರಾಟದ ವ್ಯಾಪಾರ ನಡೆಯುತ್ತಿದೆ. ಸಂತೆಯ ನಿರ್ವಹಣೆಯ ನೊಗಹೊತ್ತ ಎಪಿಎಂಸಿ ಸಿಬ್ಬಂದಿ ಜಾಣ ಕಿವುಡರಂತೆ ವರ್ತಿಸುತ್ತಾ ಮಾರಾಟ ಮಾಡಲು ತರುವ ಪ್ರತಿ ಕುರಿಗೆ ಇಂತಿಷ್ಟು ಹಫ್ತಾ ವಸೂಲಿಯಲ್ಲಿ ಮಗ್ನರಾಗಿದ್ದಾರೆ. ಆದಾಯದ ಖೊತಾದ ಜೊತೆಗೆ ಸಂಚಾರಕ್ಕೂ ಕಂಟಕರಾಗಿದ್ದಾರೆ ಎಂದು ರೈತ ಮಲ್ಲಪ್ಪ ಆರೋಪಿಸುತ್ತಾರೆ.

 ಹೆದ್ದಾರಿಯ ನಡು ರಸ್ತೆಯ ಮೇಲೆ ವ್ಯಾಪಾರ ನಡೆಸುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಬೆಳಿಗ್ಗೆ ವಾಹನ ದಟ್ಟಣೆ ಅಧಿಕವಾಗಿರುತ್ತದೆ. ತುಸು ವೇಗವಾಗಿ ವಾಹನ ಚಲಾಯಿಸಿದರೆ ರೈತನ ಮೇಲೆ ಹರಿದು ಹೋಗುವ ಅಪಾಯವಿದೆ. ವ್ಯಾಪಾರಕ್ಕೆ ಹಾಗೂ ಮಾರಾಟಕ್ಕೆ ಬಂದ ರೈತರಿಗೆ ತಮ್ಮ ಜೀವದ ಬಗ್ಗೆ ಕೂಡಾ ಅರಿವಿಲ್ಲದೆ ನಿಂತಿರುತ್ತಾರೆ. ಸುರಕ್ಷತೆಯ ದೃಷ್ಟಿಯಿಂದ ಹಾಗೂ ಸುಗಮ ಸಂಚಾರಕ್ಕಾಗಿ ತಕ್ಷಣ ರಸ್ತೆಯ ಮೇಲೆ ನಡೆಯುವ ಸಂತೆಯನ್ನು ರದ್ದುಪಡಿಸಬೇಕೆಂದು  ಏವೂರ ತಾಂಡಾದ ತುಳಜಾರಾಮ ಚವ್ಹಾಣ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಪೊಲೀಸ್ ಸಿಬ್ಬಂದಿಯೂ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡು ಸಂತೆಯ ಸ್ಥಳವನ್ನು ಎಪಿಎಂಸಿ ಪ್ರಾಂಗಣದಲ್ಲಿಯೇ ನಡೆಸುವ ವ್ಯವಸ್ಥೆ ಕಲ್ಪಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಂಡಬೇಕೆಂದು ಕಾರ್ಮಿಕ ಮುಖಂಡ ಮಲ್ಲಯ್ಯ ಪೊಲ್ಲಂಪಲ್ಲಿ ಶಹಾಪುರ ಪೊಲೀಸ್ ಇನ್ಸ್‌ಪೆಕ್ಟರ್ ಸುಧೀರ ಹೆಗಡೆಗೆ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.