ADVERTISEMENT

ಶೇಂಗಾ ಬೀಜ ಕೊರತೆ: ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 9:40 IST
Last Updated 9 ಅಕ್ಟೋಬರ್ 2012, 9:40 IST

ಯಾದಗಿರಿ: ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಬಿತ್ತನೆಗೆ ಶೇಂಗಾ ಬೀಜದ ಅವಶ್ಯಕತೆ ಎದುರಾಗಿದೆ. ಆದರೆ ಕೃಷಿ ಇಲಾಖೆಯಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಿತರಿಸಲು ಬೇಕಾಗಿರುವ ಶೇಂಗಾ ಬೀಜದ ದಾಸ್ತಾನು ಇಲ್ಲದಿರುವುದು ರೈತರಲ್ಲಿ ಆಕ್ರೋಶ ಮೂಡಿಸಿದೆ.

ಮಳೆಯಿಂದ ಉತ್ಸಾಹದಲ್ಲಿರುವ ರೈತರು, ಬಿತ್ತನೆ ಬೀಜಕ್ಕಾಗಿ ರೈತ ಸಂಪರ್ಕ ಕೇಂದ್ರಕ್ಕೆ ಹೋದರೆ, ಬೀಜ ಸಿಗದಂತಾಗಿದೆ. ಇದರಿಂದ ಆಕ್ರೋಶಗೊಂಡ ರೈತರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಆಗಮಿಸಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು.

ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಯಾದಗಿರಿ ತಾಲ್ಲೂಕಿನ ಬಹುತೇಕ ರೈತರು ಶೇಂಗಾ ಬಿತ್ತನೆಗೆ ಮುಂದಾಗಿದ್ದಾರೆ. ಆದರೆ ಬಿತ್ತನೆಗೆ ಶೇಂಗಾ ಬೀಜ ದೊರೆಯದೇ ಇರುವುದರಿಂದ ಆಕ್ರೋಶಗೊಂಡ ರೈತರು, ಶೀಘ್ರದಲ್ಲಿ ಶೇಂಗಾ ಬೀಜ ವಿತರಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಬಿತ್ತನೆ ಬೀಜಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ ರೈತರು, ಈ ಬಗ್ಗೆ ತನಿಖೆ ನಡೆಸಬೇಕು. ಶೆಂಗಾ ಬೀಜಕ್ಕೆ ಎಷ್ಟು ದರ ನಿಗದಿಪಡಿಸಲಾಗಿದೆ ಎಂದು ಪ್ರಶ್ನಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿ ಜಂಟಿ ಕೃಷಿ ನಿರ್ದೇಶಕರು, ಕ್ವಿಂಟಲ್‌ಗೆ 7,500 ನಿಗದಿಪಡಿಸಲಾಗಿದೆ ಎಂದು ಹೇಳುತ್ತಿದ್ದಂತೆಯೇ ಮತ್ತಷ್ಟು ಸಿಟ್ಟಾದ ರೈತರು, ರೈತ ಸಂಪರ್ಕ ಕೇಂದ್ರಗಳಲ್ಲಿ ಕ್ವಿಂಟಲ್ ಶೇಂಗಾ ಬೀಜಕ್ಕೆ ರೂ. 7,800 ಪಡೆಯಲಾಗುತ್ತಿದೆ. ರೈತ ಸಂಪರ್ಕ ಕೇಂದ್ರ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಯಾವುದೇ ರೈತ ಸಂಪರ್ಕ ಕೇಂದ್ರಕ್ಕೆ ತೆರಳಿದರೂ, ಶೇಂಗಾ ಬೀಜದ ಕೊರತೆ ಎದ್ದು ಕಾಣುತ್ತಿದೆ. ಇದರಿಂದಾಗಿ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಬೇರೆ ಜಿಲ್ಲೆ ಅಥವಾ ರಾಜ್ಯದಿಂದ ಶೇಂಗಾ ಬೀಜ ತರಿಸಿಕೊಂಡು ತಕ್ಷಣವೇ ರೈತರಿಗೆ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.

ಸುಮಾರು 6,000 ಕ್ವಿಂಟಲ್‌ಗೂ ಹೆಚ್ಚು ಶೇಂಗಾ ಬೀಜದ ಬೇಡಿಕೆ ಇದೆ. ಇಲ್ಲಿಯವರೆಗೂ ಕೇವಲ 500 ಕ್ವಿಂಟಲ್ ಮಾತ್ರ ಜಿಲ್ಲೆಗೆ ಬಂದಿದೆ. ಇದರಿಂದಾಗಿ ರೈತರು ಬಿತ್ತನೆ ಮಾಡಲು ಪರದಾಡಬೇಕಿದೆ. ಬರಗಾಲ ಆವರಿಸಿದ ಹಿನ್ನೆಲೆ ಎಲ್ಲ ಬೆಳೆಗಳು ಸಂಪೂರ್ಣ ನಷ್ಟವಾಗಿದೆ. ಶೇಂಗಾ ಬೆಳೆಯಲ್ಲಾದರೂ ನೆಮ್ಮದಿ ಪಡೆಯಬೇಕೆಂದರೆ ಬೀಜ ಸಿಗದಂತಾಗಿದೆ ಎಂದು ರೈತರು ತಿಳಿಸಿದರು.

ತಾಲ್ಲೂಕಿನ ಮೈಲಾಪುರ, ಸೈದಾಪುರ, ಹೊನೆಗೇರಾ, ಗಾಜರಕೋಟ್, ಬೆಳಗೇರಾ, ಮುಡರಗಿ, ಹತ್ತಿಕುಣಿ, ಬಳಿಚಕ್ರ, ಹೊಸಳ್ಳಿ, ರಾಮಸಮುದ್ರ, ಚಾಮನಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳ ರೈತರು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ, ಕೂಡಲೇ ಸಮಸ್ಯೆ ನಿವಾರಿಸುವಂತೆ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.