ADVERTISEMENT

`ಸಾಮೂಹಿಕ ವಿವಾಹ: ಮಠಗಳು ನೆರವಾಗಲಿ'

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 10:45 IST
Last Updated 3 ಜೂನ್ 2013, 10:45 IST

ಕೆಂಭಾವಿ: ಇಂದಿನ ದುಂದು ವೆಚ್ಚಗಳನ್ನು ಕಡಿಮೆಗೊಳಿಸಿ ಸರಳ ವಿವಾಹಗಳು ನೆರವೇರಲು ಇಂತಹ ಸಾಮೂಹಿಕ ವಿವಾಹಗಳು ಮಾರ್ಗದರ್ಶಕವಾಗಿವೆ. ಇಂತಹ ಕಾರ್ಯಕ್ಕೆ ಮಠಗಳು ನೆರವು ನೀಡಬೇಕು ಎಂದು ಶಾಸಕ ಗುರು ಪಾಟೀಲ ಶಿರವಾಳ ಹೇಳಿದರು.
ಭಾನುವಾರ ಸಮೀಪದ ನಗನೂರ ಗ್ರಾಮದ ನಗರೇಶ್ವರ ದೇವಸ್ಥಾನದಲ್ಲಿ ಖಂಡೆಪ್ಪ ತಾತಾನವರ ಪಟ್ಟಾಧಿಕಾರ ಮಹೋತ್ಸವ ಮತ್ತು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಬಡವರಿಗೆ ಇತ್ತೀಚಿನ ದಿನಗಳಲ್ಲಿ ಮದುವೆ ಎಂದರೆ ಗಗನ ಕುಸುಮವಾಗಿದೆ. ಸಾಲ ಸೋಲ ಮಾಡಿ ವಿವಾಹ ಮಾಡುವುದೆಂದರೆ ಕಷ್ಟದ ಕೆಲಸ. ಇಂತಹ ಕಾರ್ಯಕ್ರಮ ಏರ್ಪಡಿಸುವುದರಿಂದ ಬಡವ, ಜಾತಿ-ಧರ್ಮದ ಸಂಕೋಲೆಯಿಂದ ಹೊರಬರಲು ಸಹಾಯಕವಾಗುತ್ತದೆ.  ಮಠ ಮಾನ್ಯಗಳು ಸಹಾಯ ಹಸ್ತ ಚಾಚುವ ಮೂಲಕ ಸಮಾಜದ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ. ಎಲ್ಲ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವ ಈ ದಿನಗಳಲ್ಲಿ ಉಚಿತ ಸಾಮೂಹಿಕ ವಿವಾಹಗಳು ಅತ್ಯವಶ್ಯವಾಗಿವೆ ಎಂದು ಹೇಳಿದರು.

119 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನೂತನ ಪೀಠಾಧಿಪತಿ ಖಂಡೆಪ್ಪ ತಾತಾ ಅಧ್ಯಕ್ಷತೆ ವಹಿಸಿದ್ದರು. ಡಾ. ವೀರಭದ್ರ ಶಿವಾಚಾರ್ಯ ಕಡಗಂಚಿ, ಸಿದ್ಧರಾಮನಂದಪುರಿ ಶ್ರೀಗಳು, ಸೂಗೂರೇಶ್ವರ ಶಿವಾಚಾರ್ಯರು, ಶಿವಾನಂದ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಗುರುಪಾದೇಶ್ವರ ಸ್ವಾಮೀಜಿ, ಬಸಯ್ಯ ಸ್ವಾಮೀಜಿ, ಶರಣಪ್ಪ ಶರಣರು, ನಿಂಗಯ್ಯ ತಾತಾ, ಭೀಮರಾಯ ಪೂಜಾರಿ ಸಾನ್ನಿಧ್ಯ ವಹಿಸಿದ್ದರು.

ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಅಮಾತೆಪ್ಪ ಕಂದಕೂರ, ಸಿದ್ರಾಮರೆಡ್ಡಿ ಗೂಗಲ್, ಬಸಣ್ಣ ಬೂದೂರ, ಶಂಕ್ರಪ್ಪಗೌಡ ಪೊಲೀಸ್‌ಪಾಟೀಲ, ಅಶೋಕ ಗೂಗಲ್, ಆಗಮಿಸಿದ್ದರು. ಹಳ್ಳೆಪ್ಪ ಹವಾಲ್ದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣಕುಮಾರ ಅಲ್ಹಾಳ ಸ್ವಾಗತಿಸಿದರು. ಶ್ರೀಮಂತ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.