ADVERTISEMENT

ಸಿಎಸ್ಐ ಹೊಸ ತಂತ್ರಾಂಶಕ್ಕೆ ಚಾಲನೆ

ಯಾದಗಿರಿ: ಪ್ರಧಾನ ಅಂಚೆ ಕಚೇರಿಯಲ್ಲಿ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 6:40 IST
Last Updated 7 ಮಾರ್ಚ್ 2018, 6:40 IST
ಸಿಎಸ್ಐ ಹೊಸ ತಂತ್ರಾಂಶಕ್ಕೆ ಚಾಲನೆ
ಸಿಎಸ್ಐ ಹೊಸ ತಂತ್ರಾಂಶಕ್ಕೆ ಚಾಲನೆ   

ಯಾದಗಿರಿ: ‘150 ವರ್ಷದ ಇತಿಹಾಸ ಹೊಂದಿರುವ ಭಾರತೀಯ ಅಂಚೆ ಈಗ ಸಿಎಸ್ಐ (ಕೋರ್ ಸಿಸ್ಟಂ ಇಂಟಿಗ್ರೇಟೆಸ್) ಹೊಸ ತಂತ್ರಾಂಶ ಅಳವಡಿಸಿಕೊಂಡಿದೆ. ಇನ್ನು ಮುಂದೆ ಎಲ್ಲ ವ್ಯವಹಾರಗಳು ಕಾಗದರಹಿತವಾಗಿ ಮತ್ತು ಆನ್‌ಲೈನ್ ಮೂಲಕ ನಡೆಯಲಿದೆ’ ಎಂದು ಯಾದಗಿರಿ ಉಪವಿಭಾಗದ ಸಹಾಯಕ ಅಂಚೆ ಅಧೀಕ್ಷಕ ವಿ.ಎಲ್ ಚಿತಕೋಟೆ ಹೇಳಿದರು.

ನಗರದ ಅಂಬೇಡ್ಕರ್ ವೃತ್ತದ ಬಳಿ ಇರುವ ಪ್ರಧಾನ ಅಂಚೆ ಕಚೇರಿಯಲ್ಲಿ ಸಿಎಸ್ಐ (ಕೋರ್ ಸಿಸ್ಟಂ ಇಂಟಿಗ್ರೇಟೆಸ್) ಹೊಸ ತಂತ್ರಾಂಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸಿಎಸ್ಐ ಸಾಫ್ಟ್‌ವೇರ್ ಬ್ಯಾಂಕಿಂಗ್ ವ್ಯವಹಾರದಂತಹ ಕಾರ್ಯ ನಿರ್ವಹಿಸಲಿದೆ. ಈ ಮೊದಲು ಸ್ಥಾನಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಂಚೆ ಕಚೇರಿಗಳು ಈಗ ಕೇಂದ್ರೀಕೃತ ವ್ಯವಸ್ಥೆಯಡಿ ದೇಶದಾದ್ಯಂತ ಏಕರೂಪವಾಗಿ ಕಾರ್ಯ ನಿರ್ವಹಿಸಲಿದೆ. ಅಧಿಕಾರಿಗಳು ಅಂಚೆ ಕಚೇರಿಯ ವ್ಯವಹಾರ ಮತ್ತು ಸಂಪೂರ್ಣ ಮಾಹಿತಿಯನ್ನು ಆನ್‌ಲೈನ್ ಮೂಲಕವೇ ಪರಿಶೀಲಿಸಲು ಸಾಧ್ಯವಾಗಲಿದೆ’ ಎಂದರು.

ADVERTISEMENT

‘ಸಿಎಸ್ಐ ಸಾಫ್ಟ್‌ವೇರ್‌ ಅಳವಡಿಕೆಯಿಂದ ಹಣ ವರ್ಗಾವಣೆ, ಈ ಪೋಸ್ಟ್, ಸ್ಪೀಡ್ ಪೋಸ್ಟ್, ಸಾಮಾನ್ಯ ಪೋಸ್ಟ್ ಪ್ರಕ್ರಿಯೆ ಚುರುಕುಗೊಳ್ಳಲಿದೆ. ಕಾರಣ ಗ್ರಾಹಕರು ಇದರ ಸದುಯೋಗ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.

ಪೋಸ್ಟ್ ಮಾಸ್ಟರ್ ಬಾಪುಗೌಡ, ಎಸ್‌.ಸಿ ಕುಮಾರ್, ಆರ್.ಭೀಮಣ್ಣ, ಚಂದ್ರಕಾಂತ ಹಾಗೂ ಅಂಚೆ ಕಚೇರಿ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.