ADVERTISEMENT

ಸುರಪುರ: ತೇವಾಂಶ ಕೊರತೆ, ಬಿತ್ತನೆ ಕುಂಠಿತ

​ಪ್ರಜಾವಾಣಿ ವಾರ್ತೆ
Published 23 ಜೂನ್ 2011, 8:10 IST
Last Updated 23 ಜೂನ್ 2011, 8:10 IST
ಸುರಪುರ: ತೇವಾಂಶ ಕೊರತೆ, ಬಿತ್ತನೆ ಕುಂಠಿತ
ಸುರಪುರ: ತೇವಾಂಶ ಕೊರತೆ, ಬಿತ್ತನೆ ಕುಂಠಿತ   

ಸುರಪುರ: ತಾಲ್ಲೂಕಿನಲ್ಲಿ ಮಳೆ ಅಭಾವದಿಂದ ಬಿತ್ತನೆ ಕಾರ್ಯ ಕುಂಠಿತಗೊಂಡಿದೆ. ಎಪ್ರಿಲ್, ಮೇ ತಿಂಗಳಲ್ಲಿ ಅಷ್ಟು ಇಷ್ಟು ಸುರಿದ ಮಳೆ ಜೂನ್ ತಿಂಗಳಲ್ಲಿ ಸಂಪೂರ್ಣ ಕೈಕೊಟ್ಟಿದೆ. ಇದರಿಂದ ರೈತ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಮೇ ತಿಂಗಳಲ್ಲಿ ಬಂದ ಮಳೆಯಿಂದ ಭೂಮಿ ಹಸಿಯಾಗಿತ್ತು. ಅಲ್ಪ ಸ್ವಲ್ಪ ತೇವಾಂಶವಿತ್ತು.

ಇದನ್ನು ನಂಬಿಕೊಂಡ ರೈತ ಭೂಮಿಯನ್ನು ಮೇ ತಿಂಗಳ ಅಂತ್ಯದಲ್ಲಿ ಹದಗೊಳಿಸತೊಡಗಿದೆ. ಅದಾಗಲೇ ಗಾಳಿ ಜೋರಾಗಿ ಬೀಸತೊಡಗಿತು. ಜೂನ್ ತಿಂಗಳಲ್ಲೂ ಗಾಳಿಯ ಅರ್ಭಟ ಹೆಚ್ಚಾಗಿದೆ. ಇದರಿಂದ ಭೂಮಿಯಲ್ಲಿದ್ದ ತೇವಾಂಶ ಸಂಪೂರ್ಣ ನಾಶವಾಗಿದೆ. ಬಿತ್ತನೆಗೆ ಸಜ್ಜಾಗಿದ್ದ ರೈತನಿಗೆ ಮಳೆ ಅಭಾವ ಮತ್ತು ಗಾಳಿ ಕೊಡಲಿ ಪೆಟ್ಟು ನೀಡಿದೆ.

ಈಗ ಮಳೆ ಬಂದರಷ್ಟೆ ಬಿತ್ತನೆ ಕಾರ್ಯ ಮಾಡಬಹುದಾಗಿದೆ. ಇದರಿಂದ ರೈತ ಚಟುವಟಿಕೆಗಳು ಸಪ್ಪೆಯಾಗಿವೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಮುಂಗಾರು ಹಂಗಾಮಿಗೆ ಸಜ್ಜೆ, ತೊಗರಿ, ಹೆಸರು, ಸೂರ್ಯಕಾಂತಿ ಬೀಜಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿತ್ತು. ಇದನ್ನು ಖರೀದಿಸಲು ಯಾವ ರೈತರು ಮುಂದೆ ಬರುತ್ತಿಲ್ಲ. ಇದರಿಂದ ರೈತ ಸಂಪರ್ಕ ಕೇಂದ್ರಗಳು ಬಿಕೋ ಎನ್ನುತ್ತಿವೆ.

ವಾಡಿಕೆಯಂತೆ ಜೂನ್ ತಿಂಗಳಲ್ಲಿ 173 ಮಿಮಿ ಮಳೆ ಬರಬೇಕಿತ್ತು. ಆದರೆ ಕೇವಲ 79 ಮಿಮಿ ಮಳೆಯಾಗಿದೆ. ಏಪ್ರಿಲ್ ತಿಂಗಳಲ್ಲಿ ಸುರಪುರ ವಲಯದಲ್ಲಿ 31.9 ಮಿಮಿ, ಕಕ್ಕೇರಾ 59.5 ಮಿಮಿ, ಕೊಡೇಕಲ್ 56.7 ಮಿಮಿ, ಹುಣಸಗಿ 65.8 ಮಿಮಿ, ಕೆಂಭಾವಿ 5.1ಮಿಮಿ ಮೆಳೆಯಾದರೆ, ಮೇ ತಿಂಗಳಲ್ಲಿ ಕ್ರಮವಾಗಿ 20 ಮಿಮಿ, 6.3 ಮಿಮಿ, 64.5 ಮಿಮಿ, 58.6ಮಿಮಿ, 59.5 ಮಿಮಿ ಮಳೆ ಬಿದ್ದಿದೆ.

2011-12ನೆ ಸಾಲಿನ ಮುಂಗಾರು ಹಂಗಾಮಿಗೆ ಕೃಷಿ ಇಲಾಖೆಯು ತಾಲ್ಲೂಕಿಗೆ ಒಟ್ಟು 98605 ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ನೀಡಿದೆ. ಇದರಲ್ಲಿ 21160, 28825, 40420, 8200 ಹೆಕ್ಟೆರ್ ಕ್ರಮವಾಗಿ ತೃಣಧಾನ್ಯ, ಬೆಳೆಕಾಳು, ಎಣ್ಣೆಕಾಳು ಮತ್ತು ವಾಣಿಜ್ಯ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದೆ. ಆದರೆ ಬಿತ್ತನೆ ಪ್ರಮಾಣ ಜೂನ್ ಮುಗಿಯುತ್ತಾ ಬಂದರೂ ಶೇ. 30 ರಷ್ಟು ಮುಟ್ಟಿಲ್ಲ.

ಬಿತ್ತನೆಯಾದ ಕಡೆ ಮೊಳಕೆ ಬಂದಿಲ್ಲ. ಸಾಲ ಮಾಡಿರುವ ಮಳೆ ಆಶ್ರಿತ ರೈತನ ಬದುಕು ಅತಂತ್ರವಾಗಿದೆ. ಈ ತಿಂಗಳೊಳಗಾಗಿ ಉತ್ತಮ ಮಳೆ ಬಂದಲ್ಲಿ ಮತ್ತೆ ರೈತ ಪುನಃ ಭೂಮಿಯನ್ನು ಹದಗೊಳಿಸಿ ಬಿತ್ತನೆ ಕಾರ್ಯ ಆರಂಭಿಸುತ್ತಾನೆ. ಮಳೆ ಕೈಕೊಟ್ಟರೆ ರೈತ ಬರಗಾಲದ ಸ್ಥಿತಿ ಎದುರಿಸುವ ಆತಂಕದಲ್ಲಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.