ADVERTISEMENT

ಸುರಪುರ: ರೈತರ ಸೊಗಡು ನೆನಪಿಸಿದ ‘ಚರಗ’

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 6:46 IST
Last Updated 2 ಜನವರಿ 2014, 6:46 IST

ಸುರಪುರ: ಎಳ್ಳಮಾವಾಸ್ಯೆಯ ನಿಮಿತ್ತ ತಾಲ್ಲೂಕಿನ ವಿವಿಧೆಡೆ ಸಜ್ಜೆ ರೊಟ್ಟಿ, ಎಳ್ಳು ಹಚ್ಚಿದ ರೊಟ್ಟಿ, ವಿವಿಧ ತರಕಾರಿಗಳ ಮಿಶ್ರಣದಿಂದ ಮಾಡಿದ ಭರ್ತ, ಎಣ್ಣೆ ಬದನೆಕಾಯಿ, ಪುಂಡಿ ಪಲ್ಯೆ, ಮೆಟಗಿ ಉಸುಳಿ, ಗುರೆಳ್ಳು ಕಾರ, ಶೇಂಗಾ ಚಟ್ನಿ, ಶೇಂಗಾದ ಹೋಳಿಗೆ, ಹೂರಣ ಕಡುಬು, ಚಿತ್ರಾನ್ನ, ಭಜ್ಜಿ.... ಇವೆಲ್ಲವನ್ನೂ ಬುತ್ತಿ ಕಟ್ಟಿಕೊಂಡು ಹೊಲಕ್ಕೆ ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮಹಿಳೆಯರು ಹೊಸ ಸೀರೆ ಧರಿಸಿ ಅಕ್ಕಪಕ್ಕದ ಮನೆಯವರನ್ನು ಜೊತೆಗೆ ಕರೆದುಕೊಂಡು ಹೋಗಿ ‘ಚರಗ’ಗದಲ್ಲಿ ಭಾಗಿಯಾಗಿ ಹಳೆಯ ಕಾಲದ ರೈತನ ಸೊಗಡು ನೆನಪಿಸಿದರು.

ಅಮಾವಾಸ್ಯೆಯ ದಿನ ರೈತರು ನದಿಗೆ ಹೋಗಿ ಸ್ನಾನ ಮಾಡಿ ಬಿಂದಿಗೆಯಲ್ಲಿ ನದಿ ನೀರು ತಂದು ಬಿಳಿ ಜೋಳದ ಹೊಲಗಳಿಗೆ ತೆರಳಿದಳು.
ಬಿಳಿ ಜೋಳದ ಹೊಲದ ಮಧ್ಯದಲ್ಲಿ ಐದು ಸಣ್ಣ ಕಲ್ಲುಗಳನ್ನಿಟ್ಟು ಪಾಂಡವರನ್ನಾಗಿ ಮಾಡಿದರು. ಜೋಳದ ದಂಟಿಗೆ ಬಾಸಿಂಗ ದಂಡೆ ಕಟ್ಟಿ ಬೆಳೆಗಳನ್ನು ಮದುಮಕ್ಕಳನ್ನಾಗಿ ಮಾಡಿದರು. ಕುಂಕುಮ ವಿಭೂತಿ ಹಚ್ಚಿ ನೈವೇದ್ಯ ಮಾಡಿ ಕಾಯಿ ಕರ್ಪೂರ ಸಲ್ಲಿಸಿ ಶ್ರದ್ಧಾ ಭಕ್ತಿಯಿಂದ ಪೂಜಿಸಿದರು.

ನೈವೇದ್ಯ ಮಾಡಿದ ಹೋಳಿಗೆ ಹಾಗೂ ಇತರೆ ದವಸದಾನ್ಯಗಳಿಂದ ಮಾಡಿದ ಎಡೆಯನ್ನು ಹೊಲದ ಸುತ್ತಲು ರೈತರು ತಿರುಗಿ ಭಕ್ತಿಯಿಂದ ಚರಗ ಚಲ್ಲಿದರು.ಚರಗ ಚಲ್ಲಿದ ನಂತರ ವಿವಿಧ ಭಕ್ಷ್ಯಗಳಿಂದ ಮಾಡಿದ ಬುತ್ತಿ ಬಿಚ್ಚಿ ಎಲ್ಲರೂ ಕೂಡಿ ಸಹಪಂಕ್ತಿ ಭೋಜನ ಸವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.