ADVERTISEMENT

ಸುಳ್ಳು ಸಾಬೀತಾದರೆ ರಾಜಕೀಯ ನಿವೃತ್ತಿ

ಮುಖಂಡ ದರ್ಶನಾಪುರಗೆ ಶಾಸಕ ಗುರು ಪಾಟೀಲ ಶಿರವಾಳ ತಿರುಗೇಟು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 12:15 IST
Last Updated 27 ಮಾರ್ಚ್ 2018, 12:15 IST
ಗುರು ಪಾಟೀಲ
ಗುರು ಪಾಟೀಲ   

ಶಹಾಪುರ: ‘ಸುಳ್ಳು ಹೇಳಿ ರಾಜಕೀಯ ಮಾಡುವ ಅನಿವಾರ್ಯತೆ ನನಗೆ ಬಂದಿಲ್ಲ. ಕ್ಷೇತ್ರದ ಯಾವುದೇ ಯೋಜನೆ ಅನುಷ್ಠಾನದಲ್ಲಿ ಸುಳ್ಳು ಹೇಳಿರುವುದನ್ನು ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಸಾಬೀತುಪಡಿಸಿದರೆ ಚುನಾವಣೆಯ ರಾಜಕೀಯ ನಿವೃತ್ತಿ ಹೊಂದುತ್ತೇನೆ’ ಎಂದು ಶಾಸಕ ಗುರು ಪಾಟೀಲ ಶಿರವಾಳ ತಿರುಗೇಟು ನೀಡಿದರು.

ಬೂದಿಹಾಳ–ಪೀರಾಪೂರ ಏತ ನೀರಾವರಿ ಯೋಜನೆಗೆ ಈ ವರ್ಷದ ಬಜೆಟ್‌ ಘೋಷಣೆಯಲ್ಲಿ ₹ 250 ಕೋಟಿ ರಾಜ್ಯ ಸರ್ಕಾರ ಮೀಸಲು ಇಟ್ಟಿದೆ. ಆದರೆ ಶಾಸಕ ಗುರುಪಾಟೀಲ ಶಿರವಾಳ ಅವರು ಯೋಜನೆಗೆ ನಯಾಪೈಸೆ ನೀಡಿಲ್ಲ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂಬ ದರ್ಶನಾಪುರ ಅವರು ಮಾಡಿದ್ದ ಆರೋಪಕ್ಕೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದರು.

’ಬೂದಿಹಾಳ–ಪೀರಾಪೂರ ಏತ ನೀರಾವರಿ ಯೋಜನೆಗೆ ಈ ವರ್ಷದ ಬಜೆಟ್‌ ಘೋಷಣೆಯಲ್ಲಿ ನಯಾ ಪೈಸೆ ಅನುದಾನ ತೆಗೆದಿರಿಸಿಲ್ಲ. ಇದು ವಾಸ್ತವ ಸ್ಥಿತಿ ಇರುವಾಗ ಶಾಸಕರು ಸುಳ್ಳು ಹೇಳುತ್ತಿದ್ದಾರೆ ಎಂದು ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ಆರೋಪಿಸಿರುವುದು ಸರಿಯಲ್ಲ’ ಎಂದು ಹೇಳಿದರು.

ADVERTISEMENT

‘ತಾವು ಸಚಿವರಾಗಿದ್ದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ಅವಕಾಶವಿತ್ತು. ಇಚ್ಛಾಶಕ್ತಿಯ ಕೊರತೆ ಹಾಗೂ ರೈತರ ಹಿತ ಕಾಪಾಡುವಲ್ಲಿ ನಿಷ್ಕಾಳಜಿ ತೋರಿಸಿದ್ದರಿಂದ ಕ್ಷೇತ್ರದ ಮತದಾರರು ಪಾಠ ಕಲಿಸಿದ್ದಾರೆ ಎಂಬುವುದು ಮರೆಯಬಾರದು’ ಎಂದು ಛೇಡಿಸಿದರು.

‘ಕಲಬುರ್ಗಿ ಜಿಲ್ಲಾ ಸಹಕಾರ ಬ್ಯಾಂಕಿನಲ್ಲಿ ನಡೆದಿರುವ ₹28 ಕೋಟಿ ವಂಚನೆಯ ಬಗ್ಗೆ ಸದನದಲ್ಲಿ ಗಮನ ಸೆಳೆಯಲಾಗಿದೆ. ಆದರೆ ರಾಜ್ಯ ಸರ್ಕಾರವೇ ಅಕ್ರಮವನ್ನು ಮುಚ್ಚಿ ಹಾಕುವ ಸಂಚು ನಡೆಸಿದೆ’ ಎಂದು ಆರೋಪಿಸಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಮಲ್ಲಣ್ಣಗೌಡ ಉಕ್ಕಿನಾಳ, ಮುಖಂಡರಾದ ಮಲ್ಲಣ್ಣ ಮಡ್ಡಿ ಸಾಹು, ಅಮಾತೆಪ್ಪ ಕಂದಕೂರ, ಭೀಮಯ್ಯಗೌಡ ಕಟ್ಟಿಮನಿ, ರಾಜಶೇಖರ ಗೂಗಲ್, ಲಾಲ್ ಅಹ್ಮದ ಖುರೇಶಿ ಇದ್ದರು.

ಶಿಷ್ಟಾಚಾರ ಪಾಲಿಸಲಿ

ಶಹಾಪುರ ಜೆಎಂಎಫ್ ಹೆಚ್ಚುವರಿ ನ್ಯಾಯಾಲಯದ ನೂತನ ಕಟ್ಟಡವನ್ನು ₹3.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಏಪ್ರಿಲ್ 7ರಂದು ಕಟ್ಟಡ ಉದ್ಘಾಟನೆ ಕಾರ್ಯಕ್ರಮವಿದೆ. ಅಂದಿನ ಕಾರ್ಯಕ್ರಮಕ್ಕೆ ಶಿಷ್ಟಾಚಾರದ ಪ್ರಕಾರ ಶಾಸಕರನ್ನು ಕರೆಯಬೇಕು. ನ್ಯಾಯಾಲಯದ ಅನುದಾನ ಸರ್ಕಾರದ ಅನುದಾನವಾಗಿದೆ.

ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಾರೆ ಎಂಬ ಆಶಾಭಾವನೆ ಹೊಂದಿರುವೆ. ಇವರೆಗೂ ಆಹ್ವಾನ ಪತ್ರಿಕೆ ಬಂದಿಲ್ಲ ಎಂದು ಶಾಸಕ ಗುರು ಪಾಟೀಲ ಶಿರವಾಳ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.