ADVERTISEMENT

ಸ್ಮಾರಕಗಳಿಗೆ ಕುತ್ತು ತಂದಿತ್ತ ಗಣಿಗಾರಿಕೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 7:05 IST
Last Updated 22 ಸೆಪ್ಟೆಂಬರ್ 2011, 7:05 IST

ಯಾದಗಿರಿ: ಜಿಲ್ಲೆಯಲ್ಲಿ ಐತಿಹಾಸಿಕ ಸ್ಮಾರಕಗಳ ಗಣಿಯೇ ಇದೆ. ಬೆಟ್ಟ-ಗುಡ್ಡಗಳಲ್ಲಿರುವ ಈ ಸ್ಮಾರಕಗಳಿಗೆ ಇದೀಗ ಅಪಾಯ ಎದುರಾಗಿದ್ದು, ಇತಿಹಾಸದ ಕುರುಹುಗಳು ಮಣ್ಣಿನಲ್ಲಿ ಸೇರಿ ಹೋಗುವ ಆತಂಕ ಕಾಡುತ್ತಿದೆ.

ತಾಲ್ಲೂಕಿನ ಬಂದಳ್ಳಿ ಗ್ರಾಮದ ಬಳಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದರಿಂದ ಈ ಭಾಗದಲ್ಲಿರುವ ಸ್ಮಾರಕಗಳು ಅಪಾಯವನ್ನು ಎದುರಿಸುವಂತಾಗಿದೆ.

ತಾಲ್ಲೂಕಿನ ಬಂದಳ್ಳಿ ಗ್ರಾಮದ ಬಳಿ ಇರುವ ಸಂಗಯ್ಯನ ಬಂಡೆ ಬೆಟ್ಟದಲ್ಲಿನ ಹೆಬ್ಬಂಡೆಯ ಮೇಲೆ ಪ್ರಾಚೀನವಾದ ಜೈನ ನಿಷಿಧಿ ಶಿಲ್ಪವಿದೆ. ಇಲ್ಲಿಯೇ ನೈಸರ್ಗಿಕ ಶಿಲಾ ಗುಹೆಗಳು, ಶಿಲೋದ್ಭವ ನಂದಿ ಶಿಲ್ಪಗಳೂ ಕಾಣುತ್ತವೆ. 10 ರಿಂದ 12 ನೇ ಶತಮಾನದ ಅವಧಿಯಲ್ಲಿ ಈ ನೆಲೆಯು ಜೈನ ಮತ್ತು ಶೈವ ಪಂಥಗಳ ಆರಾಧ್ಯ ಕ್ಷೇತ್ರವಾಗಿತ್ತು ಎಂದು ಇತಿಹಾಸ ಪ್ರಾಧ್ಯಾಪಕ ಎ.ಎಂ. ಸೈದಾಪುರ ಹೇಳುತ್ತಾರೆ.

ಇನ್ನೊಂದೆಡೆ ಯಾದಗಿರಿ ನಗರದ ಪೂರ್ವಕ್ಕೆ ಇರುವ ಜಿನ್ನಪ್ಪನ ಬೆಟ್ಟದಲ್ಲಿ ಚೌವ್ವೀಸ್ ತೀರ್ಥಂಕರರ ಗುಹಾಲಯವೊಂದಿದೆ. ಕರ್ನಾಟಕದಲ್ಲಿ ಅತಿ ವಿರಳವಾದ ಶಿಲ್ಪಗಳು ಇಲ್ಲಿ ಕಂಡು ಬರುತ್ತವೆ. ಐತಿಹಾಸಿಕ ದೃಷ್ಟಿಯಿಂದ ಇದೊಂದು ಮಹತ್ವದ ತಾಣವಾಗಿದ್ದು, ಸಾಹಿತ್ಯದ ಪ್ರಕಾರ ಇದನ್ನು ಚಾರಣಗಿರಿ ಎಂದು ಕರೆಯಲಾಗುತ್ತದೆ. ಸ್ಥಳೀಯರು ಇದನ್ನು ಜಿನ್ನಪ್ಪನ ಬೆಟ್ಟ ಎಂದು ಗುರುತಿಸುತ್ತಿದ್ದು, ಇಂತಹ ಅಪರೂಪದ ಸ್ಮಾರಕಗಳ ಸುತ್ತಲೂ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಜಿಲ್ಲೆಯ ವ್ಯಾಪ್ತಿ ಚಿಕ್ಕದಾಗಿದ್ದರೂ, ಸಾಂಸ್ಕೃತಿಕ ಹಾಗೂ ಐತಿಹಾಸಿಕವಾಗಿ ಜಿಲ್ಲೆಯು ಶ್ರೀಮಂತವಾಗಿದೆ.
ಇದರಲ್ಲಿ ಜೈನ ಧರ್ಮದ ಪಾಲು ಅಪಾರವಾದುದು. ಇತಿಹಾಸಕ್ಕೆ ಸಾಕ್ಷಿಯಾಗಿ ನಿಂರಿತು ಈ ಸ್ಮಾರಕಗಳ ಪರಿಸರದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದು ಜನರಲ್ಲಿ ಬೇಸರ ಮೂಡಿಸಿದೆ.

ಈಗಾಗಲೇ ಸಾಕಷ್ಟು ಸ್ಮಾರಕಗಳು ನಾಶವಾಗಿದ್ದು, ನಮ್ಮ ಇತಿಹಾಸದ ಕುರುಹುಗಳು ಮಣ್ಣು ಪಾಲಾಗುತ್ತಿವೆ. ಜಿಲ್ಲಾಡಳಿತ ಹಾಗೂ ಪುರಾತತ್ವ ಇಲಾಖೆಯವರು ಕಲ್ಲು ಗಣಿಗಾರಿಕೆ ನಿಲ್ಲಿಸುವ ಮೂಲಕ ಸ್ಮಾರಕಗಳ ಉಳಿವಿಗೆ ಕ್ರಮ ಕೈಗೊಳ್ಳಬೇಕು ಎಂದು ದಿಗಂಬರ ಜೈನ ಸಮಾಜದ ಅಧ್ಯಕ್ಷ ಪದ್ಮರಾಜ ಅರ್ಜುಣಗಿ ಹಾಗೂ ಸಮಾಜ ಬಾಂಧವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.