ADVERTISEMENT

ಹಳಬರಿಗೆ ಮಣೆ ಹಾಕಿದ ಕಾಂಗ್ರೆಸ್

ಎರಡನೇ ಸಲವೂ ಚನ್ನಾರಡ್ಡಿ ಪಾಟೀಲರಿಗೆ ಕೈತಪ್ಪಿದ ಟಿಕೆಟ್

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 12:07 IST
Last Updated 16 ಏಪ್ರಿಲ್ 2018, 12:07 IST

ಯಾದಗಿರಿ: ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಎಐಸಿಸಿ ಭಾನುವಾರ ಬಿಡುಗಡೆ ಮಾಡಿದ್ದು, ಜಿಲ್ಲೆಯ ಗುರುಮಠಕಲ್, ಯಾದಗಿರಿ, ಸುರಪುರ, ಶಹಾಪುರ ನಾಲ್ಕು ಮತಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಳಬರಿಗೆ ಮಣೆ ಹಾಕಿದೆ.

ಯಾದಗಿರಿಯಲ್ಲಿ ಡಾ.ಎ.ಬಿ.ಮಾಲಕರಡ್ಡಿ, ಸುರಪುರದಲ್ಲಿ ರಾಜಾ ವೆಂಕಟಪ್ಪ ನಾಯಕ, ಗುರುಮಠಕಲ್ ನಲ್ಲಿ ಬಾಬುರಾವ ಚಿಂಚನಸೂರು, ಶಹಾಪುರದಲ್ಲಿ ಶರಣಬಸಪ್ಪ ದರ್ಶನಾಪುರ ಅವರಿಗೆ ಟಿಕೆಟ್ ನೀಡಲಾಗಿದ್ದು, ಹಳಬರು ಕಣದಲ್ಲಿ ಉಳಿದಿದ್ದಾರೆ.

ನಾಲ್ಕು ಮತಕ್ಷೇತ್ರಗಳ ಪೈಕಿ ಯಾದಗಿರಿ, ಗುರುಮಠಕಲ್ ಮತಕ್ಷೇತ್ರ ಗಳಲ್ಲಿ ಅಭ್ಯರ್ಥಿಗಳು ಬದಲಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಪಕ್ಷದಲ್ಲಿನ ಕೆಲ ಬೆಳವಣಿಗೆಯಿಂದ ಬೇಸರಗೊಂಡಿದ್ದ ಶಾಸಕ ಡಾ.ಎ.ಬಿ.ಮಾಲಕರಡ್ಡಿ ಸ್ವತಃ ತಾವೇ ಚುನಾವಣಾ ಕಣದಿಂದ ದೂರ ಉಳಿಯುವುದಾಗಿ ಘೋಷಿಸಿದ್ದರು.

ADVERTISEMENT

ಈ ಬೆಳವಣಿಗೆಯಿಂದ ಯಾದಗಿರಿ ಮತಕ್ಷೇತ್ರದಲ್ಲಿ ಪ್ರಸಕ್ತ ಚುನಾವಣಾ ಕಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾರು? ಎಂಬ ಪ್ರಶ್ನೆ ಕಾರ್ಯಕರ್ತರನ್ನು ಕಾಡಿತ್ತು. ಕೆಲವು ದಿನಗಳ ನಂತರ ಸಜ್ಜನಿಕೆಗೆ ಹೆಸರಾಗಿರುವ ಡಾ.ಎ.ಬಿ.ಮಾಲಕರಡ್ಡಿ ಅವರೇ ಚುನಾವಣಾ ಕಣದಲ್ಲಿ ಉಳಿಯುವಂತೆ ಕಾಂಗ್ರೆಸ್‌ ಕಾರ್ಯಕರ್ತರು ಒತ್ತಾಯಿಸಿ ಶಾಸಕರ ನಿವಾಸದ ಎದುರು ಉಪವಾಸ ಧರಣಿ ಸತ್ಯಾಗ್ರಹ ನಡೆಸಿದ್ದರು.

ಕಾರ್ಯಕರ್ತರ ಒತ್ತಾಯದ ಮೇಲೆ ಮಾಲಕರಡ್ಡಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ನಂತರ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನೂ ಭೇಟಿ ಮಾಡಿ ಸಮಸ್ಯೆ ತೋಡಿಕೊಂಡಿದ್ದರು. ಯಾವುದೇ ಸಮಸ್ಯೆಗಳಿದ್ದರೂ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಅವರಿಗೆ ತಿಳಿಸು ವಂತೆಯೂ ಆತ್ಮಸ್ಥೈರ್ಯ ತುಂಬಿದ್ದರು.

ಸಿಎಂ ಮತ್ತು ರಾಹುಲ್‌ ಗಾಂಧಿ ಭೇಟಿಯ ನಂತರ ಶಾಸಕ ಮಾಲಕರಡ್ಡಿ ಮೂರು ವರ್ಷಗಳ ನಂತರ ಕಾಂಗ್ರೆಸ್‌ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದರು. ಅಲ್ಲದೇ ಕಾರ್ಯಕರ್ತರ ಜತೆಗೂಡಿ ಪಕ್ಷ ಸಂಘಟನೆ ನಡೆಸಿದ್ದರು.

ಕೋಲಿ ಸಮಾಜದ ಹಿರಿಯ ಮುಖಂಡ ಶಾಸಕ ಬಾಬುರಾವ್‌ ಚಿಂತಚ ನಸೂರ್ ಅವರಿಗೆ ವಯಸ್ಸಾಗಿದ್ದು, ಟಿಕೆಟ್ ಕೈತಪ್ಪಲಿದೆ ಎಂದೇ ಗುರುಮಠಕಲ್‌ ಮತಕ್ಷೇತ್ರದಲ್ಲಿ ಪ್ರಚಾರ ನಡೆದಿತ್ತು. ಆದರೆ, ಅಪಪ್ರಚಾರಕ್ಕೆ ಕಿವಿಗೊಡದ ಶಾಸಕ ಬಾಬುರಾವ್ ಚಿಂಚನಸೂರು ಚುನಾವಣಾ ಪ್ರಚವಾರದಲ್ಲಿ ತೊಡಗಿಸಿಕೊಂಡಿದ್ದರು.

ಉಳಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಧನಾ ಯಾತ್ರೆಯಲ್ಲಿ ಭರವಸೆ ನೀಡಿದಂತೆ ಸುರಪುರದಲ್ಲಿ ರಾಜಾವೆಂಕಟಪ್ಪ ನಾಯಕ ಹಾಗೂ ಶಹಾಪುರದಲ್ಲಿ ಶರಣಬಸಪ್ಪ ದರ್ಶನಾಪುರ ಅವರಿಗೆ ಟಿಕೆಟ್ ನೀಡಿದ್ದಾರೆ.

ಚನ್ನಾರಡ್ಡಿ ಪಾಟೀಲರಿಗೆ ನಿರಾಸೆ

ಯಾದಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಿಂದ ಸ್ಪರ್ಧಿಸಲು ಟಿಕೆಟ್‌ ಆಕಾಂಕ್ಷಿಯಾಗಿದ್ದ ಹಿರಿಯ ಮುಖಂಡ ಚನ್ನಾರಡ್ಡಿ ಪಾಟೀಲ ತುನ್ನೂರು ಅವರಿಗೆ ಎರಡನೇ ಸಲ ಟಿಕೆಟ್ ಕೈತಪ್ಪಿದೆ.

ಶಾಸಕ ಡಾ.ಎ.ಬಿ.ಮಾಲಕ ರಡ್ಡಿ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿಹೇಳಿ ದಾಗ, ಚನ್ನಾರಡ್ಡಿ ಟಿಕೆಟ್‌ ಆಕಾಂಕ್ಷಿ ತರಲ್ಲಿ ಕಾಣಿಸಿ ಕೊಂಡಿದ್ದರು. ಈ ಸಲವೂ ಟಿಕೆಟ್ ಕೈತಪ್ಪಿದ್ದು ನಿರಾಸೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.