ADVERTISEMENT

ಹಳ್ಳದಲ್ಲಿ ವ್ಯಕ್ತಿಗಾಗಿ ಶೋಧ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 8:21 IST
Last Updated 17 ಸೆಪ್ಟೆಂಬರ್ 2013, 8:21 IST

ಯಾದಗಿರಿ: ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಹತ್ತಿಕುಣಿ ರಸ್ತೆಯಲ್ಲಿರುವ ಹಳ್ಳ ಉಕ್ಕಿ ಹರಿದಿದ್ದು, ಈ ಹಳ್ಳದಲ್ಲಿ ವ್ಯಕ್ತಿಯೊಬ್ಬ ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ.

ಭಾನುವಾರ ಸಂಜೆಯಿಂದಲೂ ಶೋಧ ಕಾರ್ಯ ನಡೆದಿದ್ದು, ವ್ಯಕ್ತಿಯ ಸುಳಿವು ಸಿಕ್ಕಿಲ್ಲ. ಹಿರೇ ಅಗಸಿಯ ಭೀಮಣ್ಣ ಎಂಬಾತ ಹಳ್ಳದಲ್ಲಿ ಸ್ನಾನ ಮಾಡಲು ಹೋಗಿದ್ದು, ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ. ಘಟನೆ ನಡೆದು 24 ಗಂಟೆಯಾದರೂ ಈತನ ಸುಳಿವು ಪತ್ತೆ ಆಗಿಲ್ಲ.

ಈ ಹಳ್ಳದಲ್ಲಿ ಭೀಮಣ್ಣ ಸ್ನಾ ಮಾಡಲು ತೆರಳಿದ್ದು, ಮರಳಿ ಬಂದಿಲ್ಲ. ಈತನ ಬಟ್ಟೆ ಹಾಗೂ ಚಪ್ಪಲಿ­ಗಳು ಹಳ್ಳದ ದಂಡೆಯ ಮೇಲಿವೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಭಾನುವಾರ ಸಂಜೆಯಿಂದಲೇ ಶೋಧ ಕಾರ್ಯ ಆರಂಭಿಸಲಾಗಿದೆ. ಆದರೆ ಸೋಮ­ವಾರ ಸಂಜೆಯವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಅಗ್ನಿಶಾಮಕ ದಳ ಮತ್ತು ಪೊಲೀಸರು ಜಂಟಿಯಾಗಿ ಬೋಟ್ ಮೂಲಕ ಶೋಧ ಕಾರ್ಯ ನಡೆಸಿದ್ದಾರೆ. ಆದರೆ ವ್ಯಕ್ತಿಯಾಗಲಿ, ಆತನ ಶವವಾಗಲಿ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಭಾನುವಾರ ರಾತ್ರಿ ಬೆಳಕಿನ ತೊಂದರೆಯಿಂದ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಸೋಮ­ವಾರ ಶೋಧ ಮುಂದು­ವರಿದರೂ ಯಾವುದೇ ಪ್ರಯೋಜನ­ವಾಗಿಲ್ಲ.  ಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದ್ದು, ಸ್ಥಳ­ದಲ್ಲಿ ಪೊಲೀಸರನ್ನು ನಿಯೋಜಿಸ­ಲಾಗಿದೆ ಎಂದು ಸರ್ಕಲ್ ಇನ್ಸ್‌­ಪೆಕ್ಟರ್‌ ಶಂಕರಗೌಡ ಪಾಟೀಲ ತಿಳಿಸಿದ್ದಾರೆ.

ಮಳೆಯೂ ವಿಪರೀತವಾಗಿ ಬಂದಿದೆ. ಹೀಗಾಗಿ ಹಳ್ಳ ತುಂಬಿ ಹರಿಯುತ್ತಿವೆ. ನಗರದಲ್ಲಿರುವ ಈ ಹಳ್ಳಕ್ಕೂ ಸಾಕಷ್ಟು ನೀರು ಹರಿದು ಬರುತ್ತಿದೆ. ಸುಳಿಯು ಕೂಡ ಹೆಚ್ಚಿಗೆ ಹೊಡೆಯುತ್ತಿರು­ವುದರಿಂದ ಬೋಟ್‌­ನಿಂದ ಶೋಧ ಕಾರ್ಯ ನಡೆಸಲು ತೊಂದರೆ ಆಗುತ್ತಿದೆ.

ಮಧ್ಯಾಹ್ನದ ವೇಳೆ ಅಗ್ನಿ ಶಾಮಕ ದಳದ ಅಧಿಕಾರಿ ಗುರುರಾಜ ಮತ್ತು ಸರ್ಕಲ್‌ ಇನ್ಸ್‌ಪೆಕ್ಟರ್‌ ಶಂಕರಗೌಡ ಪಾಟೀಲ ಬೋಟಿನ ಮೂಲಕ ಶೋಧ ನಡೆಸಿದ್ದರು.  ಈ ಸಂದರ್ಭದಲ್ಲಿ ಇಬ್ಬರೂ ಅಧಿಕಾರಿಗಳೂ ಕೂಡ ಅಪಾಯಕ್ಕೆ ಸಿಲುಕಿದ್ದು, ಸ್ವಲ್ಪದರಲ್ಲಿಯೇ ಪಾರಾ­ಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.