ADVERTISEMENT

ಹಸಿರಿನಿಂದ ಕಂಗೊಳಿಸುವ ರಸ್ತೆ ವಿಭಜಕ

ಯಾದಗಿರಿಯ ರಸ್ತೆ ವಿಭಜಕದಲ್ಲಿ ಮೈದಳೆಯಲಿದೆ ಸುಂದರ ಉದ್ಯಾನ

ಚಿದಂಬರ ಪ್ರಸಾದ್
Published 22 ಜೂನ್ 2015, 9:22 IST
Last Updated 22 ಜೂನ್ 2015, 9:22 IST
ಯಾದಗಿರಿಯ ನ್ಯಾಯಾಲಯ ಸಂಕೀರ್ಣದ ಎದುರು ರಸ್ತೆ ವಿಭಜಕದಲ್ಲಿ ಉದ್ಯಾನ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರು
ಯಾದಗಿರಿಯ ನ್ಯಾಯಾಲಯ ಸಂಕೀರ್ಣದ ಎದುರು ರಸ್ತೆ ವಿಭಜಕದಲ್ಲಿ ಉದ್ಯಾನ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರು   

ಯಾದಗಿರಿ:  ನಗರದಲ್ಲಿ ಉದ್ಯಾನಗಳ ಕೊರತೆ ಕಾಡುವ ಕಾಲವೊಂದಿತ್ತು. ಇದೀಗ ನಗರದ ಚಿತ್ರಣ ಸ್ವಲ್ಪ ಮಟ್ಟಿಗೆ ಬದಲಾಗುತ್ತಿದ್ದು, ನಗರದಲ್ಲಿ ಉದ್ಯಾನಗಳ ನಿರ್ಮಾಣ ಭರದಿಂದ ನಡೆದಿದೆ.

ಸಣ್ಣ ಕೆರೆಯಲ್ಲಿನ ಉದ್ಯಾನ ಸಂಪೂರ್ಣ ಸಿದ್ಧವಾಗಿದ್ದು, ಉದ್ಘಾಟನೆಗಾಗಿ ಮಾತ್ರ ಬಾಕಿ ಇದೆ. ಇದರ ಬೆನ್ನಲ್ಲೇ, ನಗರದ ಜಿಲ್ಲಾ ನ್ಯಾಯಾಲಯ ಸಂಕೀ ರ್ಣದ ಎದುರಿನ ರಸ್ತೆ ವಿಭಜಕದಲ್ಲಿ ಚಿಕ್ಕದಾದ ಮತ್ತೊಂದು ಉದ್ಯಾನ ನಿರ್ಮಾಣವಾಗುತ್ತಿದೆ.

ರಸ್ತೆ ವಿಸ್ತಾರದ ಸಂದರ್ಭದಲ್ಲಿ ದೊಡ್ಡದಾದ ಬೇವಿನ ಮರಗಳನ್ನು ಕಾಯ್ದುಕೊಳ್ಳಲಾಗಿತ್ತು. ಮರಗಳ ಎರಡೂ ಬದಿಯಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಗಿಡಗಳನ್ನು ಒಳಗಿಟ್ಟು, ರಸ್ತೆ ವಿಭಜಕವನ್ನು ನಿರ್ಮಿಸಲಾಗಿದೆ. ವಿಸ್ತಾರವಾಗಿರುವ ಈ ರಸ್ತೆ ವಿಭಜಕದಲ್ಲಿ ಇದೀಗ ಸುಂದರ ಉದ್ಯಾನ ಮೈದಳೆಯುತ್ತಿದೆ.

ಉದ್ಯಾನದ ನಿರ್ಮಾಣದ ಕಾಮ ಗಾರಿ ಆರಂಭವಾಗಿದೆ. ಜಿಲ್ಲಾಧಿಕಾರಿ ಕಚೇರಿ ಎದುರಿನಿಂದ ಜಿಲ್ಲಾ ಪಂಚಾ ಯಿತಿ ಕಚೇರಿವರೆಗಿನ ಈ ರಸ್ತೆ ವಿಭಜಕದಲ್ಲಿ ನಿರ್ಮಿಸುತ್ತಿರುವ ಉದ್ಯಾನದಲ್ಲಿ ಹುಲ್ಲು ಹಾಸನ್ನು ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ ಹುಲ್ಲು ಹಾಸನ್ನು ತರಿಸಲಾಗಿದ್ದು, ಉದ್ಯಾನದಲ್ಲಿ ನೆಡುವ ಕಾರ್ಯ ಪೂರ್ಣಗೊಂಡಿದೆ.

ಉದ್ಯಾನಕ್ಕೆ ನೀರು ಪೂರೈಸಲು ಸ್ಪ್ರಿಂಕ್ಲರ್‌ಗಳನ್ನು ಅಳವಡಿಸಲಾಗಿದ್ದು, ನಿತ್ಯ ಬೆಳಿಗ್ಗೆ ಹಾಗೂ ಸಂಜೆ ನೀರು ಹರಿಸಲಾಗುತ್ತಿದೆ. ಅಲ್ಲದೇ ಹಸಿರು ಹುಲ್ಲಿನ ಮಧ್ಯದಲ್ಲಿ ಸುಂದರ ಹೂವಿನ ಗಿಡಗಳನ್ನು ನೆಡುವ ಕಾರ್ಯವೂ ಆರಂಭವಾಗಿದೆ.

ಈ ರಸ್ತೆ ವಿಭಜಕಕ್ಕೆ ಬ್ಯಾರಿಕೇಡ್‌ ಹಾಕಲಾಗಿದ್ದು, ಬಿಡಾಡಿ ದನಗಳು, ಪ್ರಾಣಿಗಳಿಂದ ರಕ್ಷಣೆ ಒದಗಿಸಲಾಗಿದೆ. ದೊಡ್ಡದಾದ ಬೇವಿನ ಮರಗಳ ಕೆಳಗೆ, ಸುಂದರ ಹುಲ್ಲು ಹಾಸಿನ ಉದ್ಯಾನವು ಈಗಿನಿಂದಲೇ ಜನರ ಗಮನ ಸೆಳೆಯುತ್ತಿದೆ.

ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯಿತಿ ಕಚೇರಿ, ಜಿಲ್ಲಾ ನ್ಯಾಯಾಲಯಸಂಕೀರ್ಣ, ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿ, ವಿವಿಧ ಬ್ಯಾಂಕ್‌ ಶಾಖೆಗಳು ಇರುವ ಈ ಪ್ರದೇಶದಲ್ಲಿ ಜನರ ಓಡಾಟವೂ ಹೆಚ್ಚಾಗಿದೆ. ಜನರಿಗೆ ಕುಳಿತುಕೊಳ್ಳುವುದಕ್ಕೆ ಫುಟ್‌ಪಾತೇ ಗತಿ ಎನ್ನುವಂತಾಗಿತ್ತು. ಇದೀಗ ಈ ಉದ್ಯಾನ ನಿರ್ಮಾಣದಿಂದ ಜನರ ಸಮಸ್ಯೆ ನಿವಾರಣೆ ಆಗಲಿದೆ ಎಂಬುದು ನಾಗರಿಕರ ಆಶಯ.

ನಗರದಲ್ಲಿ ಈಗಾಗಲೇ ಮಹಾತ್ಮಗಾಂಧಿ ಉದ್ಯಾನ, ಸಣ್ಣ ಕೆರೆಯ ಉದ್ಯಾನಗಳು ಪೂರ್ಣಗೊಂಡಿವೆ. ರಸ್ತೆ ವಿಭಜಕದಲ್ಲಿ ನಿರ್ಮಿಸುತ್ತಿರುವ ಉದ್ಯಾನವೊಂದು ಇವುಗಳ ಸಾಲಿಗೆ ಸೇರಿದೆ. ಇದರಿಂದಾಗಿ ಬಿಸಿಲು ನಾಡಿನಲ್ಲಿ ಹಸಿರು ಕಂಗೊಳಿಸುತ್ತಿದೆ. ನಗರದ ನಾಗರಿಕರನ್ನು ಆಕರ್ಷಿಸುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.