ADVERTISEMENT

ಹೆಣ್ಣು ಭ್ರೂಣ ಹತ್ಯೆ ಶಿಕ್ಷಾರ್ಹ ಅಪರಾಧ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 8:30 IST
Last Updated 7 ಅಕ್ಟೋಬರ್ 2011, 8:30 IST

ಸುರಪುರ: ಹೆಣ್ಣು ಭ್ರೂಣ ಹತ್ಯೆ ವ್ಯಾಪಕವಾಗಿ ನಡೆದಿದೆ. ಇದರಿಂದ ಹೆಣ್ಣು ಮತ್ತು ಗಂಡಿನ ಅನುಪಾತ ಗಣನೀಯವಾಗಿ ಕುಸಿದಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದೊಂದು ದಿನ ಹೆಣ್ಣು ಮಕ್ಕಳ ಸಂಖ್ಯೆ ಸಂಪೂರ್ಣ ಕಡಿಮೆಯಾಗಿ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ. ಇದರಿಂದ ಸಾಮಾಜಿಕ ಸ್ವಾಸ್ಥ್ಯ ಹದಗೆಡುತ್ತದೆ ಎಂದು ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶೆ ಮಂಜುಳಾ ಉಂಡಿ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಶಿಶು ಅಭಿವೃದ್ಧಿ ಕಚೇರಿಯಲ್ಲಿ ಮಂಗಳವಾರ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಮತ್ತು ಮಹಿಳೆಯರಿಗೆ  ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣು ಭ್ರೂಣ ಹತ್ಯೆ ಶಿಕ್ಷಾರ್ಹ ಅಪರಾಧವಾಗಿದೆ. ಇದು ಅತ್ಯಂತ ಕೆಟ್ಟ ಪಾಪ ಕಾರ್ಯವೂ ಹೌದು. ಮಹಿಳೆಯರಿಗಾಗಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯೂ ಸೇರಿದಂತೆ ಹಲವು ಕಾನೂನುಗಳಿವೆ. ಈ ಬಗ್ಗೆ ಉಚಿತವಾಗಿ ಕಾನೂನಿನ ಅರಿವು ನೀಡಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚಿನ ಮುತುವರ್ಜಿ ವಹಿಸಿ ಇವುಗಳ ಬಗ್ಗೆ ಗ್ರಾಮೀಣ ಭಾಗದಲ್ಲಿ ಜಾಗ್ರತೆ ಮೂಡಿಸಬೇಕೆಂದು ಅವರು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ನಿಂಗಣ್ಣ ಚಿಂಚೋಡಿ, ವಕೀಲರಾದ ಅರವಿಂದಕುಮಾರ್, ದೇವಿಂದ್ರಪ್ಪ ಬೇವಿನಕಟ್ಟಿ ಇತರರು ಮಾತನಾಡಿದರು.

ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ಬಗ್ಗೆ ವಕೀಲ ವಿ.ಎಸ್. ಬೈಚಬಾಳ, ಹೆಣ್ಣು ಭ್ರೂಣ ಹತ್ಯೆ ತಡೆ ಕಾಯ್ದೆಯ ಬಗ್ಗೆ ವಕೀಲ ಶಿವಾನಂದ ಆವಂಟಿ ಉಪನ್ಯಾಸ ನೀಡಿದರು.

ವಕೀಲರಾದ ಉದಯಸಿಂಗ್, ಬಿ.ಎಸ್. ಕಿಲ್ಲೇದಾರ್, ನಂದಣ್ಣ ಬಾಕ್ಲಿ, ನಂದನಗೌಡ ಪಾಟೀಲ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಥಾಮಸ್ ದೊಡ್ಡಮನಿ ವೇದಿಕೆಯಲ್ಲಿದ್ದರು. ರಾಮಕೃಷ್ಣ ಚಂದ್ರಗಿರಿ ಸ್ವಾಗತಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಯಂಕಾರೆಡ್ಡಿ ಬೋನ್ಹಾಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.