ಯಾದಗಿರಿ: ಜಗತ್ತಿನಲ್ಲಿ ಅನೇಕ ಧರ್ಮಗಳಿದ್ದು, ಎಲ್ಲ ಧರ್ಮಗಳ ಸಾರ ಒಂದೇ. ವಿವಿಧ ಧರ್ಮಗಳಲ್ಲಿರುವ ಉತ್ತಮ ಅಂಶಗಳನ್ನು ತೆಗೆದುಕೊಂಡು ಶಾಂತಿ, ಸಹೋದರತೆಯಿಂದ ಬಾಳಿದಾಗ ಮಾತ್ರ ಅನೇಕತೆಯಲ್ಲಿ ಏಕತೆಯನ್ನು ಕಾಣಬಹುದು ಎಂದು ಶಾಸಕ ಡಾ.ಎ.ಬಿ.ಮಾಲಕರಡ್ಡಿ ಹೇಳಿದರು.
ಶಹಾಪುರ ತಾಲ್ಲೂಕಿನ ಹಬಸಿಹಾಳ ಗ್ರಾಮದಲ್ಲಿ ಜನಾಬ್ ಚಾಂದ್ ಪಟೇಲ್ ರಿಲೀಜಿಯಸ್ ಟ್ರಸ್ಟ್ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಬೆಂಗಳೂರಿನ ಎಂಬಿಸಿ ಗ್ರೂಪ್‌ನ ಅನುದಾನದಲ್ಲಿ ನಿರ್ಮಿಸಿದ ಜಾಮಿಯಾ ಮಸ್ಜೀದ್ -ಎ -ಬಿಲಾಲ್ ಉದ್ಘಾಟನೆ ಹಾಗೂ ಮುಸ್ಲಿಂ ಬಾಂಧವರ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದರು.
ಪ್ರೀತಿ, ಪ್ರೇಮ, ಸಹನೆ ಎಂಬ ಮೂರು ಅಮೂಲ್ಯ ರತ್ನಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ಭಾವೈಕ್ಯ ಹಾಗೂ ದೇಶದ ಪ್ರಗತಿಗೆ ಸಹಕಾರಿ ಆಗಲಿದೆ ಎಂದರು.
ಈ ಮಸೀದಿ ಎಲ್ಲರ ಆಸ್ತಿ. ಇದನ್ನು ಪ್ರತಿಯೊಬ್ಬರು ತನ್ನದೆಂದು ತಿಳಿಯಬೇಕು. ಈ ಮಸೀದಿಗೆ ಸುಮಾರು ₨50 ಲಕ್ಷ ದೇಣಿಗೆಯಾಗಿ ಕೊಟ್ಟ ಎಂಬಿಸಿ ಗ್ರೂಪ್ ಅಧ್ಯಕ್ಷರ ಕಾರ್ಯ ಶ್ಲಾಘನೀಯ. ಇಂಥವರಿಗೆ ನಾವೆಲ್ಲರೂ ಪ್ರೋತ್ಸಾಹ ನೀಡಿದರೆ, ಇನ್ನೂ ಹೆಚ್ಚಿನ ಸಮಾಜ ಕಾರ್ಯಗಳನ್ನು ನಿರೀಕ್ಷಿಸಬಹುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.