ADVERTISEMENT

‘ಮಹಿಳೆಯನ್ನು ನೋಡುವ ದೃಷ್ಟಿ ಬದಲಾಗಿಲ್ಲ’

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 10:11 IST
Last Updated 6 ಡಿಸೆಂಬರ್ 2013, 10:11 IST

ಯಾದಗಿರಿ: ‘ಮಹಿಳೆಯನ್ನು ಭೋಗದ ವಸ್ತುವಿನಂತೆ ಪರಿಗಣಿಸುತ್ತಿರುವ ಪುರುಷ ಪ್ರಧಾನ ಧೋರಣೆಯಿಂದಾಗಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ’ ಎಂದು ಹಿರಿಯ ಶಿಕ್ಷಕಿ ಶ್ರೀದೇವಿ ಪಾಟೀಲ ಹೇಳಿದರು.

ಮಹಿಳೆಯರ ಮೇಲಿನ ಅಪರಾಧ­ಗಳನ್ನು ತಡೆಗಟ್ಟಲು ಆಗ್ರಹಿಸಿ ಎಐಡಿಎಸ್ಓ-, ಎಐಎಂಎಸ್ಎಸ್,-ಎಐಡಿವೈಒ ಸಂಘಟನೆಗಳ ಆಶ್ರಯ­ದಲ್ಲಿ ಗುರುವಾರ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿ­ಸಿದ್ದ ವಿದ್ಯಾರ್ಥಿನಿಯರ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದುವರಿದಿದ್ದರೂ ಮಹಿಳೆ­ಯ­ರನ್ನು ನೋಡುವ ದೃಷ್ಟಿ ಬದಲಾಗು­ತ್ತಿಲ್ಲ. ಅಶ್ಲೀಲ ಸಿನಿಮಾ, ಸಾಹಿತ್ಯ, ಇಂಟರ್‌ನೆಟ್ ಮತ್ತು ಮೊಬೈಲ್‌­ಗಳಲ್ಲಿ ಹರಿದಾಡುತ್ತಿರುವ ಅಶ್ಲೀಲ­ತೆಯು ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚಲು ಕಾರಣ­ವಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಇವುಗಳ ವಿರುದ್ಧ ಹೋರಾಡು­ವುದು ಅಗತ್ಯವಾಗಿದೆ ಎಂದ ಅವರು, ಯುವತಿಯರು ಕರಾಟೆ, ಮತ್ತಿತರ ಸ್ವಯಂ ರಕ್ಷಣೆ ತರಬೇತಿ ಪಡೆಯಬೇಕು ಎಂದು ಸಲಹೆ ನೀಡಿದರು.

ಎಐಎಂಎಸ್ಎಸ್‌ನ ಗುಲ್ಬರ್ಗ ಜಿಲ್ಲಾ ಘಟಕದ ಕಾರ್ಯದರ್ಶಿ ಗುಂಡಮ್ಮ ಮಡಿವಾಳ ಮಾತನಾಡಿ, ಪುರುಷರಷ್ಟೇ ಸಾಮರ್ಥ್ಯ­ವನ್ನು ಹೊಂದಿರುವ ಮಹಿಳೆ­ಯರನ್ನು ಕಡೆಗಣಿಸುತ್ತಿರುವ ಸಮಾಜದ ಧೋರಣೆಯನ್ನು ಖಂಡಿಸಿದರು.

ಆಳುವ  ಸರ್ಕಾರಗಳು ಮಹಿಳೆ­­-ಯರು, ಮಕ್ಕಳನ್ನು ರಕ್ಷಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಎಳೆಯ ವಯಸ್ಸಿನ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲ ವಯೋಮಾನದ ಮಹಿಳೆಯರ ಮೇಲೆ ನಿರಂತರವಾಗಿ ಅಮಾನವೀಯವಾದ ಅಪರಾಧಗಳು ಹೆಚ್ಚುತ್ತಿವೆ. ಇವುಗಳಿಗೆ ಕುಮ್ಮಕ್ಕು ನೀಡಲೆಂದೇ ಸರ್ಕಾರಗಳು ಅಶ್ಲೀಲ ವೆಬ್‌ಸೈಟ್‌ಗಳನ್ನು ನಿಷೇಧಿಸಲು ಮೀನ-­ಮೇಷ ಎಣಿಸುತ್ತಿವೆ. ಮದ್ಯ­ಪಾನ, ಮಾದಕ ವಸ್ತುಗಳು ಸಹಿತ ವಿವಿಧ ರೀತಿಯ ವ್ಯಸನಗಳಿಗೆ ವಿದ್ಯಾರ್ಥಿ, ಯುವ ಜನರನ್ನು ದಾಸರನ್ನಾಗಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಎಐಡಿಎಸ್ಓನ ಜಿಲ್ಲಾ ಸಮಿತಿಯ ಸಂಚಾಲಕಿ ಗೌರಮ್ಮ ಸಿ.ಕೆ. ಮಾತನಾಡಿ, ದೆಹಲಿಯ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಘಟಿಸಿ ಒಂದು ವರ್ಷವಾಗುತ್ತಿದೆ. ಇಂತಹ ಪ್ರಕರಣ­ಗಳು ಮರುಕಳಿಸದಿರಲಿ ಎನ್ನುವ ಘೋಷಣೆಯೊಂದಿಗೆ ಜನ ಚಳವಳಿ­ಯಲ್ಲಿ ನಿರತವಾಗಿರುವ ನಮ್ಮ ಸಂಘಟನೆಗಳು, ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಗಟ್ಟಲು ಆಗ್ರಹಿಸಿ ರಾಷ್ಟ್ರವ್ಯಾಪಿ ಆಂದೋಲನವನ್ನು ಸಂಘಟಿಸುತ್ತಿವೆ. ಅದರ ಭಾಗವಾಗಿ ಇದೇ ಡಿ. 17 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿ­ಕೊಳ್ಳಲಾಗಿದ್ದು, ಡಿ. 29 ಮತ್ತು 30ರಂದು ದೆಹಲಿಯಲ್ಲಿ ಬೃಹತ್ ಚಳವಳಿಯನ್ನು ಸಂಘಟಿಸಲಾಗುತ್ತಿದೆ ಎಂದರು.

ಆ ಮಹತ್ವಪೂರ್ಣ ಹೋರಾಟ­ವನ್ನು ಬಲಪಡಿಸಲು ಯಾದಗಿರಿ ಜಿಲ್ಲೆಯಾದ್ಯಂತ ವಿವಿಧ ಕಾಲೇಜು­ಗಳಲ್ಲಿ ಸಮಾವೇಶಗಳನ್ನು ಸಂಘಟಿಸ­ಲಾಗುತ್ತಿದೆ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಎಸ್.ಎಸ್.ಜುಗೇರಿ ಮಾತನಾಡಿದರು. ಎಐಡಿಎಸ್ಒ ಕಾಲೇಜು ಸಮಿತಿಯ ಅಧ್ಯಕ್ಷೆ ಸಿದ್ದಲಿಂಗಮ್ಮ ಸ್ವಾಗತಿಸಿದರು. ಸಮಿತಿಯ ಸದಸ್ಯೆ ಐಶ್ವರ್ಯ ವಂದಿಸಿದರು. ಎಐಡಿಎಸ್ಒ ವಿಜಯ ಕುಮಾರ್, ಮರಲಿಂಗಪ್ಪ ಮತ್ತು ಕಾಲೇಜು ಸಮಿತಿಯ ಪದಾಧಿಕಾರಿ­ಗಳಾದ ರೇಣುಕಾ, ಪುಷ್ಪಾ, ರತ್ನಾ, ಶಿವಕಾಂತಮ್ಮ, ಎಐಎಂಎಸ್ಎಸ್‌ನ ಶ್ವೇತಾ ಸೇರಿದಂತೆ 200ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.