ADVERTISEMENT

‘ರೈತರಿಗೆ ₹ 50 ಸಾವಿರ ಪರಿಹಾರ ನೀಡಿ’

ಪ್ರವಾಹ ಸಂತ್ರಸ್ತರಿಗೆ ಸೂರು ಕಲ್ಪಿಸಲು ಆಗ್ರಹ, ರೈತ ಮುಖಂಡರ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 15:26 IST
Last Updated 5 ಸೆಪ್ಟೆಂಬರ್ 2019, 15:26 IST
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದಿಂದ ಬೆಳೆ ನಾಶವಾದ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಹತ್ತಿಗೂಡೂರಿನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದರು
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದಿಂದ ಬೆಳೆ ನಾಶವಾದ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಹತ್ತಿಗೂಡೂರಿನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದರು   

ಯಾದಗಿರಿ: ಜಿಲ್ಲೆಯ ಶಹಾಪುರ, ಹುಣಸಗಿ ಮತ್ತು ವಡಗೇರಾ ತಾಲ್ಲೂಕಿನ ನದಿ ಪಾತ್ರದ ಹಳ್ಳಿಗಳು ಪ್ರವಾಹದಿಂದ ಕೊಚ್ಚಿಹೋಗಿದ್ದು, ಬೆಳೆ ನಾಶವಾದ ರೈತರಿಗೆ ₹ 50 ಸಾವಿರ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಹತ್ತಿಗೂಡೂರಿನಿಂದ ಯಾದಗಿರಿ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದರು.

ಪ್ರವಾಹದ ವೇಳೆ ಹೊಲ, ಗದ್ದೆಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಹೆಕ್ಟೇರ್‌ಗೆ ₹ 6,800 ಘೋಷಣೆ ಮಾಡಿ, ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರವಾಹದಿಂದ ನಾಶವಾದ ಮನೆಗಳಿಗೆ ಸರ್ಕಾರ ನೆರವು ನೀಡುತ್ತಿಲ್ಲ. ಇದರಿಂದ ಸಂತ್ರಸ್ತರು ಬೀದಿಯಲ್ಲಿ ವಾಸ ಮಾಡುವಂತಾಗಿದೆ. ಜಿಲ್ಲಾಡಳಿತ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿ ಸಮಸ್ಯೆ ಅರಿಯಬೇಕು. ಅಲ್ಲದೆ ನಾಶವಾದ ಮನೆಗೆ ₹ 20 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಪ್ರವಾಹದಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆಅಲ್ಪ ಪರಿಹಾರ ನೀಡಿದ್ದಾರೆ. ಸರ್ಕಾರ ನೀಡಿದ್ದ ಅಲ್ಪ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಕೂಡಲೇ ಮೃತಪಟ್ಟ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಬಹಿರಂಗವಾಗಿಯೇ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಗ್ರಾಮೀಣ ಜನರ ಕುಟುಂಬಗಳು ಕುಡಿತದಿಂದ ಬೀದಿಪಾಲಾಗುತ್ತಿವೆ. ಹೀಗಾಗಿ ಅಕ್ರಮ ಮದ್ಯ ಮಾರಾಟ ನಿಷೇಧಿಸಬೇಕು ಎಂದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಮಂದರವಾಡ, ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರತ್ನ ಪಾಟೀಲ ಯಕ್ಷಿಂತಿ, ಕಾರ್ಯದರ್ಶಿ ಶರಣರೆಡ್ಡಿ ಹತ್ತಿಗೂಡೂರ, ಹಣಮಂತ ಕೊಂಗಂಡಿ, ದೇವಿಂದ್ರಪ್ಪಗೌಡ ಮಾಲಗತ್ತಿ, ಬುಚ್ಚಪ್ಪ ನಾಯಕ, ನಿಂಗು ಜಡಿ, ಸಿದ್ದಪ್ಪ ಕುಂಬಾರಪೇಟೆ, ಚಂದ್ರಕಲಾ ವಡಗೇರಿ, ಶಾರದಾ ಕನ್ನೆಕೊಳ್ಳೂರ, ಮಹಿಪಾಲರೆಡ್ಡಿ ಪಾಟೀಲ ಮರಕಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.