ADVERTISEMENT

30 ವರ್ಷಗಳಿಂದ ಡಾಂಬರ್ ಕಾಣದ ರಸ್ತೆ!

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 8:21 IST
Last Updated 3 ಡಿಸೆಂಬರ್ 2012, 8:21 IST

ಯಾದಗಿರಿ: ಮತಕ್ಷೇತ್ರದ ಶಹಾಪೂರ ತಾಲ್ಲೂಕಿನ ಕೊನೆಯ ಗ್ರಾಮಗಳಾದ ಹಾಗೂ ಹತ್ತಿಗೂಡರು-ದೇವದುರ್ಗ ಮುಖ್ಯರಸ್ತೆಯ ಸಾವೂರ ಕ್ರಾಸ್‌ನಿಂದ ಸಾವೂರ ಮತ್ತು ಕಾಟಮಳ್ಳಿ ಗ್ರಾಮಗಳಿವೆ. ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೊಂದು ಕಳೆದ 30 ವರ್ಷಗಳಿಂದ ಡಾಂಬರ್ ಕಾಣದೇ ಸೊರಗಿ ನಿಂತಿದೆ.

ಹತ್ತಿಗುಡೂರ ಗ್ರಾಮ ಪಂಚಾತಿ ವ್ಯಾಪ್ತಿಯಲ್ಲಿ ಬರುವ ಸಾವೂರ ಮತ್ತು ಕಾಟಮಳ್ಳಿ ಗ್ರಾಮಗಳು ಅಕ್ಕಪಕ್ಕದಲ್ಲಿವೆ. ಮುಖ್ಯ ರಸ್ತೆಯಿಂದ ಎರಡು ಗ್ರಾಮಗಳಿಗೆ ಹೋಗಲು ಕಳೆದ 30 ವರ್ಷಗಳ ಹಿಂದೆ ನಿರ್ಮಿಸಿದ ರಸ್ತೆಯೇ ಆಧಾರ. ಆದರೆ ಈ ರಸ್ತೆಗೆ ಡಾಂಬರ್ ಇಲ್ಲದೇ ಪರಿತಪಿಸುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಹಿಂದೆ ಸಾವೂರ ಗ್ರಾಮದವರೇ ಆದ ದಿ. ಸಾವೂರ ಶಿವಣ್ಣ ಸಾಹುಕಾರ ಇದ್ದಾಗ ನಿರ್ಮಾಣವಾದ ಡಾಂಬರ್ ರಸ್ತೆ ಇದು. ಈ ರಸ್ತೆಯ ಡಾಂಬರ್ ಕಿತ್ತಿ ಹೋಗಿದ್ದು, ಅಲ್ಲಲ್ಲಿ ತೆಗ್ಗು-ದಿನ್ನೆಗಳು ಸಾಮಾನ್ಯವಾಗಿವೆ. ಗ್ರಾಮಗಳಿಗೆ ಹೋಗುವ ರಸ್ತೆ ಕಳೆದ 30 ವರ್ಷಗಳಿಂದ ರಸ್ತೆಗೆ ಡಾಂಬರ್ ಕಾಣದಾಗಿದೆ ಎಂದು ಸಾವೂರ ಮತ್ತು ಕಾಟಮಳ್ಳಿ ಗ್ರಾಮಸ್ಥರು ಶಾಸಕರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಸೇರಿದಂತೆ ಹಲವು ಯೋಜನೆಗಳ ಅಡಿ ಗ್ರಾಮಗಳಿಗೆ ರಸ್ತೆ ನಿರ್ಮಿಸಲು ಹಾಗೂ ಡಾಂಬರ್ ಹಾಕಲು ಸಾಕಷ್ಟು ಹಣ ಇದೆ. ಅಲ್ಲದೆ ರಸ್ತೆಗಾಗಿ ಕೋಟ್ಯಂತರ ಹಣ ಖರ್ಚು ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಈ ಗ್ರಾಮದ ರಸ್ತೆ ಸ್ಥಿತಿ ಮಾತ್ರ ಸುಧಾರಣೆ ಕಂಡಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

ಇದು ಮಾಜಿ ಶಾಸಕರ ಸ್ವಗ್ರಾಮದ ದುಃಸ್ಥಿತಿ. ``ನಮ್ಮೂರಾಗ ಶಿವಣ್ಣ ಸಾಹುಕಾರ್ ಇದ್ದರು, ಅವರ ಪುಣ್ಯದಿಂದ ಆಗ ರಸ್ತೆ ಆತು. ಡಾಂಬರ್ ರಸ್ತೆ ಕಂಡೀವಿ. ಇವಾಗ ಹಾಳಾದ ರಸ್ತೆಗೆ ಡಾಂಬರ್ ಕಾಣದ ಪರಿಸ್ಥಿತಿ ಆಗ್ಯಾದ್, ರಸ್ತೆ ದುರಸ್ತಿ ಮಾಡ ಅಂದ್ರ ಯಾರು ಕೇಳಾವ್ರ ಇಲ್ಹದಂಗ ಆಗೇದ'' ಎಂದು ಕಾಟಮಳ್ಳಿ ಗ್ರಾಮದ ವೃದ್ಧ ಲಕ್ಷ್ಮಣ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸದ್ಯಾಕ ಶಾಸಕರ ಯಾರ ಅನ್ನೋದ ಗೊತ್ತಿಲ್ಲ ಎಂದು ಶಾಸಕರ ಮೇಲೆ ಗ್ರಾಮಸ್ಥರು ಹರಿಹಾಯುತ್ತಿದ್ದಾರೆ. ಒಟ್ಟಾರೆ ಪ್ರಭಾವಿ ನಾಯಕ ದಿ. ಸಾವೂರ ಶಿವಣ್ಣ ಸಾಹುಕಾರರ ಸ್ವಗ್ರಾಮವಾದ ಸಾವೂರ ಮತ್ತು ಕಾಟಮಳ್ಳಿ ಗ್ರಾಮಗಳ ರಸ್ತೆಗೆ ಡಾಂಬರ್ ಕಾಣದಿರುವುದು ಶೋಚನೀಯ.

ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಈಗಲಾದರೂ ಈ ಭಾಗದ ಶಾಸಕರು, ಸಚಿವರು, ಸಂಬಂಧಿಸಿದ ಅಧಿಕಾರಿಗಳು ರಸ್ತೆಗೆ ಡಾಂಬರೀಕರಣ ಮಾಡಲು ಮುಂದಾಗಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.