ADVERTISEMENT

ಯಾದಗಿರಿ: ಜಿಲ್ಲೆಯಲ್ಲಿ ಮಾಸ್ಕ್‌ ಧರಿಸದ 48 ಸಾವಿರ ಜನರಿಗೆ ದಂಡ

ಕೋವಿಡ್‌ ಮೊದಲ, ಎರಡನೇ ಅಲೆಯಲ್ಲಿ ₹48 ಲಕ್ಷ ವಸೂಲಿ

ಬಿ.ಜಿ.ಪ್ರವೀಣಕುಮಾರ
Published 5 ಜನವರಿ 2022, 16:26 IST
Last Updated 5 ಜನವರಿ 2022, 16:26 IST
ಯಾದಗಿರಿ ನಗರದ ಸುಭಾಷ ವೃತ್ತದ ಸಮೀಪ ಬುಧವಾರ ಸಂಚಾರಿ ಪೊಲೀಸ್‌ ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸಿ ರಸೀದಿ ನೀಡಿದರುಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ
ಯಾದಗಿರಿ ನಗರದ ಸುಭಾಷ ವೃತ್ತದ ಸಮೀಪ ಬುಧವಾರ ಸಂಚಾರಿ ಪೊಲೀಸ್‌ ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸಿ ರಸೀದಿ ನೀಡಿದರುಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ   

ಯಾದಗಿರಿ: ಕಳೆದ ಎರಡು ವರ್ಷಗಳಲ್ಲಿ ಮಾಸ್ಕ್‌ ಧರಿಸದ 48, 429 ಸಾರ್ವಜನಿಕರಿಗೆ ಪೊಲೀಸ್‌ ಇಲಾಖೆ ವತಿಯಿಂದ ದಂಡ ವಿಧಿಸಲಾಗಿದೆ. ಆದರೂ ಸಾರ್ವಜನಿಕರು ಎಚ್ಚೆತ್ತುಕೊಳ್ಳದೇ ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ.

ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ವತಿಯಿಂದ ಕೋವಿಡ್‌–19 ಬಗ್ಗೆ ಜಾಗೃತಿ ಮೂಡಿಸಿ ಮಾಸ್ಕ್‌ ಧರಿಸುವಂತೆ ತಿಳಿಸುತ್ತಿದ್ದರೂ ಯಾರೂ ಕ್ಯಾರೆ ಎನ್ನುತ್ತಿಲ್ಲ. ಇದರಿಂದ ಪೊಲೀಸ್‌ ಇಲಾಖೆ ದಂಡ ವಿಧಿಸುವ ಮೂಲಕ ಎಚ್ಚರಿಕೆಯನ್ನು ನೀಡಲಾಗುತ್ತಿದೆ.

ಕೋವಿಡ್ ಮೊದಲ ಅಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಮಾಸ್ಕ್ ಧರಿಸದವರ ವಿರುದ್ಧ 8,335 ಪ್ರಕರಣ ದಾಖಲಿಸಿ, ₹8,33,500 ದಂಡ ವಿಧಿಸಲಾಗಿದೆ.

ADVERTISEMENT

ಎರಡನೇ ಕೋವಿಡ್‌ ಅಲೆಯಲ್ಲಿ ಮೊದಕ್ಕಿಂತ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. 40,094 ಪ್ರಕರಣ ದಾಖಲಿಸಿ, ₹40,09,400 ವಸೂಲಿ ಮಾಡಲಾಗಿದೆ. ಮಾಸ್ಕ್‌ ಧರಿಸದ ಪ್ರತಿಯೊಬ್ಬ ವ್ಯಕ್ತಿಯಿಂದ ತಲಾ ₹100 ವಸೂಲಿ ಮಾಡಲಾಗಿದೆ.

ಜಿಲ್ಲೆಯಲ್ಲಿ 2020ರ ಮೇ 1ರಿಂದ ಮಾಸ್ಕ್‌ ಧರಿಸದವರಿಗೆ ದಂಡ ಪ್ರಕ್ರಿಯೆ ಆರಂಭವಾಗಿದೆ. ಅಂದಿನಿಂದ ಎರಡು ಕೋವಿಡ್‌ ಅಲೆಗಳಲ್ಲಿ ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸುವ ಪ್ರಕ್ರಿಯೆ ನಡೆಯುತ್ತಿದೆ. ಈಗ ಎಲ್ಲ ಪೊಲೀಸ್‌ ಅಧಿಕಾರಿಗಳಿಗೆ ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸುವಂತೆ ಸೂಚಿಸಲಾಗಿದೆ. ಅಲ್ಲದೇ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌. ಅವರು ಗ್ರಾಮೀಣ, ನಗರ ಪ್ರದೇಶಗಳಲ್ಲೂ ದಂಡ ವಿಧಿಸಿ ಎಂದು ಸೂಚನೆ ನೀಡಿದ್ದಾರೆ.

ದಂಡದ ಜತೆಗೆ ತಿಳಿವಳಿಕೆ: ಮಾಸ್ಕ್‌ ಧರಿಸುವುದು ಕಡ್ಡಾಯ ಮಾಡಿದ ನಂತರ ಜನ ಸಾಮಾನ್ಯರಿಗೆ ಕೈಗೆಟುಕದ ದರದಲ್ಲಿ ಇತ್ತು. ಅಲ್ಲದೇ ಕೆಲವರು ಸ್ವಯಂ ಸಂಘಗಳಿಂದ ಬಟ್ಟೆ ಮಾಸ್ಕ್‌ ತಯಾರಿಸಿ ವಿತರಿಸಲಾಗುತ್ತಿತ್ತು. ಅದೇ ರೀತಿ ಪೊಲೀಸ್‌ ಇಲಾಖೆಯ ಸಿಬ್ಬಂದಿ ಸಾರ್ವಜನಿಕರಿಗೆ ದಂಡದ ಜೊತೆಗೆ ತಿಳಿವಳಿಕೆ ನೀಡಿ ಮಾಸ್ಕ್‌ ವಿತರಿಸುವ ಕೆಲಸ ಮಾಡುತ್ತಿದ್ದರು. ಈಗ ಮಾಸ್ಕ್‌ ದರವೂ ಕೈಗೆಟುವ ದರದಲ್ಲಿ ಸಿಗುತ್ತಿದೆ. ಆದರೂ ಮಾಸ್ಕ್‌ ಹಾಕಿಕೊಳ್ಳದೇ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಮಾಸ್ಕ್‌ ಧರಿಸದೇ ತಿರುಗಾಡುವುದು ಸಾಮಾನ್ಯವಾಗಿದೆ.

ಮಾಸ್ಕ್‌ ಧರಿಸುವುದರಿಂದ ಸಿಗುವ ಲಾಭಗಳು: ಮನೆಯಿಂದ ಹೊರ ಹೋಗುವಾಗ ಮಾಸ್ಕ್‌ ಧರಿಸುವುದರಿಂದ ಹಲವಾರು ಲಾಭಗಳಿವೆ. ಮಾಸ್ಕ್‌ ಧರಿಸುವುದರಿಂದ ಕೋವಿಡ್‌ ಹರಡುವುದನ್ನು ತಡೆಗಟ್ಟಬಹುದು. ಕೋವಿಡ್‌ ದೃಢಪಟ್ಟ ವ್ಯಕ್ತಿಯ ಜೊತೆ ಮಾಸ್ಕ್‌ ಧರಿಸದೇ ಇದ್ದರೆ ಶೇ 200ರಷ್ಟು ಕೋವಿಡ್‌ ಹರಡುವ ಸಾಧ್ಯತೆ ಇರುತ್ತದೆ. ಅಲ್ಲದೇ ಇಬ್ಬರು ಮಾಸ್ಕ್‌ ಧರಿಸುವರಿಂದ ಕೋವಿಡ್‌ ಹರಡುವಿಕೆ ಕಡಿಮೆಯಾಗುತ್ತದೆ. ಹೊರಗಡೆ ಧೂಳಿನಲ್ಲಿರುವ ಕಣಗಳು ಬಾಯಿ ಮೂಲಕ ದೇಹ ಸೇರದಂತೆ ಕಾಪಾಡುತ್ತವೆ ಎನ್ನುತ್ತಾರೆ ವೈದ್ಯರು.

ಕೆಲವರು ಗಲ್ಲಕ್ಕೆ ಮಾಸ್ಕ್‌ ಧರಿಸುವಂತೆ ಕಾಣಿಸುತ್ತದೆ. ಇನ್ನೂ ಕೆಲವರು ಬಾಯಿ ಮಾತ್ರ ಮುಚ್ಚಿಕೊಂಡಿರುತ್ತಾರೆ. ಆದರೆ, ಬಾಯಿ, ಮೂಗು ಮುಚ್ಚಿಕೊಳ್ಳುವಂತ ರೀತಿಯಲ್ಲಿ ಮಾಸ್ಕ್‌ ಧರಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

***

ಮಾಸ್ಕ್‌ ಧರಿಸದೆ ಸಾರ್ವಜನಿಕವಾಗಿ ಓಡಾಡುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಎಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದೆ
ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಮಾಸ್ಕ್‌ ಧರಿಸುವುದು ಲಸಿಕೆಗಿಂತ ದೊಡ್ಡದು. ಹೀಗಾಗಿ ಪ್ರತಿಯೊಬ್ಬರು ಮಾಸ್ಕ್‌ ಧರಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು

- ಡಾ.ಇಂದುಮತಿ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.