ADVERTISEMENT

ಜಾತ್ರೆ ಯಶಸ್ವಿಗೆ ನಾಗರಿಕರ ಸಹಕಾರ ಅಗತ್ಯ– ತಹಶೀಲ್ದಾರ್‌ ಅಂಕಲಗಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 6:28 IST
Last Updated 6 ಜನವರಿ 2018, 6:28 IST

ಕಕ್ಕೇರಾ: ಜ.13ರಿಂದ 23ರವರೆಗೆ ನಡೆಯುವ ಪಟ್ಟಣದ ಸೋಮನಾಥ ದೇವರ ಜಾತ್ರೆಯ ಯಶಸ್ವಿಗೆ ನಾಗರಿಕರ ಸಹಕಾರ ಅಗತ್ಯ ಎಂದು ದೇವಸ್ಥಾನದ ಅಧ್ಯಕ್ಷರು ಹಾಗೂ ಸುರಪೂರ ತಹಶೀಲ್ದಾರ್‌ ಸುರೇಶ ಅಂಕಲಗಿ ಹೇಳಿದರು.

ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸುಮಾರು 10 ದಿನಗಳವರೆಗೆ ನಡೆಯುವ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಸ್ವಯಂಸೇವಕರನ್ನು ನೇಮಿಸಿಕೊಂಡು ಜಾತ್ರೆಯ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಜಾತ್ರೆ ವೇಳೆ ನಿರಂತರ ವಿದ್ಯುತ್ ಸರಬರಾಜು, ಸಾರಿಗೆ ವ್ಯವಸ್ಥೆ, ದೇವರ ಗಂಗಾಸ್ಥಳಕ್ಕೆ ಹೋಗುವ ರಸ್ತೆ ದುರಸ್ತಿ, ಜನ ಮತ್ತು ಜಾನುವಾರಗಳಿಗೆ ಕುಡಿಯುವ ನೀರು ಒದಗಿಸುವುದು, ಸ್ವಚ್ಛತೆ, ಬೀದಿ ದೀಪ, ಸ್ವಾಗತ ಕಮಾನು ನಿರ್ಮಾಣ ಹಾಗೂ ಮಾಂಸಮಾರಾಟ ನಿಷೇಧಿಸುವಂತೆ ತಹಶೀಲ್ದಾರ್‌ ಅವರಿಗೆ ಸಾರ್ವಜನಿಕರು
ಮನವಿ ಮಾಡಿದರು.

ADVERTISEMENT

ನಂತರ ಜಾತ್ರಾ ಮಹೋತ್ಸವ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ರಥವನ್ನು ಪರೀಕ್ಷಿಸಿ ರಥ ಸಾಗುವ ಮಾರ್ಗದಲ್ಲಿ ಸ್ವಚ್ಛತೆ ಮಾಡುವಂತೆ ಪುರಸಭೆ ಅಧಿಕಾರಿಗಳಿಗೆ ಹಾಗೂ ಜನ ಹಾಗೂ ಜಾನುವಾರಗಳಿಗೆ ಕುಡಿಯುವ ನೀರಿನ ಒದಗಿಸಲು ಸೋಮನಾಥ ಬಾವಿಗೆ ತೆರಳಿ ಕೆಲವು ಮಾರ್ಪಾಡು ಮಾಡುವಂತೆ ಕಂದಾಯ ನಿರೀಕ್ಷಕರಿಗೆ ಸೂಚಿಸಿದರು.

ಪುರಸಭೆ ಅಧಿಕಾರಿ ಆದಪ್ಪ ಸುರಪುರಕರ್‌, ಉಪತಹಶೀಲ್ದಾರ್‌ ರೇವಪ್ಪ ತೆಗ್ಗಿನಮನಿ, ದೇವಸ್ಥಾನ ಉಸ್ತುವಾರಿ ಅಧಿಕಾರಿ ಪ್ರವೀಣ ಕುಮಾರ, ಕಂದಾಯ ನಿರೀಕ್ಷಕ ರವಿ, ಗ್ರಾಮಲೆಕ್ಕಿಗ ಸಂತೋಷರಡ್ಡಿ, ಪುರಸಭೆ ಸಿಬ್ಬಂದಿ, ಮುಖಂಡರಾದ ಹಣಮಂತರಾಯಗೌಡ ಜಹಾಗೀರ ದಾರ, ದಶರಥ ಆರೇಶಂಕರ, ಬಸವರಾಜ ಆರೇಶಂಕರ, ರಾಮಯ್ಯ ಶೆಟ್ಟಿ, ಅಯ್ಯಣ್ಣ ಪೂಜಾರಿ, ಸೋಮನಿಂಗಪ್ಪ ದೇಸಾಯಿ, ಗುಂಡಪ್ಪ ಸೊಲ್ಲಾಪೂರ, ಪರಮಣ್ಣ ಪೂಜಾರಿ, ಪರಮಣ್ಣ ತೇರಿನ್, ರಾಜು ಹವಾಲ್ದಾರ್, ಮುದ್ದಣ್ಣ ಅಮ್ಮಾಪುರ್, ಬಸವರಾಜ ಕಮತಗಿ, ಚಂದಪ್ಪ ಜಂಪಾ, ಚಂದ್ರು ವಜ್ಜಲ್, ಆದಯ್ಯ ಗುರಿಕಾರ್, ಪರಮಣ್ಣ ವಡಿಕೇರಿ, ದೇವಪ್ಪ ಜಂಪಾ, ಗುಡದಪ್ಪ ಬಿಳೇಭಾವಿ ಇದ್ದರು.

ಸುಂಕ ವಸೂಲಿ: ಗುಡಾರ ಸುಂಕ ವಸೂಲಿಯನ್ನು ₹ 65ಸಾವಿರ ಮಮ್ಮಸಾಬ ಕೊಡೇಕಲ್ ಹಾಗೂ ಸಗಟು ತೆಂಗಿನಕಾಯಿ ಕರ ವಸೂಲಿ ಲಿಂಗಸೂಗೂರಿನ ಸಂತೋಷ
₹ 3.60 ಲಕ್ಷಗಳಿಗೆ ಪಡೆದರು. ಸ್ಥಳೀಯ ಪುರಸಭೆ ಸಭಾಂಗಣ ದಲ್ಲಿ ಜ.6ರಂದು ಸಭೆ ನಡೆಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.