ADVERTISEMENT

ರೈತರು ಬೆಳೆದ ಎಲ್ಲಾ ತೊಗರಿ ಖರೀದಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 7:28 IST
Last Updated 9 ಫೆಬ್ರುವರಿ 2018, 7:28 IST

ಕೆಂಭಾವಿ: ತೊಗರಿ ಖರೀದಿ ಸರ್ಕಾರ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ (ಹಸಿರುಸೇನೆ) ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಸುರಪುರ–ಹುನಗುಂದ ರಾಜ್ಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಿದವು.

ಕರ್ನಾಟಕ ರಾಜ್ಯ ರೈತ ಸಂಘ (ಹಸಿರುಸೇನೆ) ಜಲ್ಲಾ ಘಟಕದ ಅಧ್ಯಕ್ಷ ಬಸನಗೌಡ ಬಿರಾದಾರ ಚಿಂಚೋಳಿ ಮಾತನಾಡಿ, ನೋಂದಣಿ ಮಾಡಿಸಿರುವ ಸಾವಿರಾರು ರೈತರ ತೊಗರಿ ಖರೀದಿ ಮಾಡದೆ ಒಂದೇ ಬಾರಿಗೆ ಸರ್ಕಾರ ತೊಗರಿ ಖರೀದಿ ನಿಲ್ಲಿಸಿರುವುದರಿಂದ ರೈತ ಸಮುದಾಯದಲ್ಲಿ  ಮುಂದೇನು ಎಂಬ ಪ್ರಶ್ನೆ ಮನೆಮಾಡಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ರಾಜಕೀಯಕ್ಕಾಗಿ ರೈತನ್ನು ಉಪಯೋಗಿಸಿಕೊಳ್ಳುವುದನ್ನು ಬಿಡ ಬೇಕು ಮತ್ತು ನೂತನವಾಗಿ ನೋಂದಣಿ ಪ್ರಾರಂಭಿಸಿ ಜಿಲ್ಲೆಯಲ್ಲಿ ರೈತರು ಬೆಳೆದ ಎಲ್ಲಾ ತೊಗರಿಯನ್ನು ಬೆಂಬಲ ಬೆಲೆಗೆ ಖರೀದಿಸಿ ರೈತಪರ ಕಾಳಜಿ ತೋರಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ರೈತರ ಸಾಲಮನ್ನಾ ಮಾಡಬೇಕು, ಸಕಾಲಕ್ಕೆ ಹೊಸ ಸಾಲವನ್ನು ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ಪ್ಯಾಕೇಜ್‌ ರೂಪದಲ್ಲಿ ನೀಡಿ. ಬೆಳೆ ವಿಮೆ ಬಿಡುಗಡೆಯಲ್ಲಿ ಉಂಟಾಗಿರುವ ತಾರತಮ್ಯ ಸರಿಪಡಿಸಿ ಅನ್ಯಾಯವಾದ ರೈತರಿಗೆ ನ್ಯಾಯ ಒದಗಿಸಿಬೇಕು ಸೇರಿದಂತೆ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸುದರು.

ಪ್ರತಿಭಟನಾ ಸ್ಥಳಕ್ಕೆ ಬಂದ್ ಗ್ರೇಡ್‌ 2 ತಹಶೀಲ್ದಾರ್‌ ಸೋಫಿಯಾ ಸುಲ್ತಾನಾ ಪ್ರತಿಭಟನಾಕಾರರ ಮನವೊಲಿಸಲು ಹರಸಾಹಸ ಪಟ್ಟರು.  ಆದರೆ, ರೈತರು ಸಹಾಯಕ ಆಯುಕ್ತರು ಬರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದರು.
ಜಿಲ್ಲಾಧಿಕಾರಿಗಳು ದೂರವಾಣಿ ಮೂಲಕ ಮಾತನಾಡಿ ಫೆ.12 ರಿಂದ ಖರೀದಿ ಕೆಂದ್ರ ಪ್ರಾರಂಭಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ರೈತರಾದ ಅಬ್ದುಲ್ ಖಾದರ ಚೌದ್ರಿ, ರಂಗಪ್ಪ ವಡ್ಡರ, ಬಾಬುಗೌಡ ಖಾನಾಪುರ, ಕುಮಾರ ಮೋಪಗಾರ, ಪ್ರಾಣೇಶ ಕುಲಕರ್ಣಿ, ಮಲ್ಲನಗೌಡ ನಗನೂರ, ರಾಮನಗೌಡ ಯಾಳಗಿ, ಬಸವರಾಜ ಕೆಂಭಾವಿ, ಶಿವು ಮಲ್ಲಿ ಬಾವಿ, ಹಣಮಂತರಾಯ ಬಡಗೇರ, ಲಾಲಪ್ಪ ಆಲಾಳ, ಶ್ರೀಶೈಲ ಕಾಚಾಪುರ, ಬಂದೇನವಾಜ ಯಾಳಗಿ, ಪರಮಣ್ಣ ಕುಂಬಾರ, ಸಿದ್ದು ಮೂಲಿಮನಿ, ಬಸನಗೌಡ ಮೂಲಿಮನಿ, ಹಂಪಣ್ಣ ಹಡಪದ, ಮಲ್ಕಣ್ಣ ಸಾಹುಕಾರ, ಹಣಮಂತರಾಯ ಮಲ್ಕಣ್ಣ ಬಳವಾಟ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ಸಂಚಾರ ಅಸ್ತವ್ಯಸ್ತ: ಸತತ ನಾಲ್ಕು ಗಂಟೆ ನಡೆದ ರಾಜ್ಯಹೆದ್ದಾರಿ ಬಂದ್ ನಿಂದ ವಾಹನ ಸವಾರರು, ಪ್ರಯಾಣಿಕರು ಪರದಾಡುವಂತಾಯಿತು.

* * 

ಎರಡು ದಿನಗಳಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಿ ರೈತರಿಂದ ತೊಗರಿ ಖರೀದಿ ಆರಂಭಿಸದಿದ್ದರೆ. ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು
ಬಸನಗೌಡ ಬಿರಾದಾರ ಚಿಂಚೋಳಿ ಜಿಲ್ಲಾ ಅಧ್ಯಕ್ಷರು ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.