ADVERTISEMENT

6ನೇ ವೇತನ ಆಯೋಗ ಶಿಫಾರಸು ಅನುಷ್ಠಾನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 9:05 IST
Last Updated 8 ಫೆಬ್ರುವರಿ 2011, 9:05 IST

ಗುಲ್ಬರ್ಗ: 6ನೇ ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಫೆ. 9ರಂದು ಮಧ್ಯಾಹ್ನ 1.30ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಮನವಿ ನೀಡಲಿದೆ.

ಕೇಂದ್ರ ಸರ್ಕಾರ ಹಾಗೂ ಹಲವು ರಾಜ್ಯಗಳು ಈಗಾಗಲೇ 6ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿದೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಯಲ್ಲಿ ಸಾಕಷ್ಟು ತಾರತಮ್ಯವಿದೆ. ಇದನ್ನು ರಾಜ್ಯ ಸರ್ಕಾರ ನಿವಾರಿಸಬೇಕು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಎಸ್.ದೇಸಾಯಿ ಅವರು, ಮನವಿ ನೀಡಿದ ಬಳಿಕ ಸಂಘದ ಪದಾಧಿಕಾರಿಗಳು ಸರ್ಕಾರಿ ನೌಕರರನ್ನು ಉದ್ದೇಶಿಸಿ ಮಾತನಾಡುವರು. ನೌಕರರ ಇತರ ಬೇಡಿಕೆಗಳ ಈಡೇರಿಕೆಗೂ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.

ರಾಜ್ಯ ಮತ್ತು ಕೇಂದ್ರ ಸರ್ಕಾರದ ನೌಕರರ ಭತ್ಯೆಗಳಲ್ಲಿ ಸುಮಾರು ಶೇ 30ರಿಂದ 40ರಷ್ಟು ವ್ಯತ್ಯಾಸವಿದೆ. ಇದನ್ನು ಸರಿಪಡಿಸಬೇಕು. ಕೇಂದ್ರ ಸರ್ಕಾರಕ್ಕ ಅನುಗುಣವಾಗಿ ರಾಜ್ಯ ಸರ್ಕಾರಿ ನೌಕರರಿಗೂ ಮನೆ ಬಾಡಿಗೆ ಹಾಗೂ ಪರಿಹಾರ ಭತ್ಯೆ ನೀಡಬೇಕು. ಗುಲ್ಬರ್ಗ ನಗರವನ್ನು ಬಿ2 ನಗರ ಎಂದು ಘೋಷಣೆ ಮಾಡಬೇಕು. ಬೇಸಿಗೆಯಲ್ಲಿ ಕಚೇರಿ ಅವಧಿಯನ್ನು ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30ಕ್ಕೆ ಸೀಮಿತಗೊಳಿಸಬೇಕು ಎಂದು ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.

ರಾಜ್ಯ ಸರ್ಕಾರದ ಪ್ರಶಸ್ತಿಗೆ ಪಾತ್ರರಾದ ರೈತರನ್ನು ಬೆಂಗಳೂರಿನಲ್ಲಿರುವ ವಿಧಾನಸೌಧದ ಬ್ಯಾಂಕೆಟ್ ಹಾಲ್‌ನಲ್ಲಿ ಫೆ.11ಕ್ಕೆ ಸಂಘದ ವತಿಯಿಂದ ಸನ್ಮಾನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಕಾರ್ಯದರ್ಶಿ ಸಿಮೆಯೋನ್ ತುಮಕೂರಕರ್, ರಾಜ್ಯ ಪರಿಷತ್ ಸದಸ್ಯ ಚಂದ್ರಕಾಂತ ಅಷ್ಠಗಿ, ಖಜಾಂಚಿ ವಿರೂಪಾಕ್ಷ ಚಾಂದಕವಟೆ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.