ADVERTISEMENT

₹ 63 ಕೋಟಿ ಅನುದಾನ ಬಳಸದ ಸರ್ಕಾರ

ಯರಗೋಳ: ಕಾರ್ಯಕರ್ತರ ಸಮಾವೇಶದಲ್ಲಿ ಸರ್ಕಾರದ ವಿರುದ್ಧ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2017, 10:45 IST
Last Updated 1 ಜೂನ್ 2017, 10:45 IST
₹ 63 ಕೋಟಿ ಅನುದಾನ ಬಳಸದ ಸರ್ಕಾರ
₹ 63 ಕೋಟಿ ಅನುದಾನ ಬಳಸದ ಸರ್ಕಾರ   

ಯಾದಗಿರಿ:  ‘ಸನ್ನತಿ ಏತನೀರಾವರಿ ಯೋಜನೆಯ ಮೂಲಕ ಗುರುಮಠಕಲ್‌ ಮತಕ್ಷೇತ್ರ ಸೇರಿದಂತೆ ಜಿಲ್ಲೆಯ ಹಲವು ಕೆರೆಗಳನ್ನು ತುಂಬಿಸುವ ಯೋಜನೆಗಳಿಗೆ ಬಳಸುವಂತೆ ಕೇಂದ್ರದ ನಬಾರ್ಡ್ ನೀಡಿರುವ ₹63 ಕೋಟಿ ಅನುದಾನವನ್ನು ಸರ್ಕಾರ ಇದುವರೆಗೂ ವಿನಿಯೋಗಿಸದೇ ಈ ಭಾಗದ ರೈತರಿಗೆ ಅನ್ಯಾಯ ಎಸಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.

ಸಮೀಪದ ಯರಗೋಳ ಗ್ರಾಮದಲ್ಲಿ ಬುಧವಾರ ಬರ ವೀಕ್ಷಣೆ ನಡೆಸಿದ ನಂತರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
‘ಯರಗೋಳದಲ್ಲಿನ ದೊಡ್ಡ ಕೆರೆ 212 ಹೆಕ್ಟೇರ್‌ ವಿಸ್ತೀರ್ಣ ಒಳಗೊಂಡಿದ್ದು, 2,500 ಎಕರೆಗೆ ನೀರುಣಿಸುವ ಸಾಮರ್ಥ್ಯ ಹೊಂದಿದೆ.

ಜಿಲ್ಲೆಯಲ್ಲಿ ಅಂತಹ ನೂರಾರು ಕೆರೆಗಳು ಒಣಗಿದ್ದು, ರೈತರ ಸ್ಥಿತಿಗತಿ ಚಿಂತಾಜನಕವಾಗಿದೆ. ಕೆರೆ ತುಂಬಿಸುವ ಯೋಜನೆಗೆ ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಸಕ್ತಿ ಇಲ್ಲ. ಆಸಕ್ತಿ ಇದಿದ್ದರೆ ಈಗಾಗಲೇ ಕೆರೆ ತುಂಬಿಸುವ ಕಾಮಗಾರಿಗಳಿಗೆ ಚಾಲನೆ ನೀಡಬೇಕಿತ್ತು’ ಎಂದರು.

‘ಸುದೀರ್ಘ ಕಾಲ ಆಡಳಿತ ನಡೆಸಿರುವ ಮಲ್ಲಿಕಾರ್ಜುನ ಖರ್ಗೆ ಈ ಭಾಗದಲ್ಲಿ ಯಾವ ಪ್ರಗತಿಯನ್ನೂ ಮಾಡಿಲ್ಲ. ಈಗಿರುವ ಕೋಲಿ ಸಮಾಜದ ಹಿರಿಯ ಮುಖಂಡ ಬಾಬುರಾವ ಚಿಂಚಿನಸೂರ ಅವರನ್ನು ಸಚಿವ ಸ್ಥಾನದಿಂದ ವಂಚಿಸಿರುವ ಖರ್ಗೆ, ಮಗನನ್ನು ಸಚಿವನನ್ನಾಗಿ ಮಾಡಿದ್ದಾರೆ. ಕೋಲಿ ಸಮಾಜ ಮುಖಂಡರಿಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನ ಕಲ್ಪಿಸಿಲ್ಲ. ಸಾಮಾಜಿಕ ನ್ಯಾಯ ನೀಡದವರಿಂದ ಯಾವ ಅಭಿವೃದ್ಧಿಯನ್ನು ನಿರೀಕ್ಷೆ ಮಾಡುವಂತಿಲ್ಲ’ ಎಂದು ಹೇಳಿದರು.

‘ಕೇಂದ್ರ ಸರ್ಕಾರ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಸಚಿವ ಸಂಪುಟ ಸಭೆಯ ನಿರ್ಣಯ ಹಾಗೂ ಸಾಂವಿಧಾನಿಕ ನಡಾವಳಿ ಮಾರ್ಗಸೂಚಿ ಆಧಾರದ ಮೇಲೆ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಎಲ್ಲಾ ಪ್ರಯತ್ನಗಳನ್ನು ಕೇಂದ್ರ ಸರ್ಕಾರ ಮಾಡಲಿದೆ’ ಎಂದು ಭರವಸೆ ನೀಡಿದರು.

‘ನನ್ನ ಅವಧಿಯಲ್ಲಿ ಯಾದಗಿರಿಯ ಮಿನಿವಿಧಾನ ಸೌಧಕ್ಕೆ ಹಣ ಮಂಜೂರು ಮಾಡಿದ್ದೆ. ಕಟ್ಟಡ ಸಂಕೀರ್ಣ ಉದ್ಘಾಟಿಸಿ ಹೋಗಿರುವ ಸಿಎಂ ಸಿದ್ದರಾಮಯ್ಯ ಮತ್ತೆ ಯಾದಗಿರಿಯತ್ತ ಮುಖಮಾಡಿಲ್ಲ. ಹಿಂದುಳಿದ ಜಿಲ್ಲೆಗಳತ್ತ ಬಂದು ಜನರೊಂದಿಗೆ ಬೆರೆತಾಗ ಮಾತ್ರ ಜನಜೀವನದ ವಾಸ್ತವ ಅರಿವಿಗೆ ಬರುತ್ತದೆ’ ಎಂದು ಕುಟುಕಿದರು.

ನಾನೆಂದೂ ಛತ್ರಿ ಹಿಡಿದಿಲ್ಲ: ‘ಈಗಾಗಲೇ ಒಂಭತ್ತು ಜಿಲ್ಲೆಗಳಲ್ಲಿ ಬರ ವೀಕ್ಷಣೆ ನಡೆಸಿದ್ದೇನೆ. ಮಳೆ ಬರುತ್ತಿರುವುದರಿಂದ ಯಡಿಯೂರಪ್ಪ ಛತ್ರಿ ಹಿಡಿದು ಬರ ವೀಕ್ಷಣೆ ನಡೆಸುತ್ತಿದ್ದಾರೆ ಎಂದು ಸಿದ್ದ ರಾಮಯ್ಯ ಹೇಳಿದ್ದಾರೆ. ಯಾದಗಿರಿಗೆ ಮಳೆ ಸುರಿದು ಮೂರು ವರ್ಷ ಕಳೆದಿದೆ ಎಂದು ರೈತರು ಹೇಳಿದ್ದಾರೆ. ಬಿಸಿಲಿಗೆ ನಾನೆಂದೂ ಛತ್ರಿ ಹಿಡಿದಿಲ್ಲ.’ ಎಂದು ಯಡಿಯೂರಪ್ಪ ಹೇಳಿದರು.

ಮುಖಂಡರಾದ ವೆಂಕಟರೆಡ್ಡಿ ಮುದ್ನಾಳ, ಗೋವಿಂದ ಕಾರಜೋಳ, ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿದರು.

ಸಂಸದ ಭಗವಂತ ಖೂಬಾ,ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪೂರೆ, ಶಾಸಕ ಗೋವಿಂದ ಕಾರಜೋಳ, ಎಸ್‌ಟಿ ಮೋರ್ಚಾದ ರಾಜ್ಯ ಘಟಕ ಅಧ್ಯಕ್ಷ ರಾಜೂಗೌಡ,  ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ನಾಗರತ್ನಾ ಕುಪ್ಪಿ, ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ವೀಣಾ ಮೋದಿ, ಜಿಲ್ಲಾ ಉಸ್ತುವಾರಿ ರವಿಕುಮಾರ್, ಹನುಮಂತಪ್ಪ ಕಂದಕೂರ, ಶಾಸಕ ಗುರುಪಾಟೀಲ, ಮಾಜಿ ಶಾಸಕ ಡಾ.ವೀರಬಸಂತರೆಡ್ಡಿ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ, ಭೀಮಣ್ಣ ಮೇಟಿ, ಶರಣಗೌಡ ಬಾಡಿಯಾಳ, ಖಂಡಪ್ಪ ದಾಸನ ಇದ್ದರು.

ದಲಿತರ ಮನೆಯಲ್ಲಿ ಉಪಾಹಾರ ಸೇವನೆ: ಮಂಗಳವಾರ ರಾತ್ರಿ ಯಾದಗಿರಿಗೆ ಬಂದು ತಂಗಿದ್ದ ಬಿ.ಎಸ್.ಯಡಿಯೂರಪ್ಪ ನಗರದ ಅಂಬೇಡ್ಕರ್‌ ಕಾಲೊನಿಯಲ್ಲಿನ ದಲಿತ ಮುಖಂಡ ಸ್ವಾಮಿದೇವ ದಾಸನಕೇರಿ ಅವರ ಮನೆಯಲ್ಲಿ ಉಪ್ಪಿಟ್ಟು, ಅವಲಕ್ಕಿ ಸೇವಿಸಿದರು. ನಂತರ ಕಾಲೊನಿಯ ಹಲವು ದಲಿತ ಮನೆಯಂಗಳದಲ್ಲಿ ಸಸಿನೆಟ್ಟರು.

ಭಾಷಣ ಅವಕಾಶಕ್ಕಾಗಿ ಆಕ್ರೋಶ... ವೇದಿಕೆಯಲ್ಲಿ ಮುಖಂಡ ಸಾಯಿಬಣ್ಣ ಬೋರಬಂಡಾ ಅವರಿಗೆ ಭಾಷಣಕ್ಕೆ ಅವಕಾಶ ಕಲ್ಪಿಸದಿರುವುದನ್ನು ಖಂಡಿಸಿ ಬೋರಬಂಡಾ ಬೆಂಬಲಿಗರು ಸಮಾವೇಶದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ದೇಶಕ್ಕೆ ₹ 3 ಲಕ್ಷ ಕೋಟಿ ಆದಾಯ:  ‘ಆರ್ಥಿಕವಾಗಿ ದಿವಾಳಿಗೊಂಡಿದ್ದ ದೇಶವನ್ನು ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಆರ್ಥಿಕ ಪ್ರಗತಿಯತ್ತ ಕೊಂಡೊಯ್ದಿದ್ದಾರೆ’ ಎಂದು  ಯಡಿಯೂರಪ್ಪ ಹೇಳಿದರು.

ನಗರದ ವಿದ್ಯಾಮಂಗಲ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು. ನಗದು ರದ್ದತಿಯಿಂದಾಗಿ ದೇಶಕ್ಕೆ ₹3 ಲಕ್ಷ ಕೋಟಿ ಹೆಚ್ಚುವರಿ ಆದಾಯ ಬಂದಿದೆ. ಸುಮಾರು 86 ಲಕ್ಷ ಹೊಸ ತೆರಿಗೆದಾರರು ಸೇರ್ಪಡೆಯಾಗಿದ್ದಾರೆ. ಇದು ಅಭಿವೃದ್ಧಿ ಅಲ್ಲವೇ ಎಂದರು.

‘40 ವರ್ಷಗಳು ಕಾಂಗ್ರೆಸ್ ದಲಿತರನ್ನು  ಮತಬ್ಯಾಂಕ್ ಮಾಡಿಕೊಂಡಿವೆ. ಇದೀಗ ದಲಿತರ ಮನೆಯಲ್ಲಿ ನಾವು ಊಟ ಮಾಡುವುದನ್ನು ಸಹಿಸಲಾಗುತ್ತಿಲ್ಲ. ಮತಬ್ಯಾಂಕ್ ಹಾಳಾಗುತ್ತದೆ ಎಂದು ಬಿಜೆಪಿ ವಿರುದ್ಧ ಟೀಕೆ ಮಾಡುತ್ತಿದ್ದಾರೆ’ ಎಂದರು.
****
ಜನಾಭಿಪ್ರಾಯದ ಮೇಲೆ ಟಿಕೆಟ್‌
ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಜನಾಭಿಪ್ರಾಯದ ಮೇಲೆ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

‘ಮುಂದಿನ ಚುನಾವಣಾ ಅಭ್ಯರ್ಥಿಗಳ ಆಯ್ಕೆ ಪಟ್ಟಿ ತಯಾರಿಸಲು ಈಗಾಗಲೇ ರಾಜ್ಯದಲ್ಲಿ ಒಮ್ಮೆ ಸರ್ವೇ ಕಾರ್ಯ ನಡೆಸಲಾಗಿದೆ. ಈಗ ‘ಬರ ವೀಕ್ಷಣೆಯ ಜತೆಗೂ ಅಭ್ಯರ್ಥಿಗಳ ಬಗ್ಗೆ ಜನಾಭಿಪ್ರಾಯ ಕೂಡ ಸಂಗ್ರಹಿಸಲಾಗುತ್ತಿದೆ. ಚುನಾವಣಾ ಮುನ್ನ ಮತ್ತೊಮ್ಮೆ ಸರ್ವೇ ಕಾರ್ಯ ನಡೆಸಲಾಗುವುದು. ಜನರ ಒಲವು ಇರುವ ವ್ಯಕ್ತಿಗೆ ಟಿಕೆಟ್‌ ನೀಡಲಾಗು ವುದು. ಈ ಕುರಿತು ಆಗಸ್ಟ್‌ನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಅಂದು ಅಂತಿಮವಾಗಿ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಯಲಿದೆ’ ಎಂದು ತಿಳಿಸಿದರು.
****
ಸಾಲಮನ್ನಾ ಮಾಡದಿದ್ದರೆ ಉಗ್ರ ಪ್ರತಿಭಟನೆ: ಯಡಿಯೂರಪ್ಪ
ಯಾದಗಿರಿ:
  ‘ಬರಗಾಲದಿಂದ ತತ್ತರಿಸಿರುವ ರಾಜ್ಯದ ರೈತರ ಸಾಲಮನ್ನಾ ಮಾಡದ ರಾಜ್ಯ ಸರ್ಕಾರದ ವಿರುದ್ಧ ಜುಲೈನಲ್ಲಿ ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು’ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಸಮೀಪದ ಯರಗೋಳ ಗ್ರಾಮಕ್ಕೆ ಬುಧವಾರ ಬರವೀಕ್ಷಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ದೊಡ್ಡಕೆರೆ ವೀಕ್ಷಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ರಾಜ್ಯದಲ್ಲಿ ಮೇವಿನ ಕೊರತೆ ಉದ್ಭವಿಸಿದೆ. ಮೇವು ಸಿಗದೇ ಜಾನುವಾರುಗಳ ಸಾವು ಸಂಭವಿಸುತ್ತಿವೆ. ಆದರೂ, ಸರ್ಕಾರ ಎಲ್ಲೂ ಗೋಶಾಲೆಗಳನ್ನು ತೆರೆದಿಲ್ಲ. ಮೇವು ಬ್ಯಾಂಕುಗಳಲ್ಲಿ ಮೇವಿನ ಸಂಗ್ರಹ ಇಲ್ಲ. ಹಾಗಾಗಿ, ರಾಜ್ಯದ ರೈತರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಕನಿಷ್ಠ ಮೂರು ಲಕ್ಷ ರೈತರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಸಹಕಾರಿ ಸಂಘಗಳಲ್ಲಿ ಇರುವ ರೈತರ ಸಾಲವನ್ನು ಮನ್ನಾ ಮಾಡಿ ಇಲ್ಲವೇ ಆಡಳಿತ ಬಿಟ್ಟು ತೊಲಗಿ ಎಂಬುದಾಗಿ ಒತ್ತಾಯಿಸಿ ಸರ್ಕಾರಕ್ಕೆ ಛೀಮಾರಿ ಹಾಕಲಾಗುವುದು’ ಎಂದರು.

ನುಡಿದಂತೆ ನಡೆಯದ ಸರ್ಕಾರ: ‘ಸರ್ಕಾರ ₹1.85 ಲಕ್ಷ ಸಾವಿರ ಕೋಟಿ ಬಜೆಟ್‌ ಮಂಡಿಸಿದೆ. ಅಧಿಕಾರದ ಚುಕ್ಕಾಣಿ ಹಿಡಿಯುವ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ರಾಜ್ಯದ ಸಮಸ್ತ ನೀರಾವರಿ ಯೋಜನೆಗಳಿಗೆ ಪ್ರತಿವರ್ಷ ₹10 ಸಾವಿರ ಕೋಟಿ ಅನುದಾನ ನೀಡುವುದಾಗಿ ಕೃಷ್ಣೆಯ ಮೇಲೆ ಆಣೆ ಮಾಡಿದ್ದರು. ಆದರೆ, ಇದುವರೆಗೂ ಕೇವಲ ₹35 ಸಾವಿರ ಕೋಟಿಯಷ್ಟೇ ಅನುದಾನ ನೀಡಿದ್ದಾರೆ. ನುಡಿದಂತೆ ನಡೆಯದ ಸರ್ಕಾರ ಜನರ ಪಾಲಿಗೆ ಸತ್ತು ಹೋಗಿದೆ’ ಎಂದು ಟೀಕಿಸಿದರು.

ಗೋಹತ್ಯೆ ನಿಷೇಧ ಮಹಾತ್ಮ ಗಾಂಧೀಜಿ ಕನಸು:  ಗೋಹತ್ಯೆ ನಿಷೇಧ ಮಹಾತ್ಮ ಗಾಂಧೀಜಿ ಅವರ ಕನಸಾಗಿತ್ತು. ಇಷ್ಟು ವರ್ಷಗಳ ನಂತರ ನರೇಂದ್ರ ಮೋದಿ ಅದನ್ನು ನನಸು ಮಾಡಿದ್ದಾರೆ. ಕೋರ್ಟ್‌ ತಡೆ ನೀಡಿರಬಹುದು. ಕೋರ್ಟ್‌ ತಡೆ ಶೀಘ್ರ ತೆರವು ಆಗಲಿದ್ದು, ಕಾಯ್ದೆ ಜಾರಿಗೆ ಬರಲಿದೆ’ ಎಂದು ಯಡಿಯೂರಪ್ಪ ಹೇಳಿದರು.

ಪರಿಶಿಷ್ಟರಿಗೆ ಅನ್ಯಾಯ:  ಹಿಂದುಳಿದ ಸಮುದಾಯ ಹಿತ ಕಾಪಾಡಲಾಗಿದೆ ಎಂದು ಹೇಳುವ ಸರ್ಕಾರ ಪರಿಶಿಷ್ಟ ಜಾತಿ, ಪಂಗಡದ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಮಾಡಿರುವುದಾದರೂ ಏನು? ಯಾವ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂಬುದರ ಬಗ್ಗೆ ಸರ್ಕಾರ ಅಂಕಿಅಂಶ ಬಿಡುಗಡೆ ಮಾಡಲಿ ನೋಡೋಣ ಎಂದು ಯಡಿಯೂರಪ್ಪ ಸರ್ಕಾರಕ್ಕೆ ಸವಾಲು ಹಾಕಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.