ADVERTISEMENT

ಮನೆ ಕುಸಿದ ಮಣ್ಣಿನಡಿ ಸಿಲುಕಿದ ಮಕ್ಕಳನ್ನು ರಕ್ಷಿಸಿದ ತಾಯಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 16:41 IST
Last Updated 22 ಅಕ್ಟೋಬರ್ 2020, 16:41 IST
ವಡಗೇರಾ ಪಟ್ಟಣದ ಅಂಬೇಡ್ಕರ್ ಬಡಾವಣೆಯಲ್ಲಿ ಬುಧವಾರ ಸುರಿದ ಮಳೆಗೆ ಕುಸಿದುಬಿದ್ದಿರುವ ಮನೆಗೆ ತಹಶೀಲ್ದಾರ್‌ ಸುರೇಶ ಅಂಕಲಗಿ ಮತ್ತು ಗ್ರಾಮ ಲೆಕ್ಕಿಗ ಸಿದ್ದಣ್ಣಗೌಡ ಭೇಟಿ ನೀಡಿ ಪರಿಶೀಲನೆ ಮಾಡಿದರು
ವಡಗೇರಾ ಪಟ್ಟಣದ ಅಂಬೇಡ್ಕರ್ ಬಡಾವಣೆಯಲ್ಲಿ ಬುಧವಾರ ಸುರಿದ ಮಳೆಗೆ ಕುಸಿದುಬಿದ್ದಿರುವ ಮನೆಗೆ ತಹಶೀಲ್ದಾರ್‌ ಸುರೇಶ ಅಂಕಲಗಿ ಮತ್ತು ಗ್ರಾಮ ಲೆಕ್ಕಿಗ ಸಿದ್ದಣ್ಣಗೌಡ ಭೇಟಿ ನೀಡಿ ಪರಿಶೀಲನೆ ಮಾಡಿದರು   

ವಡಗೇರಾ: ಎರಡು‌ ದಿನಗಳಿಂದ ಸುರಿದ ಮಳೆಗೆ ಪಟ್ಟಣದ ಅಂಬೇಡ್ಕರ್ ಬಡಾವಣೆಯಲ್ಲಿ ಬುಧವಾರ ರಾತ್ರಿ ಮನೆ ಕುಸಿದು ಮಣ್ಣಿನಡಿ ಸಿಲುಕಿದ್ದ ಮೂವರು ಮಕ್ಕಳನ್ನು ತಾಯಿ ಚಂದ್ರಮ್ಮ ರಕ್ಷಿಸಿದ್ದಾರೆ.

ಮಲ್ಲಪ್ಪ ಬಸ್ಸಪ್ಪ ಖ್ಯಾದಿಗೇರಿ ಅವರ ಮನೆ ಕುಸಿದಿದ್ದು, ಮಕ್ಕಳಾದ ಶಿವಮ್ಮ, ನಾಗಮ್ಮ, ಪರಶುರಾಮ ಅವರು ಛಾವಣಿ ಮಣ್ಣಿನಡಿಯಲ್ಲಿ ಸಿಲುಕಿದ್ದರು. ತಾಯಿ ಚಂದ್ರಮ್ಮ ಅವರು ತಮ್ಮ ಪ್ರಾಣದ ಹಂಗು ತೊರೆದು ಮಕ್ಕಳನ್ನು ರಕ್ಷಿಸಿದ್ದಾರೆ. ಮಲ್ಲಪ್ಪ ಅವರನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.

ರಾತ್ರಿ ಎಂದಿನಂತೆ ಊಟ ಮಾಡಿ ಮಲ್ಲಪ್ಪ ಖ್ಯಾದಿಗೇರಿ ಹಾಗೂ ಆತನ ಮೂವರು ಮಕ್ಕಳು ಮಲಗಿಕೊಂಡಿರುವ ಸಮಯದಲ್ಲಿ ಛಾವಣಿ ಕುಸಿದುಬಿದ್ದಿದೆ. ಮಲಗಿದ್ದ ಸಂದರ್ಭದಲ್ಲಿ ಛಾವಣಿ ಕುಸಿದುಬಿದ್ದಿದ್ದರಿಂದ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಆದರೆ ಮನೆಯಲ್ಲಿದ್ದ ದವಸ– ಧಾನ್ಯ, ಪಾತ್ರೆಗಳು, ಟಿ.ವಿ, ಬಂಗಾರದ ಒಡವೆಗಳು, ಮೊಬೈಲ್‍ ಮಣ್ಣಿನಲ್ಲಿ ಹಾಳಾಗಿವೆ.

ತಹಶೀಲ್ದಾರ್‌ ಸುರೇಶ ಅಂಕಲಗಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಸಿದ್ದಣ್ಣಗೌಡ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

‘ಕುಟುಂಬಕ್ಕೆ ಕಂದಾಯ ಇಲಾಖೆಯಿಂದ ತಾತ್ಕಾಲಿಕವಾಗಿ ಅಕ್ಕಿ ನೀಡಲಾಗಿದೆ. ಮನೆ ಬಳಕೆ ಸಾಮಗ್ರಿಗಳ ಒಂದು‌‌ ಕಿಟ್ ಕೂಡ ವಿತರಿಸಲಾಗುವುದು’ ಎಂದು ತಹಶೀಲ್ದಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.