ADVERTISEMENT

6 ಸರ್ಕಾರಿ ನೌಕರಿ ಗಿಟ್ಟಿಸಿದ ಕೋಟಗೇರಾ ಗ್ರಾಮದ ಯುವಕ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 6:36 IST
Last Updated 25 ಫೆಬ್ರುವರಿ 2021, 6:36 IST
ಭೀಮಾರಾಯ ಬಂದಳ್ಳಿ
ಭೀಮಾರಾಯ ಬಂದಳ್ಳಿ   

ಯರಗೋಳ: ಗ್ರಾಮೀಣ ಪ್ರದೇಶದ ಕೃಷಿ ಕುಟುಂಬದ ಯುವಕ 6 ಸರ್ಕಾರಿ ನೌಕರಿಗೆ ಆಯ್ಕೆಯಾಗುವ ಮೂಲಕ ಸ್ಪರ್ಧಾರ್ಥಿಗಳಿಗೆ ಮಾದರಿಯಾಗಿದ್ದಾರೆ.

ಸಮೀಪದ ಕೋಟಗೇರಾ ಗ್ರಾಮದ 32 ವರ್ಷದ ಭೀಮರಾಯ ಬಂದಳ್ಳಿ ಸಾಧನೆ ಮಾಡಿರುವವರು. ಸದ್ಯ ಕಲಬುರ್ಗಿಯ ನಾಗನಹಳ್ಳಿಯ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಯ ತರಬೇತಿಯಲ್ಲಿದ್ದಾರೆ.

ಕೋಟಗೇರಾ ಗ್ರಾಮದ ರೈತ ಸಾಬಣ್ಣ ಮತ್ತು ಲಕ್ಷ್ಮಮ್ಮ ದಂಪತಿಯ ಮೂರನೇ ಪುತ್ರರಾಗಿರುವ ಇವರು ಬಡತನದ ಬೇಗುದಿಯಲ್ಲಿಯೇ ಅಧ್ಯಯನ ಮಾಡಿ ಯಶಸ್ಸು ಸಾಧಿಸಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಬಿ.ಎ. ಮತ್ತು ಎಂ.ಎ ಪದವಿ ಮುಗಿಸಿದ್ದಾರೆ.

ADVERTISEMENT

2008ರಲ್ಲಿ ಭಾರತೀಯ ಮೀಸಲು ಪೊಲೀಸ್ ಕಾನ್‌ಸ್ಟೆಬಲ್ (ಐಆರ್‌ಬಿ) ಹುದ್ದೆಗೆ ಆಯ್ಕೆಯಾಗಿ ಕೊಪ್ಪಳ ಜಿಲ್ಲೆಯಲ್ಲಿ 8 ವರ್ಷ ಹಾಗೂ 2017ರಲ್ಲಿ ಜಿಲ್ಲಾ ಮೀಸಲು ಪೊಲೀಸ್ ಪಡೆ (ಡಿಆರ್‌ಪಿ) ಹುದ್ದೆಗೆ ಆಯ್ಕೆಯಾಗಿ 3 ವರ್ಷ ಕಾರ್ಯನಿರ್ವಹಿಸಿದ್ದಾರೆ. ಇದೇ ವರ್ಷ ಅಬಕಾರಿ ಗಾರ್ಡ್ ಹುದ್ದೆಗೂ ಆಯ್ಕೆಯಾಗಿದ್ದರು.

2018ರಲ್ಲಿ ಕರ್ನಾಟಕ ಮೀಸಲು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿದ್ದರು. 2020ರಲ್ಲಿಸಾಮಾನ್ಯ ಮತ್ತು ಕಲ್ಯಾಣ ಕರ್ನಾಟಕ ವಿಭಾಗಗಳಲ್ಲಿ ಸಿವಿಲ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ತೇರ್ಗಡೆಯಾಗಿದ್ದರು.

‘ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ಪ್ರತಿದಿನವೂ 6 ಗಂಟೆ ಓದುತ್ತಿದ್ದೆ. ಹಳೆಯ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದು, ಪುನರ್‌ಮನನ ಮಾಡಿದರೆ ಸುಲಭವಾಗಿ ಸ್ಪರ್ಧಾತ್ಮ ಪರೀಕ್ಷೆಗಳನ್ನು ಎದುರಿಸಬಹುದು. ಪರೀಕ್ಷೆಗಳ ತಯಾರಿಗಾಗಿ ಪ್ರತಿದಿನವೂ ‘ಪ್ರಜಾವಾಣಿ’ ಮತ್ತು ಡೆಕ್ಕನ್ ಹೆರಾಲ್ಡ್ ಓದುತ್ತಿದ್ದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.