ADVERTISEMENT

‘ಆರೋಗ್ಯ ಕರ್ನಾಟಕ’ ನೋಂದಣಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 15:23 IST
Last Updated 16 ಅಕ್ಟೋಬರ್ 2018, 15:23 IST
ಡಾ.ಹಬೀಬ ಉಸ್ಮಾನ್ ಪಟೇಲ್
ಡಾ.ಹಬೀಬ ಉಸ್ಮಾನ್ ಪಟೇಲ್   

ಯಾದಗಿರಿ: 'ಸಾರ್ವತ್ರಿಕ ಆರೋಗ್ಯ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿಗೊಳಿಸಿದ್ದು, ಜನರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹಬೀಬ ಉಸ್ಮಾನ್ ಪಟೇಲ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

‘ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ, ರಾಜೀವ್‌ ಆರೋಗ್ಯ ಭಾಗ್ಯ, ಆರ್.ಎಸ್.ಬಿ.ವೈ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆ (ಆರ್.ಬಿ.ಎಸ್.ಕೆ), ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ ಮತ್ತು ಇಂದಿರಾ ಸುರಕ್ಷಾ ಯೋಜನೆಗಳನ್ನು ವಿಲೀನಗೊಳಿಸಿ ಆರೋಗ್ಯ ಕರ್ನಾಟಕ ಯೋಜನೆ ರೂಪಿಸಲಾಗಿದೆ’ ಎಂದು ತಿಳಿಸಿದರು.

‘ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ಕರ್ನಾಟಕ ನೋಂದಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇನ್ನೆರಡು ತಿಂಗಳಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕಿನ ನೆಮ್ಮದಿ ಕೇಂದ್ರಗಳಲ್ಲಿ ಆರೋಗ್ಯ ಕರ್ನಾಟಕ ನೋಂದಣಿ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಆಧಾರ್ ಮತ್ತು ಪಡಿತರ ಚೀಟಿ ಮಾಹಿತಿ ನೀಡುವುದರ ಜಗೆ ₹10 ಶುಲ್ಕ ಪಾವತಿಸಿ ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಣಿ ಮಾಡಿಸಿಕೊಂಡು ಕಾರ್ಡ್‌ ಪಡೆದುಕೊಳ್ಳಬೇಕು’ ಎಂದರು.

ADVERTISEMENT

‘ಯೋಜನೆಗೆ ನೋಂದಾಯಿಸಲು ನಿಗದಿತ ದಿನಾಂಕ ನಿಗದಿಪಡಿಸದೇ ಇರುವುದರಿಂದ ಸಾರ್ವಜನಿಕರು ಗಲಿಬಿಲಿಗೊಳ್ಳಬಾರದು. ಈ ಯೋಜನೆಯಡಿ ಚಿಕಿತ್ಸೆ ಪಡೆಯುವ ಐದು ಸದಸ್ಯರು ಹೊಂದಿರುವ ಬಿಪಿಎಲ್ ಕುಟುಂಬಕ್ಕೆ ₹1.5 ಲಕ್ಷ ಉಪಯೋಗವಾಗಲಿದ್ದು, ವಿಶೇಷ ಪ್ರಕರಣದಡಿ ಹೆಚ್ಚುವರಿಯಾಗಿ ₹50 ಸಾವಿರ ಸಹಾಯಧನ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

‘ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಪ್ರಾಥಮಿಕ, ದ್ವಿತೀಯ, ತೃತೀಯ ಹಾಗೂ ತುರ್ತು ಚಿಕಿತ್ಸೆಗಳೂ ಸೇರಿದಂತೆ 1,516 ಚಿಕಿತ್ಸೆಗಳು ಒಳಗೊಂಡಿದ್ದು, ಶಸ್ತ್ರಚಿಕಿತ್ಸೆಯ ಪೂರ್ವ ಅಥವಾ ನಂತರದ ಸ್ಥಿರೀಕರಣ, ವೈದ್ಯಕೀಯ ಆರೈಕೆ, ಅನುಸರಣ ಚಿಕಿತ್ಸೆ, ವೈದ್ಯಕೀಯ ನಿರ್ವಹಣೆ ಇರುತ್ತದೆ. ವೈದ್ಯರ ಸಮಾಲೋಚನಾ ಶುಲ್ಕ ಇರುವುದಿಲ್ಲ. ಪ್ರಾಥಮಿಕ, ತೃತೀಯ ಹಂತದ ಸಾಮಾನ್ಯ ಚಿಕಿತ್ಸೆಯನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ಉಚಿತವಾಗಿ ಅಥವಾ ಅತ್ಯಲ್ಪ ಶುಲ್ಕ ಪಾವತಿಸಿ ಪಡೆಯಬಹುದು’ ಎಂದು ಹೇಳಿದರು.

‘ರೋಗಿಯು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯಬೇಕೆಂಬ ಸರ್ಕಾರದ ನಿರ್ದೇಶನ ಇರುವುದರಿಂದ ಕಾರ್ಡ್ ಹೊಂದಿರುವ ರೋಗಿಗಳು ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಗಿರುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿರದ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸು ಪತ್ರ ಪಡೆದು ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ತುರ್ತು ಚಿಕಿತ್ಸೆಗಳಿಗೆ ಸಂಬಂಧಿಸಿದಂತೆ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು. ತುರ್ತು ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸು ಪತ್ರ ಅಗತ್ಯ ಇರುವುದಿಲ್ಲ’ ಎಂದು ಹೇಳಿದರು.

‘ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಒಟ್ಟು 900 ಆಸ್ಪತ್ರೆಗಳು ನೋಂದಣಿಯಾಗಿವೆ. ಇದರಲ್ಲಿ ಸರ್ಕಾರಿ ಆಸ್ಪತ್ರೆಗಳು-381, ಖಾಸಗಿ-519 ಆಸ್ಪತ್ರೆಗಳು ಇರುತ್ತವೆ. ಜಿಲ್ಲೆಯಲ್ಲಿ ಒಟ್ಟು 9 ಆಸ್ಪತ್ರೆಗಳು ನೋಂದಣಿಯಾಗಿರುತ್ತವೆ. ರಾಜ್ಯ ಹೊರತುಪಡಿಸಿ ಸೊಲ್ಲಾಪುರದಲ್ಲಿ-6 ಹಾಗೂ ಹೈದರಾಬಾದನಲ್ಲಿ-9 ಆಸ್ಪತ್ರೆಗಳು ನೋಂದಣಿಯಾಗಿರುತ್ತವೆ’ ಎಂದು ವಿವರಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಜೀವಕುಮಾರ ರಾಯಚೂರಕರ್, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಪ್ರಾದೇಶಿಕ ಸಮಾಲೋಚಕ ಡಾ.ಅಲಿಬಾಬಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.