ADVERTISEMENT

ಹೊರಗಡೆಯಿಂದ ಔಷಧಿ ತರಿಸಿದರೆ ಕ್ರಮ: ಜಿಲ್ಲಾಧಿಕಾರಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 21 ಮೇ 2021, 16:33 IST
Last Updated 21 ಮೇ 2021, 16:33 IST
21ಎಸ್ಎಚ್ಪಿ 3: ಶಹಾಪುರ ನಗರದ ಸರ್ಕಾರಿ ಆಸ್ಪತ್ರೆಗೆ ಶುಕ್ರವಾರ ಜಿಲ್ಲಾಧಿಕಾರಿ ಡಾ.ಆರ್.ರಾಗಪ್ರೀಯಾ ಭೇಟಿ ನೀಡಿ ವೈದ್ಯರ ಜೊತೆ ಸಮಾಲೋಚನೆ ನಡೆಸಿದರು
21ಎಸ್ಎಚ್ಪಿ 3: ಶಹಾಪುರ ನಗರದ ಸರ್ಕಾರಿ ಆಸ್ಪತ್ರೆಗೆ ಶುಕ್ರವಾರ ಜಿಲ್ಲಾಧಿಕಾರಿ ಡಾ.ಆರ್.ರಾಗಪ್ರೀಯಾ ಭೇಟಿ ನೀಡಿ ವೈದ್ಯರ ಜೊತೆ ಸಮಾಲೋಚನೆ ನಡೆಸಿದರು   

ಶಹಾಪುರ: ಕೋವಿಡ್ ರೋಗಿಗಗಳ ಚಿಕಿತ್ಸೆಗಾಗಿ ಸರ್ಕಾರ ಸಾಕಷ್ಟು ಹಣ ನೀಡಿದೆ. ಸರಿಯಾಗಿ ಸದ್ಭಳಕೆಯಾಗಬೇಕು. ಹೊರಗಡೆಯಿಂದ ಔಷಧಿ ಹಾಗೂ ಇಂಜೆಕ್ಷನ್ ತರಿಸಿದರೆ ವೈದ್ಯರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ವೈದ್ಯರಿಗೆ ಎಚ್ಚರಿಕೆ ನೀಡಿದರು.

ನಗರದ ಸರ್ಕಾರಿ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ ರೋಗಿಗಳ ಅಳಲನ್ನು ಕೇಳಿ ವೈದ್ಯರಿಗೆ ತರಾಟೆಗೆ ತೆಗೆದುಕೊಂಡರು.

ನಗರದ ಸರ್ಕಾರಿ ಆಸ್ಪತ್ರೆಯಲ್ಲಿನ ಔಷಧಿಯ ಬಗ್ಗೆ ಪ್ರತಿ ದಿನ ಸಮಗ್ರ ಮಾಹಿತಿ ಒದಗಿಸಬೇಕು ಎಂದು ಸ್ಥಳದಲ್ಲಿಯೇ ಉಪಸ್ಥಿತರಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಇಂದುಮತಿ ಪಾಟೀಲ್ ಕಾಮಶೆಟ್ಟಿ ಅವರಿಗೆ ತಾಕೀತು ಮಾಡಿದರು.

ADVERTISEMENT

ಆಸ್ಪತ್ರೆಯಲ್ಲಿ 10 ವೆಂಟಿಲೆಟರ್‌ನಲ್ಲಿ 6 ಆರಂಭವಾಗಿವೆ. ಉಳಿದವುಗಳು ತ್ವರಿತವಾಗಿ ಕಾರ್ಯಾರಂಭಗೊಳಿಸಬೇಕು. ಔಷಧಿ ಹಾಗೂ ಇನ್ನಿತರ ಸಾಮಗ್ರಿಗಳ ಬಗ್ಗೆ ದಿನಾಲು ಮಾಹಿತಿ ಒದಗಿಸಬೇಕು ಎಂದು ನೋಡಲ್ ಅಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪ್ರಭಾಕರ ಅವರಿಗೆ ಸೂಚಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಹೆಚ್ಚಿನ ಹೊಣೆಗಾರಿಕೆ ಇದೆ. ಗ್ರಾಮದಲ್ಲಿ ಸೋಂಕು ಪಸರಿದಂತೆ ಸ್ವಚ್ಛತೆ, ಜಾಗೃತಿ ಮೂಡಿಸಬೇಕು. ಸೋಂಕಿತರು ಬೇಕಾಬಿಟ್ಟಿ ಓಡಾಡದಂತೆ ನೋಡಿಕೊಳ್ಳಬೇಕು. ಹೋಂ ಕ್ವಾರಂಟೈನ್‌ನಲ್ಲಿ ಇರಿಸಬೇಕು. ನಕಲಿ ವೈದ್ಯರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಗನಾಥಮೂರ್ತಿ, ತಹಶೀಲ್ದಾರ ಜಗನಾಥರಡ್ಡಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೆದಾರ್, ಪೌರಾಯುಕ್ತ ರಮೇಶ ಪಟ್ಟೆದಾರ ಅವರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.