ADVERTISEMENT

ಯಾದಗಿರಿ: ಕಳಪೆ ರಸಗೊಬ್ಬರ ಮಾರಾಟ ಮಾಡಿದರೆ ಕ್ರಮ

ಕುಡಿಯುವ ನೀರಿನ ಸಮಸ್ಯೆ, ಮುಂಗಾರು ಹಂಗಾಮಿನ ಸಿದ್ಧತೆ ಕುರಿತ ಸಭೆ: ಸಚಿವ ಪ್ರಭು ಚವಾಣ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 15 ಮೇ 2022, 4:33 IST
Last Updated 15 ಮೇ 2022, 4:33 IST
ಯಾದಗಿರಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಮುಂಗಾರು ಹಂಗಾಮು ಸಿದ್ಧತಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಮಾತನಾಡಿದರು
ಯಾದಗಿರಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಮುಂಗಾರು ಹಂಗಾಮು ಸಿದ್ಧತಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಮಾತನಾಡಿದರು   

ಯಾದಗಿರಿ: ಜಿಲ್ಲೆಯಲ್ಲಿ ಕಳಪೆ ಗುಣಮಟ್ಟದ ರಸಗೊಬ್ಬರ ಗೊಬ್ಬರವನ್ನು ಮಾರಾಟ ಮಾಡಿದಲ್ಲಿ, ಅಂಥವರನ್ನು ಪತ್ತೆಹಚ್ಚಿ ದೂರು ದಾಖಲಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ.ಚವಾಣ್‌ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬಿತ್ತನೆ ಬೀಜ, ಗೊಬ್ಬರ ವಿತರಣೆ ಕುರಿತಂತೆ ಪರಾಮರ್ಶಿಸಲು ಕರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಸಕ್ತ ವರ್ಷ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸ ಗೊಬ್ಬರವನ್ನು ಕೃಷಿ ಇಲಾಖೆ ಅಧಿಕಾರಿಗಳು ಒದಗಿಸಬೇಕು ಎಂದು ಸೂಚಿಸಿದರು.

ADVERTISEMENT

ಈ ನಿಟ್ಟಿನಲ್ಲಿ ಕೃಷಿ ಇಲಾಖೆಯ ಜಾಗೃತದಳದ ಅಧಿಕಾರಿಗಳು ಎಲ್ಲಾ ರಸಗೊಬ್ಬರ ಮಳಿಗೆಗಳನ್ನು ತಪಾಸಣೆ ಮಾಡಬೇಕು. ತಪ್ಪಿತಸ್ಥ ಮಾರಾಟಗಾರರು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಯಾವುದೇ ಸಮಸ್ಯೆ ಇಲ್ಲ. ಅದ್ದರಿಂದ ರೈತರು ಯಾವುದೇ ಆತಂಕ ಕ್ಕೆ ಒಳಗಾಗಬಾರದು ಎಂದು ಸಚಿವರು ಈ ಸಂದರ್ಭದಲ್ಲಿ ಧೈರ್ಯ ತುಂಬಿದರು.

ಮುಂಗಾರು ಹಂಗಾಮಿಗೆ ಒಟ್ಟು 1,17,360 ಮೆಟ್ರಿಕ್ ಟನ್‌ನಷ್ಟು ರಸಗೊಬ್ಬರದ ಅವಶ್ಯಕತೆಯಿದ್ದು, ಜಿಲ್ಲೆಯಲ್ಲಿ ಪ್ರಸ್ತುತ 25,701 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ. 3,90,210 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಪ್ರಮುಖ ಬೆಳೆಗಳಾದ ಭತ್ತ 87,000, ತೊಗರಿ-96,000, ಹೆಸರು 26,010, ಹತ್ತಿ-1,66,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಬೆಳೆಗಳಿಗೆ ಅಗತ್ಯವಿರುವಷ್ಟು ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿ, ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಪರಾಮರ್ಶಿಸಿದ ಸಚಿವರು, ಜಿಲ್ಲೆಯಲ್ಲಿ ಪ್ರಸಕ್ತ ಬೇಸಿಗೆಯಲ್ಲಿ ಏಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆಯೋ ಶೀಘ್ರ ಪರಿಹರಿಸಬೇಕು ಎಂದು ತಾಲ್ಲೂಕಿನ ತಹಶೀಲ್ದಾರರು ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಖುದ್ದಾಗಿ ಹೋಗಿ ಪರಿಶೀಲಿಸಿ ಸಮಸ್ಯೆ ಬಗೆಹರಿಸಬೇಕು ಎಂದು ತಿಳಿಸಿದರು.

ಗ್ರಾಮಗಳಲ್ಲಿ ಪೈಪ್ ಹೊಡೆದು ನೀರು ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಪಂಚಾಯತ್ ರಾಜ್ ಎಂಜಿನಿಯರ್‌ಗಳಿಗೆ ಸೂಚಿಸಿ ದರು.ಜಾನುವಾರುಗಳಿಗೆ ಬಿಸಿಲಿನ ತಾಪ ತಟ್ಟದಂತೆ ನೋಡಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಯಾದಗಿರಿ ಕ್ಷೇತ್ರದ ಶಾಸಕ ವೆಂಕಟರೆಡ್ಡಿ ಮುದ್ನಾಳ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಮರೇಶರ ನಾಯ್ಕ್, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಜಿಲ್ಲೆಯ ತಹಶೀಲ್ದಾರರು, ಕೃಷಿ ಇಲಾಖೆ ಅಧಿಕಾರಿಗಳು, ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು, ಜಿಲ್ಲೆಯ ನಗರಸಭೆ ಹಾಗೂ ಪುರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.

***

ಕುಡಿಯುವ ನೀರಿಗೆ ಸಂಬಂಧಿಸಿದ ದೂರುಗಳನ್ನು ಬೇಗನೆ ಇತ್ಯರ್ಥ ಮಾಡಿಸ ಬೇಕು.ಸೂಚನೆಗಳನ್ನುಪಾಲನೆ ಮಾಡದಂಥ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು
–ಪ್ರಭು ಚವಾಣ್‌, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.