ADVERTISEMENT

ವಿದ್ಯಾರ್ಥಿಗಳ ವಿವಿಧ ಬೇಡಿಕೆ ಈಡೇರಿಕೆಗೆ ಎಐಡಿಎಸ್‍ಒ ಆಗ್ರಹ

ವಿದ್ಯಾರ್ಥಿ ಸಂಘಟನೆಯಿಂದ ಪ್ರತಿಭಟನೆ, ಡಿಸಿ ಮೂಲಕ ಶಿಕ್ಷಣ ಸಚಿವರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 16:57 IST
Last Updated 23 ಜೂನ್ 2021, 16:57 IST
ಯಾದಗಿರಿಯಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಎಐಡಿಎಸ್‍ಒ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು
ಯಾದಗಿರಿಯಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಎಐಡಿಎಸ್‍ಒ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು   

ಯಾದಗಿರಿ: ಆಫ್‌ಲೈನ್ ತರಗತಿಗಳು ಆರಂಭವಾಗುವ ಮುನ್ನ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಲಸಿಕೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್(ಎಐಡಿಎಸ್‍ಒ) ಯಾದಗಿರಿ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಪದಾಧಿಕಾರಿಗಳು, ಪದವಿ, ಎಂಜಿನಿಯರಿಂಗ್, ಡಿಪ್ಲೋಮಾ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಕಳೆದ ಸೆಮಿಸ್ಟರ್‌ನ ಪರೀಕ್ಷೆಯನ್ನು ನಡೆಸುತ್ತೇವೆ ಎಂಬ ಅವೈಜ್ಞಾನಿಕ ಮತ್ತು ಅತಾರ್ಕಿಕವಾದ ನಿರ್ಧಾರವನ್ನು ಹಿಂಪಡೆಯಿರಿ ಎಂದು ಆಗ್ರಹಿಸಿದರು.

ಸಂಬಂಧಪಟ್ಟವರ ಅಭಿಪ್ರಾಯವನ್ನು ಪಡೆಯದೆ ಏಕಪಕ್ಷೀಯವಾಗಿ ಹಾಗೂ ಅಪ್ರಜಾತಾಂತ್ರಿಕವಾಗಿ ನಿರ್ಧಾರ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಇಂಟರ್ನೆಟ್ ಸೌಲಭ್ಯ ಇಲ್ಲದೆ ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಪಾಠಗಳಿಂದ ವಂಚಿತರಾಗಿದ್ದಾರೆ. ರಾಜ್ಯದಲ್ಲಿ ವಿದ್ಯಾರ್ಥಿಗಳು ಓದುವುದಕ್ಕೆ ಪಟ್ಟಣಗಳಿಗೆ ಹಳ್ಳಿಗಳಿಂದ ಬರುತ್ತಾರೆ. ಹಳ್ಳಿಗಳಲ್ಲಿ ಇಂಟರ್ನೆಟ್ ಆಗಲಿ ಅಥವಾ ಆನ್‌ಲೈನ್ ತರಗತಿಗಳನ್ನು ಕೇಳಲು ವ್ಯವಸ್ಥೆ ಇಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಪರೀಕ್ಷೆ ನಡೆಸಬೇಕು ಎನ್ನುವ ನಿರ್ಧಾರ ಅತ್ಯಂತ ಅಪ್ರಜಾತಂತ್ರಿಕ ಮತ್ತು ಏಕಪಕ್ಷೀವಾಗಿದೆ ಎಂದು ಆರೋಪಿಸಿದರು.

ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಸರ್ಕಾರ ವಿದ್ಯಾರ್ಥಿ ಪರವಾದ ನಿಲುವು ಘೋಷಿಸಬೇಕು. ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾವುದೇ ಹಾನಿಯಾಗದ ರೀತಿ, ಶಿಕ್ಷಣ ತಜ್ಞರು, ಅಧ್ಯಾಪಕರು, ಪೋಷಕರೊಂದಿಗೆ ಚರ್ಚಿಸಿ ಪರೀಕ್ಷಾ ಕ್ರಮ, ಮೌಲ್ಯಮಾಪನ ಪ್ರಕ್ರಿಯೆ ಸಿದ್ಧಪಡಿಸಬೇಕು. ಅಲ್ಲಿಯವರೆಗೂ ಕಳೆದ ಸೆಮಿಸ್ಟರ್ ಪರೀಕ್ಷೆ ನಡೆಸಬಾರದು ಎಂದು ಜಿಲ್ಲಾಧಿಕಾರಿ ಮೂಲಕ ರಾಜ್ಯದ ಉನ್ನತ ಶಿಕ್ಷಣ ಸಚಿವರಿಗೆ ಎಐಡಿಎಸ್‍ಒ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎಐಡಿಎಸ್‍ಒ ಜಿಲ್ಲಾ ಕಾರ್ಯದರ್ಶಿ ಸುಭಾಷ್‍ಚಂದ್ರ ಬಿ.ಕೆ, ಜಿಲ್ಲಾ ಉಪಾಧ್ಯಕ್ಷೆ ಸಿಂಧು ಬಿ, ರಾಜೇಶ್ವರಿ, ಮೊನೇಶ, ತಿಮ್ಮಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.