ಕೆಂಭಾವಿ: ‘ಹಿಂದೂ ಸಂಸ್ಕೃತಿಯಲ್ಲಿ ಮಾತೃ ದೇವೋಭವ ಎಂಬಂತೆ ತಾಯಿಗೆ ಅತೀ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ತಂದೆ-ತಾಯಿಯನ್ನು ನಿತ್ಯ ಆರಾಧಿಸುವುದು ಮಕ್ಕಳ ಕರ್ತವ್ಯವಾಗಿದೆ’ ಎಂದು ಕೂಡಲಗಿ ಶಾಂತಾನಂದ ಸರಸ್ವತಿ ಸ್ವಾಮಿ ಬಾಬಾ ಮಹಾರಾಜ ಮಠದ ಉಮಾಕಾಂತ ಸಿದ್ಧರಾಜ ಮಹಾರಾಜರು ಹೇಳಿದರು.
ಪಟ್ಟಣದ ಸ್ಪಂದನ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಕ್ಕಳ ಅಕ್ಷರಭ್ಯಾಸ ಮತ್ತು ಪಾಲಕರ ಪಾದಪೂಜೆ ನಿಮಿತ್ತ ನಡೆದ ಸಂಸ್ಕಾರ 2025 ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಮಗುವಿನ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಬಹಳ ಮುಖ್ಯ. ಚಿಕ್ಕ ಮಕ್ಕಳಿಗೆ ಶಾಲೆಗಿಂತಲೂ ಮನೆಯಲ್ಲಿ ತಾಯಿಯಿಂದ ಕಲಿಸಿದ ಎರಡಕ್ಷರದ ಬುದ್ಧಿಮಟ್ಟದ ಬೆಳವಣಿಗೆಗೆ ಸಹಕಾರಿ ಆಗಲಿದೆ. ಮನೆಯಿಂದಲೇ ಸಂಸ್ಕಾರ ಆರಂಭವಾಗಬೇಕು. ನಾವು ಜನಿಸಿದಂದಿನಿಂದ ಮರಣ ಹೊಂದುವವರೆಗೂ ಒಟ್ಟು 16 ಸಂಸ್ಕಾರಗಳನ್ನು ನಮ್ಮ ಭಾರತೀಯ ಸಂಪ್ರದಾಯ ನಮಗೆ ತಿಳಿಸಿಕೊಟ್ಟಿದೆ. ಸಂಸ್ಕಾರಗಳನ್ನು ತಾಯಿಯಿಂದಲೇ ನಾವು ಕಲಿಯಬೇಕಾಗಿದೆ’ ಎಂದು ಹೇಳಿದರು.
ಮುದನೂರ ಕಂಠಿ ಮಠದ ಸಿದ್ಧಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಆಶಿರ್ವನ ನೀಡಿ, ‘ಪ್ರತಿವರ್ಷ ಶಾಲೆಯಲ್ಲಿ ವಿನೂತನ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಸಂಸ್ಕಾರ ನೀಡಲಾಗುತ್ತಿದೆ. ಇಂಥ ಕಾರ್ಯಕ್ರಮಗಳೊಂದಿಗೆ ವಿದ್ಯಾಭ್ಯಾಸವನ್ನೂ ಶಾಲೆ ನೀಡುತ್ತಿದೆ’ ಎಂದು ಹೇಳಿದರು.
ಹಿರೇಮಠದ ಚೆನ್ನಬಸವ ಶಿವಾಚಾರ್ಯರು ಮಾತನಾಡಿದರು. ನಂತರ ಮಕ್ಕಳಿಗೆ ಅಕ್ಷರಭ್ಯಾಸ ಮತ್ತು ಮಕ್ಕಳಿಂದ ತಂದೆ-ತಾಯಿಯಂದಿರಿಗೆ ಪಾದಪೂಜೆ ನಡೆಯಿತು.
ಸಂಸ್ಥೆ ಕಾರ್ಯದರ್ಶಿ ಡಿ.ಸಿ. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಪುರಸಭೆ ಅಧ್ಯಕ್ಷ ರಹೆಮಾನ ಪಟೇಲ ಯಲಗೋಡ ಕಾರ್ಯಕ್ರಮ ಉದ್ಘಾಟಿಸಿದರು. ಮೌಲಾನಾ ಅಬ್ದುಲ ಹಮೀದಸಾಬ, ಸಿಆರ್‌ಸಿ ಬಂದೇನವಾಜ ನಾಲತವಾಡ, ಡಾ.ರಕ್ಷಿತಾ ನ್ಯಾಮಗೊಂಡ, ನರಸಿಂಹ ವಡ್ಡೆ, ರಮೇಶ ಸೊನ್ನದ, ಸಂಗಣ್ಣ ತುಂಬಗಿ, ರಾಮನಗೌಡ ಪಾಟೀಲ, ಮುಖ್ಯಶಿಕ್ಷಕ ರೇವಣಸಿದ್ದಯ್ಯ ಮಠ ಹಾಜರಿದ್ದರು. ಜ್ಯೋತಿ ಮತ್ತು ಕಾವ್ಯ ನಿರೂಪಿಸಿದರು. ನೂರ ಸ್ವಾಗತಿಸಿದರು. ಬರೀರಾ ದಸ್ತಗೀರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.