ಶಹಾಪುರ: ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 2025–2026ನೇ ಸಾಲಿನ ಮುಂಗಾರು ಹಬ್ಬದಲ್ಲಿ ರೈತ ಮುಖಂಡ ಚೆನ್ನಪ್ಪ ಆನೇಗುಂದಿ ಅವರು ಕೃಷಿ ಪರಿಕರ ಮಾರಾಟಗಾರರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ಕಿಡಿಯು ಜಿಲ್ಲೆಯ ತುಂಬಾ ಪಸರಿಸಿದೆ. ಈ ಸಭೆಯಲ್ಲಿ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಅಧ್ಯಕ್ಷರೂ ಆದ ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷರು ಭಾಗವಹಿಸಿದ್ದರು.
ಬಸನಗೌಡ ಪಾಟೀಲ ಮರಕಲ್ ಅವರು ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಜತೆಯಲ್ಲಿ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ರೈತರ ಹಿತ ಕಾಪಾಡಬೇಕಾದ ಹಾಗೂ ರೈತರ ಸಮಸ್ಯೆ ಮತ್ತು ಸವಾಲುಗಳಿಗೆ ಜವಾಬು ನೀಡಬೇಕಾದ ಅಧ್ಯಕ್ಷರು ಸ್ವತಃ ಕೃಷಿ ಪರಿಕರಗಳ ಮಾರಾಟಗಾರರ ಪರವಾಗಿ ವಕಾಲತ್ತು ವಹಿಸಿ ರೈತ ಮುಖಂಡನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿರುವುದು ಕೃಷಿಕ ಸಮಾಜದ ಅಧ್ಯಕ್ಷ ಸ್ಥಾನದ ಕುರಿತ ಚರ್ಚೆ ಮುನ್ನೆಲೆಗೆ ಬಂದಿದೆ.
‘ಕೃಷಿಕ ಸಮಾಜಕ್ಕೆ ತನ್ನದೇ ಆದ ಇತಿಹಾಸವಿದೆ. ಪ್ರತಿ ಐದು ವರ್ಷಕ್ಕೆ ಚುನಾವಣೆ ನಡೆದು ಕೃಷಿ ಇಲಾಖೆಯ ಜತೆ ಸಮನ್ವಯ ಸಾಧಿಸುತ್ತಾ ರೈತ ಪರವಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ. ಅಲ್ಲದೆ ರೈತರ ಹಕ್ಕುಗಳಿಗೆ ಚ್ಯುತಿ ಉಂಟಾದರೆ ಕಾನೂನಾತ್ಮಕವಾಗಿ ಪರಿಹಾರ ಒದಗಿಸುವ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ. ಆದರೆ, ಯಾದಗಿರಿ ಜಿಲ್ಲೆಯಲ್ಲಿ ಉಲ್ಟಾಪಲ್ಟಾ ಆಗಿದೆ. ರೈತರ ಹಿತ ರಕ್ಷಿಸಬೇಕಾದ ಕೃಷಿಕ ಸಮಾಜದ ಅಧ್ಯಕ್ಷರು, ಕೃಷಿ ಪರಿಕರಗಳ ಮಾರಾಟಗಾರರ, ವ್ಯಾಪಾರಿಗಳ ರಕ್ಷಣೆಗೆ ಟೊಂಕಕಟ್ಟಿ ನಿಂತುಕೊಂಡಿದ್ದಾರೆ. ಅವರಿಗೆ ನೈತಿಕತೆ ಇದ್ದರೆ ಮೊದಲು ಕೃಷಿಕ ಸಮಾಜದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಧ್ಯಕ್ಷ ಸ್ಥಾನದ ದುರ್ಬಳಕೆ ಮಾಡಿಕೊಳ್ಳುತ್ತಿರುವ ಅವರ ರಾಜೀನಾಮೆಯನ್ನು ಕಾಂಗ್ರೆಸ್ ಸರ್ಕಾರ ಮೊದಲು ಪಡೆಯಬೇಕು’ ಎಂದು ಬಿಜೆಪಿಯ ರೈತ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ಅವರು ಕೃಷಿ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಒಬ್ಬ ವ್ಯಕ್ತಿಗೆ ಎರಡು ಸ್ಥಾನದ ಬಗ್ಗೆ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಸಂಪರ್ಕಿಸಿದರೆ, ಬಸನಗೌಡ ಪಾಟೀಲ ಮರಕಲ್ ಸಂಪರ್ಕಕ್ಕೆ ಸಿಗಲಿಲ್ಲ.
ನಕಲಿ ರಸಗೊಬ್ಬರ, ಬೀಜ, ಕ್ರೀಮಿನಾಶಕ ಔಷಧಗಳ ಕೃತಕ ಅಭಾವ ಸೃಷ್ಟಿಸಿ ವ್ಯಾಪಾರ ಮಾಡುತ್ತಿದ್ದು ಅಂತಹ ವ್ಯಾಪಾರಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ರೈತ ಮುಖಂಡ ಚೆನ್ನಪ್ಪ ಆನೇಗುಂದಿ ಸಭೆಯಲ್ಲಿ ಒತ್ತಾಯಿಸಿದಾಗ ವ್ಯಾಪಾರಸ್ಥರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ರೈತ ಮುಖಂಡ ಭೀಮಣ್ಣ ಟಪೆದಾರ ಶುಕ್ರವಾರ ಭೀಮರಾಯನಗುಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಹಾಪುರ ನಗರದ ವ್ಯಾಪಾರಸ್ಥರ ಸಂಘದ ಬಸನಗೌಡ ಮರಕಲ್ ಹಾಗೂ ಅಶೋಕರೆಡ್ಡಿ ಲಿಂಗದಳ್ಳಿ ಹೊತಪೇಟ ಇಬ್ಬರ ವಿರುದ್ಧ ದೂರು ದಾಖಲಾಗಿದೆ.
2025–26ನೇ ಸಾಲಿನ ಮುಂಗಾರು ಹಬ್ಬವು ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದಲ್ಲಿ ಜೂ.3ರಂದು ನಡೆದಿತ್ತು. ಅಂದಿನ ಸಭೆಯಲ್ಲಿ ರೈತ ಮುಖಂಡ ಚೆನ್ನಪ್ಪ ಆನೇಗುಂದಿ ಅವರು ನಕಲಿ ಬಿತ್ತನೆ ಬೀಜ ಮಾರಾಟ ಮಾಡುವ ಮಾಲೀಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳ ಮುಂದೆ ಒತ್ತಾಯಿಸಿದಾಗ ಕೃಷಿ ಪರಿಕರ ಮಾರಾಟಗಾರರಾದ ಬಸವನಗೌಡ ಮರಕಲ್ ಹಾಗೂ ಅಶೋಕರೆಡ್ಡಿ ಲಿಂಗದಳ್ಳಿ ಅವರು ನಮ್ಮ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಭೀಮಣ್ಣ ಟಪೆದಾರ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಮೊದಲು ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಬಸನಗೌಡ ಮರಕಲ್ ಅವರು ನಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಭೀಮರಾಯನಗುಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜೊತೆಗೆ ಮೂರು ದಿನ ಯಾದಗಿರಿ ಜಿಲ್ಲೆಯಲ್ಲಿ ರಸಗೊಬ್ಬರ ಅಂಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಅದರಂತೆ ಶುಕ್ರವಾರ ಸಂಯುಕ್ತ ರೈತ ಹೋರಾಟ ಸಮಿತಿ ಮುಖಂಡರು ವ್ಯಾಪಾರಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಹಾಗೂ ಬಸನಗೌಡ ಮರಕಲ್ ವಿರುದ್ಧ ದೂರು ದಾಖಲಿಸಲು ಒತ್ತಾಯಿಸಿದ್ದರು.
ಕೃಷಿಕ ಸಮಾಜವು ಕೃಷಿ ಇಲಾಖೆಗೆ ಸಲಹಾ ಸಮಿತಿಯಂತೆ ಕೆಲಸ ನಿರ್ವಹಿಸುತ್ತದೆ. ಕೃಷಿ ಪರಿಕರ ಮಾರಾಟಗಾರರ ಸಂಘವು ಖಾಸಗಿಯಾಗಿದೆ. ಹೆಚ್ಚಿನ ಮಾಹಿತಿ ನಮ್ಮ ಬಳಿ ಇಲ್ಲಸುನಿಲಕುಮಾರ ಯರಗೋಳಎ.ಡಿ, ಕೃಷಿ ಇಲಾಖೆ, ಶಹಾಪುರ
ರೈತರ ಹಿತ ಕಾಪಾಡಬೇಕಾಗಿದ್ದು ಕೃಷಿಕ ಸಮಾಜದ ಹೊಣೆ. ವ್ಯಾಪಾರ ಹಾಗೂ ತಮ್ಮ ಸಂರಕ್ಷಣೆಗಾಗಿ ರಚಿಸಿಕೊಂಡಿದ್ದು ಕೃಷಿ ಪರಿಕರಗಳ ಮಾರಾಟಗಾರರ ಸಂಘ. ಒಬ್ಬ ವ್ಯಕ್ತಿಗೆ ಎರಡು ಸ್ಥಾನ ನೀಡುವುದು ಅಪಾಯಕಾರಿ ಬೆಳವಣಿಗೆಮಲ್ಲಿಕಾರ್ಜುನ ಸತ್ಯಂಪೇಟೆ ರೈತ ಸಂಘದ ಹಿರಿಯ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.