ADVERTISEMENT

ಸ್ವಾಭಿಮಾನದ ಬದುಕು ನೀಡಿದ ಅಂಬೇಡ್ಕರ್

ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಸಾಹಿತಿ ವಗ್ಗನ್ ಅಭಿಮತ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2022, 4:43 IST
Last Updated 20 ಏಪ್ರಿಲ್ 2022, 4:43 IST
ಸುರಪುರದ ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ಸುರಪುರದ ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು   

ಸುರಪುರ: ‘ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅನನ್ಯ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಎಲ್ಲರಿಗೂ ಆದರ್ಶರಾಗಿದ್ದಾರೆ’ ಎಂದು ಸಾಹಿತಿ ವಿಠ್ಠಲ ವಗ್ಗನ್ ಹೇಳಿದರು.

ಇಲ್ಲಿಯ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಝಂಡದಕೇರಾ ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿ ಯಲ್ಲಿ ಅವರು ಮಾತನಾಡಿದರು.

‘ದೇಶದ ಯಾವುದೇ ಮೂಲೆಯಲ್ಲಿ ನೆಲೆ ನಿಂತು ಸ್ವತಂತ್ರವಾಗಿ ಸ್ವಾಭಿಮಾನದಿಂದ ಜೀವಿಸಲು ಹಕ್ಕು ಕೊಟ್ಟಿರುವ ಬಾಬಾ ಸಾಹೇಬ ಆದರ್ಶಪ್ರಾಯರು. ಅವರು ದಲಿತರಿಗೆ ಮಾತ್ರ ನಾಯಕನಲ್ಲ. ಎಲ್ಲಾ ಧರ್ಮ, ಸಮುದಾಯಗಳಿಗೂ ಸ್ಫೂರ್ತಿಯಾಗಿದ್ದಾರೆ’ ಎಂದರು.

ADVERTISEMENT

‘ಅರ್ಥ ಶಾಸ್ತ್ರಜ್ಞನಾಗಿ, ಸಮಾಜ ಸುಧಾರಕನಾಗಿ, ವಿಜ್ಞಾನಿಯಾಗಿ, ಕೃಷಿಕನಾಗಿ ಎಲ್ಲ ರಂಗಗಳಲ್ಲಿ ಮೊದಲಿಗರಾಗಿ ಕಾಣಿಸುತ್ತಾರೆ ಎಂದು ನೋಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಹೇಳಿ ತಮ್ಮ ಪ್ರಶಸ್ತಿಯನ್ನು ಬಾಬಾ ಸಾಹೇಬರಿಗೆ ಅರ್ಪಿಸಿರುವುದು ಸ್ಮರಣೀಯವಾಗಿದೆ’ ಎಂದರು.

‘ಅಂಬೇಡ್ಕರ್ ಹೋರಾಟ ಮಾಡಲಿಲ್ಲ. ಲೆಕ್ಕಣಿಕೆಯಿಂದ ಎಲ್ಲವನ್ನು ಪಡೆದರು. ಸಂಸತ್ತನ್ನು ಪ್ರತಿನಿಧಿಸಿದರು. ಜಗತ್ತನ್ನೇ ಗೆದ್ದರು. ಶೋಷಿತ ಸಮುದಾಯಗಳು ಬದಲಾಗಬೇಕು. ಪರಿವರ್ತನೆ ಆಗದ ಹೊರತು ಏನನ್ನು ಸಾಧಿಸಲಾಗದು’ ಎಂದು ತಿಳಿಸಿದರು.

‘ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ. ದೊಡ್ಡ ದೊಡ್ಡ ಅಧಿಕಾರಿಗಳನ್ನಾಗಿ ಮಾಡಿ. ಇದರಿಂದ ಆರ್ಥಿಕ ಸ್ಥಿತಿಗತಿ ಬದಲಾಗುತ್ತದೆ. ಜಾತೀಯತೆ, ಅಸ್ಪೃಶ್ಯತೆ ತನ್ನಿಂದ ತಾನೇ ದೂರವಾಗುತ್ತದೆ’ ಎಂದು ಹೇಳಿದರು.

‘ಮೂಢನಂಬಿಕೆ, ಅನಿಷ್ಟ ಸಂಪ್ರದಾಯಗಳಿಂದ ಹೊರಬೇಕು. ವೈಚಾರಿಕವಾಗಿ ಬದುಕುವುದನ್ನು ಕಲಿಯಬೇಕು. ಕೆಟ್ಟ ಚಟಗಳನ್ನು ಕೈ ಬಿಡಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಸಮಾಜದಲ್ಲಿ ತಲೆ ಎತ್ತಿ ನಿಲ್ಲುವಂತೆ ಮಾಡಿ’ ಎಂದು ಸಲಹೆ ನೀಡಿದರು.

ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ. ನಾಯಕ ಮಾತನಾಡಿದರು. ಮದ್ರಕಿ ಬಂತೇಜಿ ಸಾನ್ನಿಧ್ಯ ವಹಿಸಿದ್ದರು. ವಿಠ್ಠಲ ವಗ್ಗನ ಬರೆದ ‘ಮರೆಯದ ಮಾಣಿಕ್ಯ’ ಕೃತಿ ಬಿಡುಗಡೆಗೊಳಿಸಲಾಯಿತು.

ಸೂಗೂರೇಶ ವಾರದ, ಶಿವುಕುಮಾರ ಕಟ್ಟಿಮನಿ, ಉಸ್ತಾದ ವಜಾಹತ್ ಹುಸೇನ್, ವೆಂಕಟೇಶ ಹೊಸಮನಿ, ಸುವರ್ಣ ಎಲಿಗಾರ, ಮಲ್ಕಯ್ಯ ತೇಲ್ಕರ್ ಇತರರು ಇದ್ದರು. ರಾಜು ಕಟ್ಟಿಮನಿ ಸ್ವಾಗತಿಸಿದರು. ವೈಜನಾಥ ಹೊಸಮನಿ ನಿರೂಪಿಸಿದರು. ರೋಹಿತ ಕಾಂಬ್ಳೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.