ಯಾದಗಿರಿ: ಮಾಸಿಕ ಕನಿಷ್ಠ ₹ 10 ಸಾವಿರ ಗೌರವಧನ, ₹ 5 ಲಕ್ಷ ನಿವೃತ್ತಿ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಜಿಲ್ಲಾ ಘಟಕ ನಡೆಸಿದ ಮೂರು ದಿನಗಳ ಅಹೋರಾತ್ರಿ ಧರಣಿ ಗುರುವಾರ ಮುಕ್ತಾಯವಾಯಿತು.
ಸಂಘದ ಮುಖಂಡರು ಬೇಡಿಕೆಗಳ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ, ಡಿಎಚ್‌ಒ ಡಾ.ಮಹೇಶ ಬಿರಾದಾರ ಅವರಿಗೆ ಸಲ್ಲಿಕೆ ಮಾಡಿದರು.
ಜನಸಂಖ್ಯೆ ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ವಜಾ ಮಾಡಬಾರದು. ಸೇವೆಯಿಂದ ಬಿಡುಗಡೆ ಮಾಡಿರುವ ಆಶಾ ಸುಗಮಗಾರರನ್ನು ಸೂಕ್ತ ಸಂಭಾವನೆಯೊಂದಿಗೆ ಮುಂದುವರಿಸಬೇಕು. ಆಶಾ ಕಾರ್ಯಕರ್ತೆಯರಿಗೂ ಸಹ ₹ 1 ಸಾವಿರ ಗೌರವ ಧನ ನೀಡಬೇಕು ಎಂದು ಮನವಿ ಮಾಡಿದರು.
ಆಶಾ ಕಾರ್ಯಕರ್ತೆಯರು ಗ್ರಾಮೀಣ ಮತ್ತು ನಗರದ ಕೊಳಗೇರಿ, ದುರ್ಬಲ ವರ್ಗದ ಜನರ ಮನೆ–ಮನೆಗೆ ಆರೋಗ್ಯ ಇಲಾಖೆಯ ಸೇವೆಯನ್ನು ತಲುಪಿಸುವಲ್ಲಿ ನಿರತವಾಗಿದ್ದಾರೆ. ಗರ್ಭಿಣಿಯನ್ನು ಗುರುತಿಸಿ, ಅವರನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆತಂದು, ಸುಲಭ ಹೆರಿಗೆಗೆ ಪ್ರೋತ್ಸಾಹಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಮತ್ತು ಜನರ ನಡುವೆ ಕೊಂಡಿಯಂತೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸರಿಯಾದ ವೇತನ, ಸೌಕರ್ಯಗಳನ್ನು ರಾಜ್ಯ ಸರ್ಕಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಎಐಕೆಕೆಎಂಎಸ್ ಜಿಲ್ಲಾಧ್ಯಕ ಶರಣಗೌಡ ಗೂಗಲ್, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ ಬಿ.ಎನ್., ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ಜಿಲ್ಲಾಧ್ಯಕ ಶರಣಪ್ಪ ಜಿ.ತೆಳಿಗೇರಿಕರ್, ಸಂಘದ ಜಿಲ್ಲಾಧ್ಯಕ್ಷೆ ಡಿ. ಉಮಾದೇವಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.