ಸುರಪುರ: ನಗರದ ಪುರಾತನ ರುಕ್ಮಾಯಿ ಪಾಂಡುರಂಗ ದೇವಸ್ಥಾನದಲ್ಲಿ ಆಷಾಢ ಉತ್ಸವದ ಅಂಗವಾಗಿ ಮಂಗಳವಾರ ಗೋಪಾಳ ಕಾವಲಿ (ಮೊಸರು ಗಡಿಗೆ ಒಡೆಯುವುದು) ಸಡಗರ, ಸಂಭ್ರಮದಿಂದ ಜರುಗಿತು.
ಬೆಳಿಗ್ಗೆ ದೇವರಿಗೆ ವಿಶೇಷ ಅಲಂಕಾರ, ಮಂಗಳಾರತಿ ನಡೆಯಿತು. ನಂತರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಅಲಂಕರಿಸಿ ಪಲ್ಲಕ್ಕಿಯಲ್ಲಿ ಕುಳ್ಳಿರಿಸಲಾಯಿತು. ಹರೇ ವಿಠಲ ಭಜನಾ ಮಂಡಳಿಯ ನೇತೃತ್ವದಲ್ಲಿ ಪಲ್ಲಕ್ಕಿ ಉತ್ಸವ ಪಾಂಡುರಂಗ ದೇವಸ್ಥಾನದಿಂದ ಹೊರಟು, ಉದ್ದಾರ ಓಣಿ, ನರಸಿಂಹ ದೇವಸ್ಥಾನ, ವೆಂಕಟೇಶ್ವರ ದೇವಸ್ಥಾನದ ಮಾರ್ಗದಲ್ಲಿ ಸಂಚರಿಸಿತು.
ಭಜನಾ ಮಂಡಳಿಯ ಸದಸ್ಯರು ಸುಶ್ರಾವ್ಯ ಭಜನೆಯೊಂದಿಗೆ ಗಮನ ಸೆಳೆದರು. ದಾರಿಯುದ್ದಕ್ಕೂ ಜನರು ಕಾಯಿ, ಕರ್ಪೂರ ನೀಡಿ, ದೀಪ ಬೆಳಗಿ ಭಕ್ತಿ ಸಮರ್ಪಿಸಿದರು.
ಪಲ್ಲಕ್ಕಿ ಉತ್ಸವದ ನಂತರ ಚಿತ್ತಾರ ಬಿಡಿಸಿದ ಗಡಿಗೆಗೆ ಪೂಜೆ ಸಲ್ಲಿಸಿ ನವರಂಗದಲ್ಲಿ ಇಡಲಾಯಿತು. ಭಕ್ತರು ತಮ್ಮ ಮನೆಗಳಿಂದ ಮೊಸರು ತಂದು ಗಡಿಗೆಯಲ್ಲಿ ಹಾಕಿದರು.
ಗಡಿಗೆಯನ್ನು ದೇವಸ್ಥಾನದ ಆವರಣದಲ್ಲಿ ಮೇಲುಗಡೆ ಎರಡು ಕಡೆಯಿಂದ ಹಗ್ಗ ಕಟ್ಟಿ ಕಟ್ಟಲಾಗಿತ್ತು. ಯುವಕರು ಮತ್ತು ಮಕ್ಕಳು ಹರೇ ವಿಠಲ ಎನ್ನುತ್ತಾ ರಂಗಿನಾಟ ಆಡಿದರು. ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.
ನಂತರ ಯುವಕರು ಮಕ್ಕಳು ಒಬ್ಬರ ಮೇಲೆ ಒಬ್ಬರು ಹತ್ತಿ ಮೊಸರು ಗಡಿಗೆಯನ್ನು ಒಡೆಯಲು ಯತ್ನಿಸಿದರು. ಮೇಲೆ ಹಗ್ಗ ಹಿಡಿದು ಕುಳಿತಿದ್ದ ಜನರು ಗಡಿಗೆಯನ್ನು ಸಿಗದಂತೆ ಇನ್ನಷ್ಟು ಮೇಲಕ್ಕೆ ಎತ್ತುತ್ತಿದ್ದರು.
ಕೊನೆಗೂ ಒಬ್ಬರ ಸಹಾಯದಿಂದ ಇನ್ನೊಬ್ಬರು ಮೇಲಕ್ಕೆ ಹತ್ತಿ ಗಡಿಗೆ ಒಡೆದರು. ಸೇರಿದ್ದ ಭಕ್ತರು ಹೋ.. ಎಂದು ಕರತಾಡನ ಮಾಡಿದರು. ಗಡಿಗೆ ಚೂರುಗಳನ್ನು ಆಯ್ದು ಮನೆಗೆ ಒಯ್ದರು. (ಗೋಪಾಲ ಕಾವಲಿಯ ಗಡಿಗೆ ಚೂರು ಮನೆಯಲ್ಲಿ ಇದ್ದರೆ ಸಮೃದ್ಧಿ ಇರುತ್ತದೆ ಎಂಬ ನಂಬಿಕೆ ಇದೆ).
ನಂತರ ಯುವಕರು ಮತ್ತು ಮಕ್ಕಳು ಪುಷ್ಕರಣಿಯಲ್ಲಿ ಅವಭೃತ ಸ್ನಾನ ಮಾಡಿದರು. ದೇಗುಲಕ್ಕೆ ಪ್ರದಕ್ಷಿಣೆ ಹಾಕಿದರು. ಅರ್ಚಕ ಗುರುರಾಜಾಚಾರ್ಯ ಪಾಲ್ಮೂರು ವಿಶೇಷ ಪೂಜೆ, ಮಂಗಳಾರುತಿ ಸಲ್ಲಿಸಿದರು. ಉಪಹಾರ, ಪ್ರಸಾದ ವಿತರಣೆ ನಡೆಯಿತು. ಈ ಮೂಲಕ ಕಳೆದ 4 ದಿನಗಳಿಂದ ನಡೆಯುತ್ತಿದ್ದ ಆಷಾಢ ಉತ್ಸವಕ್ಕೆ ಭವ್ಯ ತೆರೆ ಬಿತ್ತು.
ಶ್ರೀಪಾದ ಗಡ್ಡದ, ರವಿ ಗುತ್ತೇದಾರ, ರಾಘವೇಂದ್ರ ಕುಲಕರ್ಣಿ ಗೆದ್ದಲಮರಿ, ರಾಘವೇಂದ್ರ ಭಕ್ರಿ, ರಮೇಶ ಕುಲಕರ್ಣಿ, ಈರಯ್ಯ ಕೋಸ್ಗಿ, ವಿಶ್ವಾಸ ಕೋಸ್ಗಿ, ನವೀನ ಸಿಂಧಗೇರಿ, ಅಮೋಘ ಕೋಸ್ಗಿ, ಕೇಶವ ಗುಡಿ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.