ADVERTISEMENT

ಯಾದಗಿರಿ: ಬಾಲ್ಯ ವಿವಾಹ ಮುಕ್ತ ಜಿಲ್ಲೆಗೆ ಜಾಗೃತಿ

ಡಿಸೆಂಬರ್‌ ವರೆಗೆ ವಿವಿಧ ಕಾರ್ಯಕ್ರಮ ಆಯೋಜನೆ: ಡಾ.ಜಯಶ್ರೀ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 1:41 IST
Last Updated 20 ಜನವರಿ 2021, 1:41 IST
ಡಾ. ಜಯಶ್ರೀ
ಡಾ. ಜಯಶ್ರೀ   

ಯಾದಗಿರಿ: ಬಾಲ್ಯ ವಿವಾಹ ಮುಕ್ತ ಜಿಲ್ಲೆಯಾಗಿ ಮಾಡಲು ಜನವರಿ 21ರಿಂದ ಡಿಸೆಂಬರ್‌ ವರೆಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಸದಸ್ಯೆ ಡಾ. ಜಯಶ್ರೀ ಅಭಿಪ್ರಾಯಪಟ್ಟರು.

ಯಾದಗಿರಿ ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತವಾಗಿಸಲು ಈಗಾಗಲೇ ತಂಡ ರಚಿಸಲಾಗಿದೆ. ಹೆಚ್ಚಾಗುತ್ತಿರುವ ಬಾಲ್ಯ ವಿವಾಹವನ್ನು ತಡೆಯಲು ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ ಎಂದು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಾಲೆಯಿಂದ ಮಾತ್ರ ಮಕ್ಕಳಿಗೆ ಸುರಕ್ಷತೆ ಮತ್ತು ಶಿಕ್ಷಣವಂತರಾಗಲು ಸಾಧ್ಯ. ಆದ್ದರಿಂದ ಮಕ್ಕಳನ್ನು ಶಾಲೆಗೆ ಕರೆ ತರಲು ಸರ್ಕಾರ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದು, ಇವುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ನಾಗರಿಕರಾಗುವಂತೆ ಕರೆ ನೀಡಿದರು.

ADVERTISEMENT

ಪಾಲಕರು ಬಾಲ್ಯ ವಿವಾಹಗಳಿಗೆ ಪ್ರೋತ್ಸಾಹ ಕೊಡದೆ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಸರ್ಕಾರ ಮದುವೆಗೆ ನಿಗದಿಪಡಿಸಿರುವ ವಯಸ್ಸು ಪೂರ್ಣವಾದ ನಂತರ ಮದುವೆ ಮಾಡಬೇಕು. ಒಂದು ವೇಳೆ ಬಾಲ್ಯ ವಿವಾಹಗಳು ನಡೆದರೆ ಆ ವ್ಯಾಪ್ತಿಯ ತಹಶೀಲ್ದಾರ್‌ ಮತ್ತು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುವರು ಎಂದು ತಿಳಿಸಿದರು.

ಮಕ್ಕಳಲ್ಲಿ ಅಪೌಷ್ಟಿಕತೆ ತಡೆಯಲು ಬಾಣಂತಿಯರಿಗೆ ಪೌಷ್ಟಿಕ ಆಹಾರಗಳನ್ನು ನೀಡುತ್ತಿದ್ದು, ಅಂಗನವಾಡಿಗಳಲ್ಲಿ ಮೊಟ್ಟೆ ಹಾಗೂ ಇನ್ನಿತರ ಆಹಾರ ನೀಡಲಾಗುತ್ತಿದೆ ಎಂದರು.

ಮಕ್ಕಳ ಹಕ್ಕುಗಳು ಒಂದು ವೇಳೆ ಉಲ್ಲಂಘನೆಯಾದರೆ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ದೂರು ನೀಡುವಂತೆ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಧಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಕವಿತಾಳ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ವರ್ಷ 44 ಬಾಲ್ಯ ವಿವಾಹಗಳನ್ನು ತಡೆಗಟ್ಟಲಾಗಿದೆ. 2012ರಿಂದ ಇಲ್ಲಿಯವರೆಗೆ 143 ಪ್ರಕರಣಗಳು ಬಾಲ ನ್ಯಾಯಮಂಡಳಿಯಲ್ಲಿ ಪ್ರಕರಣ ದಾಖಲಾಗಿದ್ದು, ಇದರಲ್ಲಿ 111 ಇತ್ಯರ್ಥಪಡಿಸಲಾಗಿದೆ. 32 ಪ್ರಕರಣಗಳು ಬಾಕಿ ಇವೆ ಎಂದರು.

ಸಿಡಿಪಿಒ ರಾಧಾ ಮಣ್ಣೂರು ಸೇರಿದಂತೆಸಂಬಂಧಿಸಿದಅಧಿಕಾರಿಗಳು ಇದ್ದರು.

***

ಲಾಕ್‌ಡೌನ್‌ ವೇಳೆ ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಭಿಕ್ಷಾಟನೆ ಹೆಚ್ಚಾಗಿದೆ. ಇವುಗಳನ್ನು ತಡೆಗಟ್ಟಲು ಶಿಕ್ಷಣ ಅತಿ ಮುಖ್ಯವಾಗಿದ್ದು, ಶಾಲೆಗಳಲ್ಲಿ ಶೇ 100ರಷ್ಟು ಮಕ್ಕಳ ಹಾಜರಾತಿಗೆ ಪ್ರಯತ್ನ ಮಾಡುತ್ತಿದ್ದೇವೆ

-ಡಾ.ಜಯಶ್ರೀ, ಮಕ್ಕಳ ಹಕ್ಕು ರಕ್ಷಣಾ ಆಯೋಗದ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.