ADVERTISEMENT

ಅಪರಾಧ ಮುಕ್ತ ಬಾಗಲಕೋಟೆ ನಮ್ಮ ಗುರಿ: ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 16:38 IST
Last Updated 16 ಜುಲೈ 2019, 16:38 IST
ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆ ಆವರಣದಲ್ಲಿ ರೌಡಿ ಪರೇಡ್‌ದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೊಕೇಶ ಜಗಲಾಸರ ರೌಡಿಗಳಿಗೆ ಎಚ್ಚರಿಕೆ, ಸಲಹೆ ನೀಡಿದರು
ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆ ಆವರಣದಲ್ಲಿ ರೌಡಿ ಪರೇಡ್‌ದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೊಕೇಶ ಜಗಲಾಸರ ರೌಡಿಗಳಿಗೆ ಎಚ್ಚರಿಕೆ, ಸಲಹೆ ನೀಡಿದರು   

ಜಮಖಂಡಿ: ‘ತಾಲ್ಲೂಕಿನಲ್ಲಿ 350ಕ್ಕೂ ಹೆಚ್ಚು ರೌಡಿಶೀಟರ್‌ಗಳಿದ್ದು, ಅವರಲ್ಲಿ ಕೆಲವರು ಮತ್ತೆ ಸಕ್ರಿಯರಾಗಿದ್ದಾರೆ. ಅಂಥವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಒಟ್ಟಿನಲ್ಲಿ ಅಪರಾಧಮುಕ್ತ ಬಾಗಲಕೋಟೆ ಮಾಡುವುದು ನಮ್ಮ ಗುರಿ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಹೇಳಿದರು.

ನಗರದ ಗ್ರಾಮೀಣ ಠಾಣೆ ಆವರಣದಲ್ಲಿ ರೌಡಿಗಳ ಪರೇಡ್‌ ನಡೆಸಿ, ಎಚ್ಚರಿಕೆ ರೂಪದ ಸಲಹೆ ನೀಡಿದರು. ‘ಗಲಭೆ ಪ್ರಕರಣಗಳಲ್ಲಿ ಹಳೆ ಅಪರಾಧಿಗಳ ಮೇಲೆ ನಿಗಾ ವಹಿಸುವ ಮೂಲಕ ಸುಧಾರಣೆ ಆಗದಿದ್ದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ. ಸಾವಳಗಿ ಹೊಬಳಿಯಲ್ಲಿ 80ಕ್ಕೂ ಹೆಚ್ಚು ರೌಡಿಗಳು ಇದ್ದು, ಉಳಿದ 270 ಜಮಖಂಡಿ ಹೋಬಳಿಯಲ್ಲಿದ್ದಾರೆ’ ಎಂದರು.

‘ಅಪರಾಧಮುಕ್ತ ಜಿಲ್ಲೆಗಾಗಿ ಎಲ್ಲ ಪೊಲೀಸ್ ಠಾಣೆಗಳ ಪಿಎಸ್‌ಐ ಗಳಿಗೆ ಸೂಚನೆ ನೀಡಲಾಗಿದೆ. ಈ ಕಾರ್ಯದಲ್ಲಿ ಸಾರ್ವಜನಿಕರ ಸಹಕಾರ ಕೂಡ ಅಗತ್ಯ’ ಎಂದರು.

ADVERTISEMENT

‘ಜಿಲ್ಲೆಯಲ್ಲಿ ಸಂಚಾರ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಶೀಘ್ರದಲ್ಲಿ ಜಮಖಂಡಿಯಲ್ಲಿ ಸಂಚಾರ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ ತುರ್ತು ಅಗತ್ಯ ಕ್ರಮ ಕೈಗೊಳ್ಳಲು ಡಿವೈಎಸ್‌ಪಿ ಅವರಿಗೆ ಸೂಚಿಸಲಾಗುವುದು’ ಎಂದರು.

ಡಿವೈಎಸ್‌ಪಿ ಆರ್.ಕೆ.ಪಾಟೀಲ, ಸಿಪಿಐ ಮಹಾಂತೇಶ ಹೊಸಪೇಟಿ, ಗ್ರಾಮೀಣ ಪಿಎಸ್‌ಐ ಬಾಲದಂಡಿ, ನಗರ ಪಿಎಸ್‌ಐ ದಿನೇಶ ಜವಳಕರ, ಸಾವಳಗಿ ಪಿಎಸ್.ಐ ಬೆಂಡೆಗೊಂಬಲ, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.