ADVERTISEMENT

ನಗರದಲ್ಲಿ ಶ್ರದ್ಧಾ ಭಕ್ತಿಯ ಬಕ್ರೀದ್‌

ತ್ಯಾಗ, ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬ ಆಚರಣೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 15:34 IST
Last Updated 12 ಆಗಸ್ಟ್ 2019, 15:34 IST
ಯಾದಗಿರಿ ನಗರದ ಮಿನಿ ವಿಧಾನಸೌಧದ ಹಿಂದುಗಡೆ ಇರುವ ಈದ್ಗಾ ಮೈದಾನದಲ್ಲಿ ಬಕ್ರೀದ್‌ ಹಬ್ಬದ ಪ್ರಯುಕ್ತ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು
ಯಾದಗಿರಿ ನಗರದ ಮಿನಿ ವಿಧಾನಸೌಧದ ಹಿಂದುಗಡೆ ಇರುವ ಈದ್ಗಾ ಮೈದಾನದಲ್ಲಿ ಬಕ್ರೀದ್‌ ಹಬ್ಬದ ಪ್ರಯುಕ್ತ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು   

ಯಾದಗಿರಿ: ತ್ಯಾಗ, ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಜಿಲ್ಲೆಯ ಮುಸ್ಲಿಂರು ಶ್ರದ್ಧಾ ಭಕ್ತಿಯಿಂದ ಸೋಮವಾರ ಆಚರಿಸಿದರು.

ನಗರದ ಮಿನಿ ವಿಧಾನಸೌಧ ಹಿಂದುಗಡೆಯ ಈದ್ಗಾ ಮೈದಾನ ಮತ್ತು ಶಹಾಪುರ ರಸ್ತೆಯ ಈದ್ಗಾ ಮೈದಾನದಲ್ಲಿ ನೂರಾರು ಸಂಖ್ಯೆಯ ಮುಸ್ಲಿಮರು ಸೇರಿ ದೇಶದ ಶಾಂತಿ, ಸೌಹಾರ್ದತೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಖಾಜಿ ಹಸನ್ ಸಿದ್ದಕಿ ಅವರು ಈದ್ ನಮಾಜ್ ಬೋಧಿಸಿದರು. ಬಳಿಕ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಮಕ್ಕಳು ಹಾಗೂ ಹಿರಿಯರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

‌ಸಮಾಜದ ಹಿರಿಯ ಮುಖಂಡ ಖಾಜಿ ಇಂತಿಹಾಸ ಸಿದ್ದಿಕಿ ಮಾತನಾಡಿ, ‘ಪ್ರವಾದಿ ಇಬ್ರಾಹಿಮರು ತನ್ನ ಒಬ್ಬನೇ ಮಗನಾದ ಇಸ್ಮಾಯಿಲ್‍ರನ್ನು ಸೃಷ್ಟಿಕರ್ತ ಅಲ್ಲಾಹನಿಗೆ ಬಲಿ ಕೊಡಲು ಮುಂದಾದ ದಿನವನ್ನು ಬಕ್ರೀದ್ ಹಬ್ಬ ಎಂದು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಲಾಗುತ್ತದೆ’ ಎಂದರು.

ADVERTISEMENT

‘ರಂಜಾನ್ ಮತ್ತು ಬಕ್ರೀದ್ ವಿಶ್ವದಾದ್ಯಂತ ಮುಸ್ಲಿಮರು ಆಚರಿಸುವ ಎರಡು ಅತಿದೊಡ್ಡ ಹಬ್ಬಗಳು. ರಂಜಾನ್ ಸಂದರ್ಭದಲ್ಲಿ ಮುಸ್ಲಿಮರು ಒಂದು ಮಾಸ ಉಪವಾಸ ಆಚರಿಸಿ ಕೊನೆ ದಿನ ಈದ್-ಉಲ್-ಫಿತರ್ ಹಬ್ಬದ ಮೂಲಕ ಭಾವೈಕ್ಯ ಮರೆಯುತ್ತಾರೆ. ಅಲ್ಲಾಹುನನ್ನು ನೆನೆಯುವುದರ ಜೊತೆಗೆ ವಸ್ತುಗಳನ್ನು ದಾನ ಮಾಡುವ ಸಂಪ್ರದಾಯ ಬಕ್ರೀದ್ ಹಬ್ಬದಂದು ನಡೆದುಕೊಂಡು ಬಂದಿದೆ’ ಎಂದು ಹೇಳಿದರು.

ಬಡವರಿಗೆ ಬಂಧು–ಬಳಗದವರಿಗೆ ಬಟ್ಟೆ, ವಸ್ತುಗಳನ್ನು ದಾನವಾಗಿ ನೀಡುವುದು ಬಕ್ರೀದ್‌ ಹಬ್ಬದ ವಿಶೇಷವಾಗಿದೆ.

ಈದ್ಗಾ ಕಮಿಟಿ ಅಧ್ಯಕ್ಷ ಮನಸೂರ್ ಅಫಖಾನ, ಅಯುಬ್ ಆಫಖಾನ್‌, ಮಹ್ಮದ್ ಆಬೀದ್, ಸಾಜೀದ್ ಹಯಾತೆ, ತೇಜಾದ್ ಆಫಖಾನ ಸೇರಿದಂತೆ ಮುಸ್ಲಿಂ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.