ADVERTISEMENT

‘ಕನ್ನಡದ ಕೀರ್ತಿ ಹೆಚ್ಚಿಸಿದ ಬಾನು ಮುಸ್ತಾಕ್’

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 15:33 IST
Last Updated 11 ಜೂನ್ 2025, 15:33 IST
ಸುರಪುರ ತಾಲ್ಲೂಕಿನ ಕೃಷ್ಣಾಪುರದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ದರಾಮ ಹೊನ್ಕಲ್ ಮಾತನಾಡಿದರು
ಸುರಪುರ ತಾಲ್ಲೂಕಿನ ಕೃಷ್ಣಾಪುರದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ದರಾಮ ಹೊನ್ಕಲ್ ಮಾತನಾಡಿದರು   

ಸುರಪುರ: ‘ಕತೆಗಾರ್ತಿ ಬಾನು ಮುಸ್ತಾಕ್ ಬೂಕರ್ ಪ್ರಶಸ್ತಿ ಪಡೆಯುವ ಮೂಲಕ ಜಾಗತಿಕ ಮಟ್ಟದಲ್ಲಿ ಕನ್ನಡದ ಕೀರ್ತಿ ಹೆಚ್ಚಿಸಿದ್ದಾರೆ’ ಎಂದು ಶಾಸನ ಸಂಶೋಧಕ ಎಂ.ಎಸ್. ಶಿರವಾಳ ಹೇಳಿದರು.

ತಾಲ್ಲೂಕಿನ ಕೃಷ್ಣಾಪುರದ ಕರ್ನಾಟಕ ಅನುದಾನಿತ ಪ್ರೌಢಶಾಲೆಯಲ್ಲಿ ರಂಗಂಪೇಟೆಯ ಅಂಬೇಡ್ಕರ್ ಪದವಿ ಕಾಲೇಜು ಏರ್ಪಡಿಸಿದ್ದ ಎನ್‍ಎಸ್‍ಎಸ್ ಶಿಬಿರದಲ್ಲಿ ಬುಧವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ ಏರ್ಪಡಿಸಿದ್ದ ‘ಚಕೋರ’ ಸಾಹಿತ್ಯ ವಿಚಾರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಯುವ ಜನತೆ ಕಾವ್ಯ ಕಟ್ಟುವ ಪಕ್ವತೆಯನ್ನು ಬೆಳೆಸಿಕೊಳ್ಳಬೇಕು. ಹೆಚ್ಚುಹೆಚ್ಚು ಸಾಹಿತ್ಯ ಓದಬೇಕು. ಉತ್ತಮ ಸಾಹಿತ್ಯ ಬರೆಯುವುದರ ಮೂಲಕ ಬೆಳೆಯಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಪ್ರಾಸ್ತಾವಿಕವಾಗಿ ಮಾತನಾಡಿದ ಅಕಾಡೆಮಿ ಸದಸ್ಯ ಸಿದ್ದರಾಮ ಹೊನ್ಕಲ್, ‘ಚಕೋರ ಕಾರ್ಯಕ್ರಮದ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಾಹಿತ್ಯದ ಆಸಕ್ತಿ ಮೂಡಿಸಲಾಗುತ್ತಿದೆ’ ಎಂದರು.

ಉಪನ್ಯಾಸಕ ಶರಣಗೌಡ ಪಾಟೀಲ ಮಾತನಾಡಿ, ‘ಬಾನು ಮುಸ್ತಾಕ್ ಅವರ ‘ಹಣತೆ’ ಮತ್ತು ‘ಹಸಿನಾ’ ಕತೆಗಳ ಸಂಕಲನ ವಿಶ್ವದಲ್ಲಿ ಸಂಚಲನ ಮೂಡಿಸಿವೆ. ಯುವ ಸಾಹಿತಿಗಳು ಅವರನ್ನು ಆದರ್ಶವನ್ನಾಗಿ ಇಟ್ಟುಕೊಂಡು ಸಾಹಿತ್ಯದಲ್ಲಿ ಕೃಷಿ ಮಾಡಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ನಾಗಣ್ಣ ಪುಜಾರಿ ಮಾತನಾಡಿದರು.

ಉಮಾದೇವಿ ಮಟ್ಟಿ ಸ್ವಾಗತಿಸಿದರು. ಸಿ.ದೊಡ್ಡಮನಿ ನಿರೂಪಿಸಿದರು. ಚಂದ್ರಶೇಖರ ಡೋಲೆ ವಂದಿಸಿದರು.

ಈಶ್ವರಪ್ಪ ತಳವಾರ, ಶಂಕ್ರಪ್ಪ ಮತ್ತು ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.