ADVERTISEMENT

ಹೆದ್ದಾರಿ ಬದಿ ಇಣುಕಿದ ಕೇಂದ್ರ ತಂಡ!

ಬರ ಅಧ್ಯಯನದಲ್ಲಿ ವಸ್ತುಸ್ಥಿತಿ ಪರಿಶೀಲಿಸದ ಅಧಿಕಾರಿಗಳು

ಮಲ್ಲೇಶ್ ನಾಯಕನಹಟ್ಟಿ
Published 17 ನವೆಂಬರ್ 2018, 19:45 IST
Last Updated 17 ನವೆಂಬರ್ 2018, 19:45 IST
ರಾಯಚೂರು ಸಂಪರ್ಕ ಹೆದ್ದಾರಿ ಬಳಿ ಶನಿವಾರ ಯಾದಗಿರಿ ಜಿಲ್ಲೆ ಬರ ಅಧ್ಯಯನ ನಡೆಸಿದ ಅಮಿತಾಭ್ ಗೌತಮ್ ನೇತೃತ್ವದ ಕೇಂದ್ರ ತಂಡ
ರಾಯಚೂರು ಸಂಪರ್ಕ ಹೆದ್ದಾರಿ ಬಳಿ ಶನಿವಾರ ಯಾದಗಿರಿ ಜಿಲ್ಲೆ ಬರ ಅಧ್ಯಯನ ನಡೆಸಿದ ಅಮಿತಾಭ್ ಗೌತಮ್ ನೇತೃತ್ವದ ಕೇಂದ್ರ ತಂಡ   

ಯಾದಗಿರಿ: ಒಂದು ಗಂಟೆ ತಡವಾಗಿ ಉದ್ಯಾನ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಜಿಲ್ಲೆಗೆ ಬಂದಿಳಿದ ಬರ ಅಧ್ಯಯನ ಕೇಂದ್ರ ತಂಡದ ಅಧಿಕಾರಿಗಳು ಶನಿವಾರ ಜಿಲ್ಲಾಮಟ್ಟದ ಅಧಿಕಾರಿಗಳಿಂದ ಅರೆಬರೆ ಮಾಹಿತಿ ಪಡೆದು ಬರ ಅಧ್ಯಯನಕ್ಕೆ ಮುಂದಾದರು.

ಅಧಿಕಾರಿಗಳನ್ನು ಹೊತ್ತ ಇನ್ನೊವಾ ಕಾರುಗಳು ರಾಯಚೂರು ಸಂಪರ್ಕ ರಾಷ್ಟ್ರೀಯ ಹೆದ್ದಾರಿಯತ್ತ ಮುನ್ನುಗ್ಗಿದವು. ಮೊದಲಿಗೆ ಬಳಿಚಕ್ರ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆಯಡಿ ₹5 ಲಕ್ಷ ವೆಚ್ಚದಲ್ಲಿ ಅನುಷ್ಠಾನಗೊಳಿಸಿರುವ ಕುಡಿಯುವ ನೀರು ಪೂರೈಕೆ ಕಾಮಗಾರಿಯನ್ನು ವೀಕ್ಷಿಸಿದರು.

ಅಧಿಕಾರಿಗಳಿಗೆ ಪ್ರದರ್ಶಿಸುವ ಸಲುವಾಗಿಯೇ ಗ್ರಾಮದಲ್ಲಿ ಒಂದೆರಡು ನಳಗಳನ್ನು ಪಿಡಿಒ ಅಳವಡಿಸಿರುವಂತೆ ಕಂಡುಬಂತು. ಅಧಿಕಾರಿಗಳು ಸಂಚರಿಸುವ ಗ್ರಾಮದ ರಸ್ತೆಯಲ್ಲಿ ಮಾತ್ರ ಸ್ವಚ್ಛತೆ ಕಾಪಾಡಿದಂತಿತ್ತು. ಪ್ರಾಯೋಗಿಕ ಎಂಬಂತೆ ಆ ನಳಗಳಿಗೆ ಬಿಂದಿಗೆ ಇಟ್ಟು ನೀರು ತುಂಬಿಸಿ ಕೇಂದ್ರ ಅಧಿಕಾರಿಗಳಿಗೆ ಅಧಿಕಾರಿಗಳು ಮಾಹಿತಿ ನೀಡಿದರು. ಗ್ರಾಮದ ಉಳಿದ ಕಡೆ ಅಧಿಕಾರಿಗಳು ಹೆಜ್ಜೆ ಹಾಕಿದ್ದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ನೈಜತೆ ಕಾಣುತ್ತಿತ್ತು ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದರು.

ADVERTISEMENT

ಬಳಿಚಕ್ರ ಗ್ರಾಮದಿಂದ ಹೊರಟ ಅಧಿಕಾರಿಗಳ ಸಾಲು ವಾಹನಗಳು ಹೆದ್ದಾರಿ ಬದಿಯ ತೊಗರಿ, ಹತ್ತಿ ಹೊಲಗಳಿಗೆ ಭೇಟಿ ನೀಡಿತು. ಕಿಲ್ಲನಕೇರಾ ಗ್ರಾಮದ ರೈತರಾದ ಗುರುರಾಜ, ರಾಜಶೇಖರ ಅವರುಗಳ ಹೊಲಗಳನ್ನು ಪ್ರವೇಶಿಸಿದ ಕೇಂದ್ರ ತಂಡದ ಅಧಿಕಾರಿಗಳು ಐದು ನಿಮಿಷದಲಿ ಹೊಲ ಪ್ರದಕ್ಷಿಣೆ ಹಾಕಿ ವಾಹನ ಏರಿತು. ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಅವರೇ ರೈತರಿಂದ ಕೇಂದ್ರ ಅಧಿಕಾರಿಗಳಿಗೆ ವಾಸ್ತವ ಸ್ಥಿತಿ ತಿಳಿಸಲು ಮುಂದಾದರು. ಆದರೆ, ರೈತರ ಅಹವಾಲನ್ನು ಕೇಂದ್ರ ತಂಡ ಸಹನೆಯಿಂದ ಆಲಿಸಲು ಮುಂದಾಗಲಿಲ್ಲ.

ಕಿಲ್ಲನಕೇರಾ ರೈತರ ಹೊಲಗಳಿಂದ ಅಧಿಕಾರಿಗಳನ್ನು ನೇರವಾಗಿ ಜಿಲ್ಲೆಯ ಗಡಿಗ್ರಾಮದ ದುಪ್ಪಲ್ಲಿ ಕೆರೆಯತ್ತ ಕರೆದೊಯ್ಯಲಾಯಿತು. ಕುರುಚಲು ಈಚಲ ಗಿಡಮರಗಳ ಮಧ್ಯೆ ಕಾಲುಹಾದಿಯಲ್ಲಿ ಅಧಿಕಾರಿಗಳ ವಾಹನಗಳು ಧೂಳೇಳಿಸುತ್ತಾ ಸಾಗಿದವು. ಕೆರೆ ತಲುಪಿದಾಗ ಕೆರೆಯಂಗಳದಲ್ಲಿ ಸಾಮಿಯಾನ ಸಮೇತ ಕೂಲಿಕಾರ್ಮಿಕರು ಬೆವರು ಬಸಿದು ಹೂಳೆತ್ತುತ್ತಿರುವ ದೃಶ್ಯ ಕಾಣಿಸಿತು.

ಭರ್ರನೆ ಸದ್ದು ಮಾಡುತ್ತಿದ್ದ ಟ್ರ್ಯಾಕ್ಟರ್‌ಗಳು ಅಧಿಕಾರಿಗಳ ವಾಹನಗಳನ್ನು ಕಂಡಕೂಡಲೇ ಮತ್ತಷ್ಟು ಚುರುಕು ಪಡೆದವು. ಜಾಬ್‌ಕಾರ್ಡ್‌ ಹೊಂದಿರುವ ಕೂಲಿಕಾರ್ಮಿಕರು ಲಗುಬಗೆಯಿಂದ ಹೂಳೆತ್ತಲು ಶುರು ಮಾಡಿದರು. ಇದನ್ನೆಲ್ಲಾ ಕಂಡ ಕೇಂದ್ರ ತಂಡದ ಅಧಿಕಾರಿಗಳು ಮುಖ ಅರಳಿಸಿದರು.

ಬರ ಅಧ್ಯಯನದ ಅಂತಿಮ ಘಟ್ಟದಲ್ಲಿ ಇರುವುದು ಅರಿತ ಜಿಲ್ಲಾಧಿಕಾರಿ ಕೇಂದ್ರ ತಂಡದ ಮುಖ್ಯಸ್ಥ ಅಮಿತಾಭ್ ಗೌತಮ್‌ ಅವರಿಗೆ ನರೇಗಾ ಸಾಧನೆ ಕುರಿತು ಅಂಕಿಅಂಶ ನೀಡತೊಡಗಿದರು. ಜಿಲ್ಲಾಧಿಕಾರಿಯೇ ಅಲ್ಲಿನ ಕೂಲಿಕಾರ್ಮಿಕರನ್ನು ಅಹವಾಲು ಇದ್ದರೆ ಹೇಳಿಕೊಳ್ಳುವಂತೆ ಅವಕಾಶ ಕಲ್ಪಿಸಿದರು. ಇದರಿಂದಾಗಿ, ಕೂಲಿಕಾರ್ಮಿಕರು ನಿರಂತರ ಉದ್ಯೋಗ ಕಲ್ಪಿಸುವಂತೆ ಕೇಂದ್ರ ತಂಡದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.

ಕೆರೆಯಂಗಳದಲ್ಲಿ ಹತ್ತು ನಿಮಿಷ ಇದ್ದ ಬರ ಅಧ್ಯಯನ ಕೇಂದ್ರ ತಂಡ ನಂತರ ರಾಯಚೂರಿನತ್ತ ಪಯಣ ಬೆಳೆಸಿತು.


ಬಾಕ್ಸ್
ಕೂಲಿ ದರ ಹೆಚ್ಚಿಸಲು ಆಗ್ರಹ

ನರೇಗಾ ಯೋಜನೆಯನ್ನು ಈಗ ಆರಂಭಿಸಲಾಗಿದೆ. ಅದರಲ್ಲಿ ಕೂಲಿಕಾರರೊಬ್ಬರಿಗೆ ₹230 ನೀಡಲಾಗತ್ತಿದೆ. ಖಾಸಗಿ ಕೂಲಿ ದಿನಕ್ಕೆ ₹350ರಿಂದ 450ರವರೆಗೆ ಇದೆ. ನರೇಗಾ ಕೂಲಿಯಿಂದ ಬಡ ಜನರಿಗೆ ಉಪಯೋಗವಿಲ್ಲ; ಹೊಟ್ಟೆಯೂ ತುಂಬಲ್ಲ ಎಂದು ದುಪ್ಪಲ್ಲಿ ಕೆರೆಹೂಳೆತ್ತುತ್ತಿದ್ದ ಕಾಳಪ್ಪ ಬಡಿಗೇರ ಅಸಮಾಧಾನ ತೋಡಿಕೊಂಡರು.

ಕೇಂದ್ರ ತಂಡದ ಅಧಿಕಾರಿಗಳ ಬಳಿ ಅಹವಾಲು ಸಲ್ಲಿಸಬೇಕು ಎಂದುಕೊಂಡಿದ್ದೇವು. ಆದರೆ, ಅದಕ್ಕೆ ಅಧಿಕಾರಿಗಳು ಅವಕಾಶ ನೀಡಲಿಲ್ಲ. ಸ್ಥಿತಿಗತಿ ಪರಿಶೀಲಿಸಲು ಬಂದ ಅಧಿಕಾರಿಗಳಿಗಾದರೂ ನೈಜತೆ ಬಗ್ಗೆ ಕಿಂಚಿತ್ತೂ ಅರಿವಿಲ್ಲ. ಅಧಿಕಾರಿಗಳು ಕೊಟ್ಟ ಮಾಹಿತಿ ಪಡೆದು ಸರ್ಕಾರಕ್ಕೆ ಮುಟ್ಟಿಸುವ ಇಂಥಾ ನೂರಾರು ತಂಡಗಳು ಭೇಟಿ ನೀಡಿದ್ದರೂ, ನಮ್ಮ ಬದುಕು ಬದಲಾಗಿಲ್ಲ’ ಎಂದು ಬೇಸರ ತೋಡಿಕೊಂಡರು.

ಜಿಲ್ಲಾಡಳಿತ ಕೂಲಿದರ ಹೆಚ್ಚಿಸಬೇಕು. ದಿನವಿಡೀ ಬೆವರು ಸುರಿಸಿ ದುಡಿಯುವ ಕಾರ್ಮಿಕರಿಗೆ ಅಲ್ಪ ದರದ ಕೂಲಿ ನೀಡುವುದು ಯಾವ ನ್ಯಾಯ? ಕೂಲಿ ದರ ಹೆಚ್ಚಿಸದಿದ್ದರೆ ಕೂಲಿಕಾರ್ಮಿಕರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೇಂದ್ರ ತಂಡಕ್ಕೂ ಸಮಯ ನಿಗದಿ ಇರುತ್ತೆ

ಕೇಂದ್ರ ತಂಡಕ್ಕೂ ಸಮಯ ಪಾಲನೆ ನಿಗದಿಪಡಿಸಲಾಗಿರುತ್ತದೆ. ಹಾಗಾಗಿ, ಹಾದಿಬದಿಯ ಹೊಲಗಳನ್ನೇ ಅಧ್ಯಯನಕ್ಕೆ ಆಯ್ಕೆಗೊಳಿಸಲಾಗುತ್ತದೆ. ಉಳಿದಂತೆ ಜಿಲ್ಲಾಡಳಿತ ಸರ್ವೆ ತಂಡ ನೀಡಿದ ವರದಿಯನ್ನು ಅಧ್ಯಯನಕ್ಕೆ ಪರಿಶೀಲಿಸುತ್ತಾರೆ. ಇಡೀ ಜಿಲ್ಲೆಯಲ್ಲಿ ಸಂಚರಿಸಿ ಅನಾವೃಷ್ಟಿ ಅಧ್ಯಯನ ಮಾಡಲು ಅವರಿಗೂ ಸಾಧ್ಯವಾಗುವುದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.