ADVERTISEMENT

ಯಾದಗಿರಿ | 'ಸಮಸಮಾಜದ ನಿರ್ಮಾಣಕ್ಕೆ ಬಸವಣ್ಣ ಶ್ರಮ'

ಜಿಲ್ಲಾಡಳಿತದಿಂದ ವಿಶ್ವಗುರು ಬಸವಣ್ಣ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 14:38 IST
Last Updated 30 ಏಪ್ರಿಲ್ 2025, 14:38 IST
ಯಾದಗಿರಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಲಾಯಿತು
ಯಾದಗಿರಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಲಾಯಿತು   

ಯಾದಗಿರಿ: ‘ಸಮಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ ವಿಶ್ವಗುರು ಬಸವಣ್ಣನವರು ಎಲ್ಲ ಸಮಾಜದ ಏಳ್ಗೆ ಮೂಲಕ ಯಾದಗಿರಿಸಮಾನತೆ ತರಲು ಹೋರಾಡಿದರು’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ವೀರಶೈವ ಮಹಾಸಭಾ, ವಿವಿಧ ಸಂಘ–ಸಂಸ್ಥೆಗಳು ಹಾಗೂ ಇಲಾಖೆಗಳ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಿ ಅವರು ಮಾತನಾಡಿದರು.

‘12ನೇ ಶತಮಾನದಲ್ಲಿಯೇ ಸಮಸಮಾಜದ ನಿರ್ಮಾಣಕ್ಕೆ ಹೋರಾಡಿದ ಬಸವಣ್ಣನವರು ಅನುಭವ ಮಂಟಪದ ಮೂಲಕ ಎಲ್ಲ ಸಮಾಜದವರಿಗೆ ಒಗ್ಗೂಡಿಸಿ ಸಮಾನತೆ ತರಲು ಹೋರಾಡಿದರು’ ಎಂದು ಹೇಳಿದರು.

ADVERTISEMENT

‘ಬಸವಣ್ಣ ಜಾತಿ, ವರ್ಣಭೇದ, ವರ್ಗ ಭೇದ ಸಂದರ್ಭದ ಪರಿಸ್ಥಿತಿಗಳಲ್ಲಿ ತಮ್ಮ ವಚನಗಳ ಮೂಲಕ ಸಾಮಾಜಿಕ ಸಮಾನತೆ ತರಲು ಶ್ರಮಿಸಿದರು. ಎಲ್ಲ ಜಾತಿಗಳ, ಧರ್ಮೀಯರನ್ನು ಒಗ್ಗೂಡಿಸಿದರು. ಅಂತಹ ಮಹಾನ್ ಚೇತನರ ವಚನಗಳು ಮನಃ ಪರಿವರ್ತನೆಗೆ ನೆರವಾಗಲಿದ್ದು, ಇಂದಿನ ಸಮುದಾಯ ಹಾಗೂ ಸಮಾಜಕ್ಕೆ ಉಪಯುಕ್ತ ಸಂದೇಶಗಳಾಗಿವೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಮಾತನಾಡಿ, ‘12ನೇ ಶತಮಾನದಲ್ಲಿಯೇ ಸಮಾನತೆ ಸಾರಿದ ಬ‌ಸವಣ್ಣನವರು ವಿಶ್ವಕ್ಕೆ ಸಮಾನತೆ ಪರಿಕಲ್ಪನೆ ತೋರಿ, ವಿಶ್ವಗುರು ಆಗಿದ್ದಾರೆ. ಸಮಾನತೆ, ಕಾಯಕವೇ ಕೈಲಾಸ, ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿದ ಸಮಾಜ ಸುಧಾರಕರಾಗಿದ್ದಾರೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ ಸುಭಾಶ್ಚಂದ್ರ ಕೌಲಗಿ ಅವರು, ಬಸವಣ್ಣನವರ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ, ಇಂದಿನ ಯುವ ಸಮುದಾಯಕ್ಕೆ ದಾರಿದೀಪವಾಗಿವೆ. ಸರ್ವ ಸಮಾಜದ ಸಂಘಟನಾ ಚತುರರು, ಕಾಯಕ ನಿಷ್ಠೆ, ವಿಶ್ವಕ್ಕೆ ಸಮಾನತೆ ಬೋಧಿಸಿದ ದಿವ್ಯ ಚೇತನರಾಗಿದ್ದಾರೆ. ಅವರ ವಚನಗಳು ಹಾಗೂ ತತ್ವ ಆದರ್ಶಗಳು ಇಂದಿನ ಯುವಜನತೆಗೆ ದಾರಿದೀಪವಾಗಿವೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ವಿಶ್ವನಾಥ್ ಕಾಜಗಾರ್, ರಮೇಶ್ ದೊಡಮನಿ, ಸದಾಶಿವಪ್ಪ ಚಂದನಕೇರಿ, ಸಿದ್ದಪ್ಪ ಹೊಟ್ಟಿ, ಅನ್ನಪೂರ್ಣ ಜವಳಿ, ಅನ್ನಪೂರ್ಣ ಸಿ.ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಉಪವಿಭಾಗಾಧಿಕಾರಿ ಹಂಪಣ್ಣ ಸಜ್ಜನ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನಾಯಕ ಮಾಲಿಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ವಿಜಯಕುಮಾರ್ ಮಡ್ಡೆ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಚನ್ನಪ್ಪಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ ಉಪಸ್ಥಿತರಿದ್ದರು.

ಉಪನ್ಯಾಸಕರಾದ ಸಿದ್ದರಾಜ ರೆಡ್ಡಿ ನಿರೂಪಿಸಿ, ವಂದಿಸಿದರು.

ಯಾದಗಿರಿಯಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ ಸಾಧಕರನ್ನು ಸನ್ಮಾನಿಸಲಾಯಿತು
ವಿಶ್ವಗುರು ಬಸವೇಶ್ವರ ಜಯಂತಿ ನಿಮಿತ್ತವಾಗಿ ಬುಧವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಯುವ ಘಟಕದಿಂದ ಯಾದಗಿರಿಯಲ್ಲಿ ಕಾರು ಬೈಕ್‌ ರ‍್ಯಾಲಿ ಹಮ್ಮಿಕೊಳ್ಳಲಾಯಿತು

ಎಲ್ಲ ಜಾತಿ ಧರ್ಮದವರನ್ನು ಅನುಭವ ಮಂಟಪ ಮೂಲಕ ಒಟ್ಟುಗೂಡಿಸಿದ ಬಸವಣ್ಣನವರ ಆದರ್ಶಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ

-ಲಲಿತಾ ಅನಪುರ ಯಾದಗಿರಿ ನಗರಸಭೆ ಅಧ್ಯಕ್ಷೆ

ಬೈಕ್‌ ಕಾರು ರ‍್ಯಾಲಿ

ಯಾದಗಿರಿ: ಬಸವೇಶ್ವರ ಜಯಂತಿ ನಿಮಿತ್ತ ಬುಧವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಯುವ ಘಟಕದಿಂದ ನಗರದಲ್ಲಿ ಬೈಕ್‌ ಕಾರು ರ‍್ಯಾಲಿ ಹಮ್ಮಿಕೊಳ್ಳಲಾಯಿತು. ನಗರದ ಗಂಜ್ ಪ್ರದೇಶದಲ್ಲಿರುವ ಬಸವೇಶ್ವರ ನಾಮಫಲಕದ ಬಳಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಸಮಾಜದ ಯುವ ಮುಖಂಡ ಮಹೇಶರೆಡ್ಡಿ ಮುದ್ನಾಳ ಅವರು ಕಾರು ರ‍್ಯಾಲಿಗೆ ಚಾಲನೆ ನೀಡಿದರು. ಈ ವೇಳೆ ಎಲ್ಲೆಡೆ ಸಾಂಸ್ಕೃತಿಕ ನಾಯಕ ಬಸವೇಶ್ವರ ಅವರಿಗೆ ಜಯಘೋಷ ಮೊಳಗಿತು. ಗಂಜ್ ಪ್ರದೇಶದಿಂದ ಮಹಾತ್ಮ ಗಾಂಧಿ ವೃತ್ತ ಸುಭಾಷ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರಗೆ ಕಾರು ಮೆರವಣಿಗೆ ನಡೆಸಲಾಯಿತು. ಈ ವೇಳೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುರೇಶ್ ಜಾಕಾ ಯುಡಾ ಅಧ್ಯಕ್ಷ ವಿನಾಯಕ ಪಾಟೀಲ ಮುಖಂಡರಾದ ನಾಗರತ್ನ ಕುಪ್ಪಿ ರುದ್ರಗೌಡ ಪಾಟೀಲ ಬಸವರಾಜ ಸೊನ್ನದ ವೀಣಾ ಮೋದಿಶಿವಪುತ್ರ ಪಾಟೀಲ ಅಪ್ಪಣ್ಣ ಜೈನ್ ಶರಣಗೌಡ ಪಾಟೀಲ ರಮೇಶ್ ದೊಡ್ಡಮನಿ ಲಿಂಗಪ್ಪ ಹತ್ತಿಮನಿಹಣಮಂತ ಇಟಗಿ ಸುರೇಶ್ ಬಾಡದ್ ಸುಭಾಷ್ ದೇವದುರ್ಗ ಶರಣು ಪಡಶೆಟ್ಟಿ ಸುಗು ಚಾಮಾ ಸುರೇಶ್ ರಾಯಚೂರು ಭರತ್ ಸುನೀಲ್ ವಾರದ ಸಂಗಮೇಶ ಪಾಣಿ ಸಚಿನ್ ಪಡಶೆಟ್ಟಿ ವಿನೋದ್ ಪಡಶೆಟ್ಟಿ ವಿಶ್ವ ಗಣಪುರ ಪ್ರಭು ನಾಗು ಸಜ್ಜನ್ ಅರವಿಂದ ಕೆಂಭಾವಿ ಶಶಾಂಕ ಕೆಂಭಾವಿ ಅನೀಲ್ ಪಾಟೀಲ ನಾಗು ಲದ್ದಿ ವಿಶ್ವ ಕಾಜಗಾರ್ ನವೀನ್ ಕುಮಾರ್ ನಾಗು ಮೈಲಾಪುರ ಪವನ್ ಮೈಲಾಪುರ ಮೌನೇಶ ಪಾಟೀಲ ವಿರುಪಾಕ್ಷಿ ಸ್ವಾಮಿ ವಿಶ್ವನಾಥ ಕಾಜಗಾರ್ ಸೂರ್ಯಕಾಂತ ಕರದಳ್ಳಿ ಅನೀಲ ಪಸಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.