ADVERTISEMENT

ಹಿಂಸಾಚಾರ: ಬಿಜೆಪಿ ಮೌನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಮೇ 2021, 5:05 IST
Last Updated 6 ಮೇ 2021, 5:05 IST
ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರ ಖಂಡಿಸಿ ಯಾದಗಿರಿ ನಗರದ ಸುಭಾಷ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಬುಧವಾರ ಮೌನಪ್ರತಿಭಟನೆ ನಡೆಸಿದರು.
ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರ ಖಂಡಿಸಿ ಯಾದಗಿರಿ ನಗರದ ಸುಭಾಷ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಬುಧವಾರ ಮೌನಪ್ರತಿಭಟನೆ ನಡೆಸಿದರು.   

ಯಾದಗಿರಿ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾದ ಮೇಲೆ ಅಲ್ಲಿನ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಗರ ಘಟಕದ ಕಾರ್ಯಕರ್ತರು ಬುಧವಾರ ನಗರದ ಸುಭಾಷ ವೃತ್ತದಲ್ಲಿ ಮೌನ ಪ್ರತಿಭಟನೆ ನಡೆಸಿದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದೇವಿಂದ್ರನಾಥ ನಾದ ಮಾತನಾಡಿ, ಪಶ್ಚಿಮ ಬಂಗಾಳದಲ್ಲಿ 75 ಅಭ್ಯರ್ಥಿಗಳು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಅಲ್ಲದೆ 90ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕೇವಲ ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗಳು ಸೋತಿದ್ದಾರೆ. ಬಂಗಾಳದ ಜನರು ಬಿಜೆಪಿ ಮೇಲೆ ವಿಶ್ವಾಸವಿಟ್ಟಿದ್ದಾರೆ. ಇದನ್ನು ಸಹಿಸಲಾಗದ ತೃಣಮೂಲ ಕಾಂಗ್ರೆಸ್‌ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸುತ್ತಿದೆ ಎಂದು ದೂರಿದರು.

ಯುಡಾ ಅಧ್ಯಕ್ಷ ಬಸವರಾಜ ಚಂಡ್ರಿಕಿ ಮಾತನಾಡಿ, ಬಿಜೆಪಿಯು ದ್ವೇಷ ಮತ್ತು ಸ್ವಾರ್ಥ ರಾಜಕೀಯದಲ್ಲಿ ನಂಬಿಕೆ ಇಟ್ಟಿಲ್ಲ. ಚುನಾವಣೆಯಲ್ಲಿ ತೀವ್ರ ಪೈಪೋಟಿ ನಡೆದಿದ್ದರೂ ಈ ರೀತಿ ಮಾಡುವುದು ಖಂಡನೀಯ ಎಂದರು.

ADVERTISEMENT

ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವೆಂಕಟರೆಡ್ಡಿ ಅಬ್ಬೆತುಮಕೂರ, ನಗರಭೆ ಅಧ್ಯಕ್ಷ ವಿಲಾಸ ಪಾಟೀಲ್, ನಗರಸಭೆ ಸದಸ್ಯ ಸುರೇಶ ಅಂಬಿಗೇರ, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ದೇವೀಂದ್ರಪ್ಪ ಖಾನಾಪುರ, ನಗರಸಭೆ ಸದಸ್ಯರಾದ ಸ್ವಾಮಿದೇವ ದಾಸನಕೇರಿ, ಸುನಿತಾ ಚವ್ಹಾಣ, ಶಕುಂತಲ ಜಿ.ಮಲ್ಲನಗೌಡ, ದೀಪಕ ಪೊದ್ದಾರ, ಹಣಮಂತ ವಲ್ಯಾಪುರೆ, ಶಿವರಾಜ ದಾಸನಕೇರ, ಸಾಬು ಚಂಡ್ರಿಕಿ, ಪರವೀನಬೇಗಂ, ಇಮಾನುವೇಲ್ ಜಿಮ್ಮಿ, ಗುರು ಗುರುಸಣಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.