ADVERTISEMENT

ಯಾದಗಿರಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪ್ರತಿಭಟನೆ

‘ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ’ ಹೇಳಿಕೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2021, 15:27 IST
Last Updated 3 ನವೆಂಬರ್ 2021, 15:27 IST
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ‘ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ’ ಎಂಬ ಹೇಳಿಕೆ ಖಂಡಿಸಿ ಯಾದಗಿರಿಯಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಎಸ್‌ಸಿ ಮೋರ್ಚಾ ವತಿಯಿಂದ‍ ಬೃಹತ್ ಪ್ರತಿಭಟನೆ ಮಾಡಿ ಪ್ರತಿಕೃತಿ ದಹನ ಮಾಡಲಾಯಿತು
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ‘ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ’ ಎಂಬ ಹೇಳಿಕೆ ಖಂಡಿಸಿ ಯಾದಗಿರಿಯಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಎಸ್‌ಸಿ ಮೋರ್ಚಾ ವತಿಯಿಂದ‍ ಬೃಹತ್ ಪ್ರತಿಭಟನೆ ಮಾಡಿ ಪ್ರತಿಕೃತಿ ದಹನ ಮಾಡಲಾಯಿತು   

ಯಾದಗಿರಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ‘ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ’ ಎಂಬ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಜಿಲ್ಲಾ ಎಸ್‌ಸಿ ಮೋರ್ಚಾ ವತಿಯಿಂದ‍ ನಗರದ ಸುಭಾಷ್ ವೃತ್ತದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ ಪ್ರತಿಕೃತಿ ದಹನ ಮಾಡಿದರು.

ಶಾಸಕ ವೆಂಕಟರೆಡ್ಡಿ ಮುದ್ನಾಳ ಮಾತನಾಡಿ, ಪರಿಶಿಷ್ಟರೊಬ್ಬರು ಮುಖ್ಯಮಂತ್ರಿಯಾಗಬೇಕೆಂಬ ಚರ್ಚೆ ನಡೆಯುತ್ತಿದ್ದಾಗ ಕಾಂಗ್ರೆಸ್ ಪ್ರವೇಶ ಪಡೆದ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ 257 ಮತಗಳ ಅಂತರದಲ್ಲಿ ಗೆದ್ದ ನೀವು ಬಹುದೊಡ್ಡ ನಾಯಕರಾ? ಎಂದು ಪ್ರಶ್ನಿಸಿದರು.

ಶ್ರೀನಿವಾಸ ಪ್ರಸಾದ್, ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್‌, ಮಹಾದೇವಪ್ಪ ಮುಂತಾದ ಪರಿಶಿಷ್ಟ ನಾಯಕರು ಇಲ್ಲದಿದ್ದರೆ ನೀವು ಅಂದೇ ರಾಜಕೀಯದಿಂದ ಕಳೆದು ಹೋಗುತ್ತಿದ್ದೀರಿ. ನೀವೆಷ್ಟು ಕಳಪೆ ನಾಯಕ ಎಂಬುದು ನಿಮ್ಮ ಕ್ಷೇತ್ರದ ಜನರಿಗೆ ಗೊತ್ತಿತ್ತು. ಆದ್ದರಿಂದಲೇ 2018 ರಲ್ಲಿ ನಿಮ್ಮನ್ನು ಹೀನಾಯವಾಗಿ ಸೋಲಿಸಿ ಕಳುಹಿಸಿದರು. 2008 ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಖರ್ಗೆಯವರನ್ನು ಆವತ್ತೇ ತುಳಿದು ಇಲ್ಲಿಂದ ಓಡಿಸಿದಿರಿ. ಡಾ. ಪರಮೇಶ್ವರ್ ಅವರಿಗೆ ಅವಕಾಶ ಸಿಗಬಾರದೆಂದು ಅವರನ್ನು ಸೋಲಿಸಿದಿರಿ’ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರಡ್ಡಿ, ‘ಸಿದ್ದರಾಮಯ್ಯನವರೇ ನೀವು ಕಾಂಗ್ರೆಸ್‍ನವರಲ್ಲ; ನೀವೆಲ್ಲೋ ಜನತಾದಳದಲ್ಲಿ ಇದ್ದವರು. ನೀವು ಕಾಂಗ್ರೆಸ್‍ಗೆ ಹೋಗಿದ್ದೀರಿ. ನೀವು ಯಾವ ಪಾಡಿಗಾಗಿ ಹೋಗಿದ್ದೀರೆಂದು ಸ್ಪಷ್ಟಪಡಿಸಿ’ ಎಂದು ಸವಾಲೆಸೆದರು.

ADVERTISEMENT

ಪರಿಶಿಷ್ಟರ ಬಗ್ಗೆ ಈ ರೀತಿ ಅವಹೇಳನಕಾರಿ ಮಾತನಾಡಲು ನಿಮಗೆ ಯಾವರೀತಿಯ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವೇಂದ್ರನಾಥ ನಾದ್ ಮಾತನಾಡಿ, ಪರಿಶಿಷ್ಟರಿಗೆ ಅವಮಾನಕರ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಅವರು ಕ್ಷಮೆ ಕೇಳಬೇಕು. ಪರಿಶಿಷ್ಟರ ಬಗ್ಗೆ ಇಲ್ಲದ ಸಲ್ಲದ ಮಾತುಗಳನ್ನು ಆಡಿರುವುದು ಯಾರಿಗೂ ಶೋಭೆ ತರುವುದಿಲ್ಲ. ಇಂಥ ನಾಯಕರಿಂದಲೇ ಕಾಂಗ್ರೆಸ್‌ ಅಧಃಪತನಕ್ಕೆ ಇಳಿದಿದೆ. ಇನ್ನಾದರೂ ಕಾಂಗ್ರೆಸ್‌ಗೆ ಬುದ್ಧಿ ಬರಲಿ. ದೇಶದಲ್ಲಿ ಹೇಳ ಹೆಸರಿಲ್ಲದ ಪಕ್ಷಕ್ಕೆ ಜನರೇ ಬುದ್ಧಿ ಕಲಿಸಲಿದ್ದಾರೆ ಎಂದರು.

ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯಕರಣಿ ಸದಸ್ಯ ಪರುಶುರಾಮ ಕುರಕುಂದ ಮಾತನಾಡಿ, ಪರಿಶಿಷ್ಟರು ಮುಖ್ಯಮಂತ್ರಿ ಆಗಬೇಕೆಂಬ ದೊಡ್ಡ ಕೂಗೆದ್ದಾಗ ‘ನಾನೇ ದಲಿತ, ನನಗಿಂತ ದೊಡ್ಡ ದಲಿತ ಬೇಕಾ’ ಎಂಬ ಪ್ರಶ್ನೆ ಹಾಕಿದ ನಿಮ್ಮ ಅಹಿಂದಕ್ಕೆ ಏನು ಅರ್ಥವಿದೆ ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದರು. ಮಗನ ಭವಿಷ್ಯಕ್ಕಾಗಿ ಮತ್ತು ಸ್ವಾರ್ಥಕ್ಕಾಗಿ ನೀವು ಕಾಂಗ್ರೆಸ್‍ನಲ್ಲಿದ್ದೀರಿ ಎಂದು ಆಪಾದಿಸಿದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವೆಂಕಟರಡ್ಡಿ ಅಬ್ಬೆತುಮಕೂರ, ಗುರು ಕಾಮಾ, ಖಂಡಪ್ಪ ದಾಸನ್‌, ನಗರ ಸಭೆ ಅಧ್ಯಕ್ಷ ವಿಲಾಸ ಪಾಟೀಲ, ಯುಡಾ ಅಧ್ಯಕ್ಷ ಬಸವರಾಜ ಚಂಡ್ರಕಿ, ನಗರಸಭೆ ಸದಸ್ಯರಾದ ಹಣಮಂತ ಇಟಗಿ, ಸ್ವಾಮಿದೇವ ದಾಸನಕೇರಿ, ಗೊಪಾಲ ದಾಸನ್‌, ಸುನಿತಾ ಚವಾಣ್‌, ರುದ್ರಗೌಡ ಪಾಟೀಲ, ವೀಣಾ ಮೋದಿ, ಶೇಖರ್ ದೋರಿ, ಶಕುಂತಲಾ ಜಿ, ಶಂಕರ್ ಸೋನಾರ, ದೇವಿಂದ್ರ ಕೋನೆರ, ಚಂದ್ರು ಯಾಳಗಿ, ಸಿದ್ದಮ್ಮ ಯಲಗೋಡ, ರಮಾದೇವಿ ಕವಲಿ, ಲಕ್ಷ್ಮಿ ಕುಂಸಿ, ಶಂಕರ್ ಕರಣಗಿ, ಶಿವರಾಜ್ ದಾಸನಕೇರಿ, ಚಂದ್ರು ಮುಂಡರಗಿ, ಶರಣಪ್ಪ ಗುಳಬಾಳ, ಸೋಪಣ್ಣ ಶಹಾಪುರ, ಶಾಂತಪ್ಪ ಚವಾಣ್‌, ಹಣಮಂತಪ್ಪ ಇದ್ದರು.

***

ದಲಿತರಿಗೆ ಅವಮಾನಕರ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಅವರು ಕ್ಷಮೆ ಕೇಳಬೇಕು. ದಲಿತರ ಬಗ್ಗೆ ಇಲ್ಲದ ಸಲ್ಲದ ಮಾತುಗಳನ್ನು ಆಡಿರುವುದು ಯಾರಿಗೂ ಶೋಭೆ ತರುವುದಿಲ್ಲ

ದೇವೇಂದ್ರನಾಥ ನಾದ್‌, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.