ADVERTISEMENT

ಕಲಬುರಗಿ: ‘ಸಾಹಿತ್ಯ ಕೃತಿಗಳು ಸಹಿಷ್ಣುತೆ ಬೆಳೆಸಬೇಕು’

ಸಿದ್ಧಲಿಂಗೇಶ್ವರ ಬುಕ್ ಡಿಪೊ, ಪ್ರಕಾಶನದ ವಾರ್ಷಿಕೋತ್ಸವ; 115 ಪುಸ್ತಕಗಳ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 8:52 IST
Last Updated 26 ಮಾರ್ಚ್ 2023, 8:52 IST
ಸಿದ್ಧಲಿಂಗೇಶ್ವರ ಬುಕ್‌ ಡಿಪೋ ಮತ್ತು ಪ್ರಕಾಶನದ 46ನೇ ವಾರ್ಷಿಕೋತ್ಸವದಲ್ಲಿ ಕೇಂದ್ರೀಯ ವಿ.ವಿ. ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು 115 ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು. ಪ್ರಕಾಶನದ ಸಂಸ್ಥಾಪಕ ಬಸವರಾಜ ಜಿ. ಕೊನೇಕ, ಗುಲಬರ್ಗಾ ವಿ.ವಿ. ಕುಲಸಚಿವ ಬಿ. ಶರಣಪ್ಪ ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಬಡದಾಳ ತೇರಿನಮಠದ ಡಾ. ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು, ಸಾಹಿತಿ ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಕೇಂದ್ರೀಯ ವಿ.ವಿ. ಕುಲಸಚಿವ ಪ್ರೊ.ಬಸವರಾಜ ಡೋಣೂರ ಇದ್ದರು –ಪ್ರಜಾವಾಣಿ ಚಿತ್ರ
ಸಿದ್ಧಲಿಂಗೇಶ್ವರ ಬುಕ್‌ ಡಿಪೋ ಮತ್ತು ಪ್ರಕಾಶನದ 46ನೇ ವಾರ್ಷಿಕೋತ್ಸವದಲ್ಲಿ ಕೇಂದ್ರೀಯ ವಿ.ವಿ. ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು 115 ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು. ಪ್ರಕಾಶನದ ಸಂಸ್ಥಾಪಕ ಬಸವರಾಜ ಜಿ. ಕೊನೇಕ, ಗುಲಬರ್ಗಾ ವಿ.ವಿ. ಕುಲಸಚಿವ ಬಿ. ಶರಣಪ್ಪ ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಬಡದಾಳ ತೇರಿನಮಠದ ಡಾ. ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು, ಸಾಹಿತಿ ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಕೇಂದ್ರೀಯ ವಿ.ವಿ. ಕುಲಸಚಿವ ಪ್ರೊ.ಬಸವರಾಜ ಡೋಣೂರ ಇದ್ದರು –ಪ್ರಜಾವಾಣಿ ಚಿತ್ರ   

ಕಲಬುರಗಿ: ‘ಸಹಿಷ್ಣುತೆಗೆ ಹೆಸರಾದ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಮೂಲಭೂತವಾದಿಗಳು ತಮ್ಮದೇ ಶ್ರೇಷ್ಠವೆನ್ನುವ ಅತಿರೇಕಗಳನ್ನು ಕಾಣುತ್ತಿದ್ದೇವೆ. ಬಹುತ್ವ ಭಾರತದಲ್ಲಿ ಇಂಥ ಬೆಳವಣಿಗೆಗಳು ನಡೆಯಬಾರದು. ಸಾಹಿತ್ಯ ಕೃತಿಗಳು ಮಾನವೀಯ ಗುಣ ಹಾಗೂ ಸಹಿಷ್ಣುತೆ ಬೆಳೆಸಬೇಕು’ ಎಂದು ಸಾಹಿತಿ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಅಭಿಪ್ರಾಯಪಟ್ಟರು.

ನಗರದಲ್ಲಿ ಶನಿವಾರ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ, ಸಿದ್ಧಲಿಂಗೇಶ್ವರ ಪ್ರಕಾಶನ ಹಾಗೂ ಬಸವ ಪ್ರಕಾಶನದ 46ನೇ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ಹೊರತಂದ 115 ಪುಸ್ತಕಗಳ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

‘ಸಾಮಾನ್ಯ ಜನರು ಸಾಮರಸ್ಯದಿಂದ, ಉದಾರವಾಗಿ ಬದುಕುತ್ತಿದ್ದಾರೆ. ಭಿನ್ನಾಭಿಪ್ರಾಯವನ್ನು ಸಹಿಸಿಕೊಳ್ಳಬೇಕು. ಮೂಲಭೂತ ವಾದದ ಅತಿರೇಕಗಳನ್ನು ಒಪ್ಪಿಕೊಳ್ಳಬಾರದು. ಮಾನವನಾಗು ವುದಕ್ಕೆ ಸಾಹಿತ್ಯ ಕೃತಿಗಳ ಓದು, ಒಡನಾಟ ಅವಶ್ಯ’ ಎಂದು ತಿಳಿಸಿದರು.

ADVERTISEMENT

‘ಆಧುನಿಕ ತಂತ್ರಜ್ಞಾನ ಬೆಳೆದಂತೆಲ್ಲ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಓದುವ ಅವಕಾಶ ಲಭ್ಯವಾಗುತ್ತಿದೆ. ಆದರೆ, ಪುಸ್ತಕಗಳನ್ನು ಕೈಯಲ್ಲಿ ಹಿಡಿದುಕೊಂಡು ಓದುವ ಸೊಗಸು ಬೇರೆ ಬಗೆಯ ವಿಧಾನದಲ್ಲಿ ಸಿಗುವುದಿಲ್ಲ. ಲಕ್ಷಗಟ್ಟಲೇ ವೇತನ ಪಡೆಯುವವರೂ ಪತ್ರಿಕೆ ಮತ್ತು ಪುಸ್ತಕಗಳನ್ನು ಕೊಂಡು ಓದುತ್ತಿಲ್ಲ. ಜನರಲ್ಲಿ ಜ್ಞಾನಾರ್ಜನೆಗಾಗಿ, ಸಾಹಿತ್ಯಕ್ಕಾಗಿ ಓದುವಂತಹ ಪ್ರವೃತ್ತಿ ಕಡಿಮೆಯಾಗುತ್ತಿದೆ’ ಎಂದು ವಿಷಾದಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ, ‘ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅತಿ ಪ್ರಾಚೀನ ಪರಂಪರೆ ಭಾರತದಲ್ಲಿದೆ. ವಿಜ್ಞಾನ, ಸಮಾಜ ವಿಜ್ಞಾನ, ಹೊಸ ಬಗೆಯ ಆವಿಷ್ಕಾರಗಳನ್ನು ಪುಸ್ತಕದ ರೂಪದಲ್ಲಿ ದಾಖಲಿಸಿ ಇಡಲಾಗಿದೆ. ಅವುಗಳನ್ನು ನಾವು ಓದುವ ಮೂಲಕ ವಿವಿಧ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗಿದೆ’ ಎಂದರು.

‘ಪ್ರಾಚೀನ ಭಾರತದಲ್ಲಿ ವೈದ್ಯಕೀಯ ಲೋಕದಲ್ಲಿ ವಿವಿಧ ಪ್ರಯೋಗಗಳನ್ನು ಮಾಡಿದ ಸುಶ್ರುತ ಮಹರ್ಷಿಯ ಸಂಶೋಧನೆಗಳ ಬಗ್ಗೆ ತಿಳಿಯಲು ಪುಸ್ತಕಗಳೇ ಆಧಾರವಾಗಿವೆ’ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಮಾತನಾಡಿ, ‘ಹಳಬರು ಇಂದಿನ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವುದು ಕಷ್ಟದ ಕೆಲಸ. ಸ್ಮಾರ್ಟ್ ಫೋನ್ ಇದ್ದರೂ ಕರೆ ಸ್ವೀಕರಿಸಲು, ಕರೆ ಮಾಡಲಷ್ಟೇ ಬಳಕೆ ಮಾಡುತ್ತೇವೆ. ಅದರಿಂದ ಬೇರೆ ಕಡತ ಕಳಸಬೇಕೆಂದರೆ ಮೊಮ್ಮಕ್ಕಳ ಸಹಾಯಕ ಪಡೆಯಬೇಕಾಗಿದೆ. ಪ್ರತಿ ಬಾರಿ ಹೀಗೆ ಕೇಳಿದಾಗಲೂ ಹಿರಿಯರು ದಡ್ಡರು ಎಂದೇ ಭಾವಿಸುವ ಅಪಾಯವಿದೆ’ ಎಂದು ಚಟಾಕಿ ಹಾರಿಸಿದರು.

ಕೇಂದ್ರೀಯ ವಿ.ವಿ. ಕುಲಸಚಿವ ಪ್ರೊ. ಬಸವರಾಜ ಡೋಣೂರ ಮಾತನಾಡಿ, ‘ವೇದ, ವಚನ ಎರಡೂ ಸೇರಿ ಕೆಲಸ ಮಾಡಬೇಕಿದೆ. ಎಲ್ಲ ವಿಚಾರ, ಸಿದ್ಧಾಂತಗಳು ಸೇರಿ ದೇಶವನ್ನು ಕಟ್ಟಬೇಕಿದೆ. ನಾವೆಲ್ಲ ಒಂದು ದೇಶದ ನಾಗರಿಕರು ಎಂದುಕೊಂಡು ಮುಂದೆ ಹೋಗಬೇಕು. ಲೇಖಕರಿಗೆ ದೇಶ ಕಟ್ಟುವ ಜವಾಬ್ದಾರಿ ಇದೆ. ಲೇಖಕರ ಎಲ್ಲ ಪ್ರಯತ್ನ, ಮಾತು, ಯೋಜನೆ, ಕಾರ್ಯಕ್ರಮಗಳು ಬಲಿಷ್ಠ ನಾಡು, ನುಡಿಯನ್ನು ಕಟ್ಟುವಲ್ಲಿ ತೊಡಗು ವಂತಿರಬೇಕು’ ಎಂದು ತಿಳಿಸಿದರು.

ಬಡದಾಳ ತೇರಿನಮಠದ ಡಾ. ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಿದ್ಧಲಿಂಗೇಶ್ವರ ಬುಕ್ ಡಿಪೊ ಮತ್ತು ಪ್ರಕಾಶನದ ಸಂಸ್ಥಾಪಕ ಬಸವರಾಜ ಜಿ. ಕೊನೇಕ ವೇದಿಕೆಯಲ್ಲಿದ್ದರು.

ಪ್ರೊ. ಶಿವರಾಜ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಶೈಲಜಾ ಕೊನೇಕ ಪ್ರಾರ್ಥನೆ ಗೀತೆ ಹಾಡಿದರು. ವಚನಾ ಹಾಗೂ ಬಸವಶ್ರೀ ಭರತನಾಟ್ಯ ಪ್ರದರ್ಶನ ನೀಡಿದರು.

ಹಿರಿಯ ಸಾಹಿತಿ ಪ್ರೊ. ಮೂಡ್ನಾಕೂಡು ಚಿನ್ನಸ್ವಾಮಿ, ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ, ಪ್ರೊ. ಸ್ವಾಮಿರಾವ ಕುಲಕರ್ಣಿ, ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಲೇಖಕ ಡಾ.ಚಿ.ಸಿ. ನಿಂಗಣ್ಣ, ನೇ.ತಿ. ಸೋಮಶೇಖರ ಹಾಗೂ ಪ್ರಕಾಶನದ ಸಿಬ್ಬಂದಿ, ಲೇಖಕರು, ಸಾಹಿತ್ಯಾಸಕ್ತರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಲೇಖಕ– ಲೇಖಕಿಯರನ್ನು ಸನ್ಮಾನಿಸಲಾಯಿತು.

ನಳಂದಾ ವಿಶ್ವವಿದ್ಯಾಲಯದಲ್ಲಿ ಇರಿಸಿದ್ದ ಪುಸ್ತಕಗಳ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿದಾಗ ಆ ಬೆಂಕಿ ಸತತವಾಗಿ ಆರು ತಿಂಗಳವರೆಗೆ ಉರಿಯಿತು. ಇದರಿಂದ ಪುಸ್ತಕ ಎಷ್ಟೊಂದು ಪ್ರಮಾಣದಲ್ಲಿರಬಹುದು ಎಂಬುದನ್ನು ಊಹಿಸಬಹುದು

ಪ್ರೊ. ಬಟ್ಟು ಸತ್ಯನಾರಾಯಣ

ಕೇಂದ್ರೀಯ ವಿ.ವಿ. ಕುಲಪತಿ

1990ರ ದಶಕದ ಅಂತ್ಯದಲ್ಲಿ ಕಲಬುರಗಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಲು ಬೇಕಾದ ಪತ್ರಿಕೆಗಳು ಸಿಗುತ್ತಿರಲಿಲ್ಲ. ಅದನ್ನು ಸಾಧ್ಯವಾಗಿಸಿದ್ದು ಹಾಗೂ ಗುಲಬರ್ಗಾ ವಿ.ವಿ.ಯ ಪಠ್ಯಪುಸ್ತಕ ಮುದ್ರಿಸಿದ್ದು ಸಿದ್ಧಲಿಂಗೇಶ್ವರ ಪ್ರಕಾಶನದ ಸಾಧನೆ

ಬಿ. ಶರಣಪ್ಪ

ಗುಲಬರ್ಗಾ ವಿ.ವಿ. ಕುಲಸಚಿವ

ಟಿ.ವಿ. ಚಾನೆಲ್‌ಗಳು ಪ್ರವರ್ಧಮಾನಕ್ಕೆ ಬಂದಾಗ ಪತ್ರಿಕೆಗಳು ಮುಚ್ಚಿ ಹೋಗಲಿವೆ ಎಂದೇ ಭಾವಿಸಿದ್ದರು. ಮುಚ್ಚಿ ಹೋಗುವ ಬದಲು ಪ್ರಸರಣ ಸಂಖ್ಯೆ ಜಾಸ್ತಿಯಾಯಿತು. ಇಂದಿಗೂ ಜನರು ನಂಬುವುದು ಪತ್ರಿಕೆಗಳನ್ನೇ

ರವೀಂದ್ರ ಭಟ್ಟ

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.