ಸುರಪುರ: ‘ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ. ಇದಕ್ಕೆ ಕಾರಣವಾಗುವ ಪೋಷಕರು ಮತ್ತು ಸಂಸ್ಥೆಯವರಿಗೆ ಎರಡು ವರ್ಷ ಸೆರೆಮನೆ ಮತ್ತು ₹ 1 ಲಕ್ಷ ದಂಡ ವಿಧಿಸುವ ಅವಕಾಶವಿದೆ’ ಎಂದು ಪಿಎಸ್‍ಐ ಶರಣಪ್ಪ ಹವಾಲ್ದಾರ ಹೇಳಿದರು.
ತಾಲ್ಲೂಕಿನ ಪೇಠ ಅಮ್ಮಾಪುರ ಮತ್ತು ಜಾಲಿಬೆಂಚಿ ಗ್ರಾಮಗಳ ಶಾಲೆಗಳಲ್ಲಿ ಮಂಗಳವಾರ ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಪ್ರಕಾರ ಹುಡುಗನಿಗೆ ಕನಿಷ್ಠ 21, ಹುಡುಗಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಒಂದು ವೇಳೆ ಬಾಲ್ಯವಿವಾಹ ಮಾಡಲು ಯತ್ನಿಸಿದರೆ ಬಾಲಕಿಯರು ಪ್ರತಿಭಟಿಸಬೇಕು’ ಎಂದು ಸಲಹೆ ನೀಡಿದರು.
‘ಮಕ್ಕಳ ಮೇಲೆ ಲೈಂಗಿಕ ಶೋಷಣೆ ನಡೆದಲ್ಲಿ 2012 ಪೋಕ್ಸೊ ಕಾಯ್ದೆ ಶಿಕ್ಷೆಗೆ ಅವಕಾಶ ಕಲ್ಪಿಸುತ್ತದೆ. ತುರ್ತು ಸಂದರ್ಭಗಳಲ್ಲಿ ದೂ.112ಕ್ಕೆ ಕರೆ ಮಾಡಿ. ಕೆಲವೇ ಸಮಯದಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸುತ್ತಾರೆ’ ಎಂದು ತಿಳಿಸಿದರು.
‘ಅಪರಿಚಿತರು ಅಥವಾ ಯಾರಾದರೂ ಕರೆ ಮಾಡಿ, ನಿಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಒಟಿಪಿ ಕೇಳಿದರೆ ಹಂಚಿಕೊಳ್ಳಬೇಡಿ’ ಎಂದು ಸಲಹೆ ನೀಡಿದರು.
ಎಎಸ್‍ಐ ಮನೋಹರ ರಾಠೋಡ, ಕಾನ್‌ಸ್ಟೆಬಲ್ ದಯಾನಂದ ಜಮಾದಾರ ಮಾತನಾಡಿದರು.
ಮುಖಂಡರು ಮತ್ತು ಪಾಲಕರಾದ ಕಾಳಪ್ಪ ಕವಾತಿ, ಗ್ರಾ.ಪಂ ಅಧ್ಯಕ್ಷ ಬಸವರಾಜ, ಜಾಲಿಬೆಂಚಿ ಶಾಲೆ ಮುಖ್ಯ ಶಿಕ್ಷಕಿ ಪರ್ವಿನ್, ಪೇಠ ಅಮ್ಮಾಪುರ ಸಗರನಾಡು ಶಾಲೆ ಮುಖ್ಯಶಿಕ್ಷಕ ಈರಣ್ಣ, ಸಹ ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.